ಸುಂಟಿಕೊಪ್ಪ, ಜು. 16: ಯೋಗ ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿದ್ದು ಜಾತಿ, ಮತ ಬೇಧವಿಲ್ಲದೆ ಸನಾತನ ಧರ್ಮವಾದ ಹಿಂದೂ ಧರ್ಮವನ್ನು ಒಗ್ಗೂಡಿಸುವ ಕೆಲಸವನ್ನು ಆರ್‍ಎಸ್‍ಎಸ್ ಮಾಡುತ್ತಿದೆ ಎಂದು ಕಾಜೂರಿನ ಕಾಫಿ ಬೆಳೆಗಾರ ಎಸ್.ಎಸ್. ಯೋಗೇಶ್ ಹೇಳಿದರು.

ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಆರ್‍ಎಸ್‍ಎಸ್ ವತಿಯಿಂದ ಆಯೋಜಿಸಲಾಗಿದ್ದ ಗುರು ಪೂಜೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೂಲತಃ ಆರ್‍ಎಸ್‍ಎಸ್ ನಿಂದ ಬೆಳೆದು ಬಂದ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿಯ ಹರಿಕಾರರಾಗಿದು, ವಿಶ್ವವೇ ಮೆಚ್ಚುವ ನಾಯಕರಾಗಿದ್ದಾರೆ. ಆರ್‍ಎಸ್‍ಎಸ್ ನಿಂದ ನೂರಾರು ನರೇಂದ್ರ ಮೋದಿಯಂತಹ ವ್ಯಕ್ತಿಗಳು ಜನ್ಮತಾಳಲಿ ಎಂದು ಅವರು ಹೇಳಿದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಮಂಗಳೂರಿನ ಆರ್‍ಎಸ್‍ಎಸ್ ಸಾಮರಸ್ಯ ವಿಭಾಗದ ಪ್ರಮುಖ ಸುರೇಶ್ ಪೆರ್ಕಳ ಮಾತನಾಡಿ, ಪ್ರತಿಯೊಬ್ಬರೂ ತನಗೋಸ್ಕರ ಬದುಕನ್ನು ಕಟ್ಟಿಕೊಳ್ಳಲು ಬಯಸದೆ ಸಮಾಜಕ್ಕಾಗಿ ಬದುಕಲು ಮುಂದಾಗಬೇಕು. ಸಮಾಜದ ಅಸಮಾನತೆಯನ್ನು ತೊಡೆದುಹಾಕುವಲ್ಲಿ ಆರ್‍ಎಸ್‍ಎಸ್ ಗಮನಾರ್ಹ ಪಾತ್ರವಹಿಸುತ್ತಿದೆ. ಚೀನಾ ತಯಾರಿಸಿದ ಸಾಮಗ್ರಿಗಳನ್ನು ಖರೀದಿಸುವದನ್ನು ಭಾರತೀಯರು ನಿಲ್ಲಿಸಬೇಕು. ಈ ಬಗ್ಗೆ ನಾವು ಎಚ್ಚರದಿಂದ ಇರಬೇಕೆಂದು ಅವರು ಕರೆ ನೀಡಿದರು.

ಸೋಮವಾರಪೇಟೆ ತಾಲೂಕು ಕಾರ್ಯವಾಹಕ ಕೆ.ಎಸ್. ಪದ್ಮನಾಭ ಉಪಸ್ಥಿತರಿದ್ದರು. ಟಿ.ಆರ್. ವಿಜಯ ಸ್ವಾಗತಿಸಿ, ಎಂ.ಎ. ಪ್ರಭಾಕರ ವಂದಿಸಿದರು.