ಸೋಮವಾರಪೇಟೆ,ಜು. 17 : ಕಸ್ತೂರಿ ರಂಗನ್ ವರದಿಯನ್ವಯ ಕೊಡಗಿನ ಹಲವಷ್ಟು ಭಾಗಗಳನ್ನು ಸೂಕ್ಷ್ಮ ಪರಿಸರ ತಾಣವನ್ನಾಗಿ ಘೋಷಿಸುತ್ತಿರುವದಕ್ಕೆ ರಾಷ್ಟ್ರೀಯ ಪಕ್ಷಗಳ ಬೇಜವಾಬ್ದಾರಿತನವೇ ಕಾರಣವಾಗಿದೆ. ಇಂತಹ ಪಕ್ಷಗಳಿಂದ ಕೊಡಗಿಗೆ ಯಾವದೇ ಭದ್ರತೆಯಿಲ್ಲ ಎಂದು ಜೆಡಿಎಸ್ ಮುಖಂಡ, ಮಾಜೀ ಸಚಿವ ಬಿ.ಎ. ಜೀವಿಜಯ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೀವಿಜಯ ಅವರು, ಕರ್ನಾಟಕ, ಗೋವಾ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಕೇರಳ ರಾಜ್ಯಗಳ ಪಶ್ಚಿಮಘಟ್ಟ ಪ್ರದೇಶಗಳನ್ನು ಸೂಕ್ಷ್ಮ ಪರಿಸರತಾಣವನ್ನು ಘೋಷಿಸಲು ಕೇಂದ್ರ ಸರ್ಕಾರ ಮುಂದಾಗಿ 2013ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ಕೇರಳ ಸರ್ಕಾರ ಸ್ಥಳೀಯ ಜನಾಭಿಪ್ರಾಯ ಪಡೆದು ವರದಿಯಿಂದ ಜನವಸತಿ ಪ್ರದೇಶಗಳನ್ನು ಹೊರಗಿಡಲು ಮನವಿ ಮಾಡಿತ್ತು. ಅದರಂತೆ ಕೇರಳ ರಾಜ್ಯ ಸಂಕಷ್ಟದಿಂದ ಪಾರಾಗಿದೆ ಎಂದು ತಿಳಿಸಿದರು.
ಆದರೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಸ್ಥಳೀಯವಾಗಿ ವಾಸ್ತವ ಅರಿಯದೇ ಬೇಜವಾಬ್ದಾರಿಯ ವರದಿ ನೀಡಿದ್ದರಿಂದ ಇದೀಗ ಸೂಕ್ಷ್ಮ ಪರಿಸರ ತಾಣ ಅನುಷ್ಠಾನಗೊಳ್ಳುತ್ತಿದೆ. ಕೊಡಗನ್ನು ಇದರಿಂದ ಪಾರು ಮಾಡುತ್ತೇನೆ. ಸಮಸ್ಯೆಯನ್ನು ತನ್ನ ಹೆಗಲ ಮೇಲೆ ಹಾಕಿ ಎಂದು ಭರವಸೆ ನೀಡಿದ್ದ ಸಂಸದ ಪ್ರತಾಪ್ ಸಿಂಹ ಇದೀಗ ಉಲ್ಟಾ ಹೊಡೆಯುತ್ತಿದ್ದಾರೆ. ಪರಿಸರ ಉಳಿಯಬೇಕು ಜತೆಗೆ ಮನುಷ್ಯರೂ ಉಳಿಯಬೇಕು ಎಂಬ ಚಿಂತನೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಾಡಬೇಕಿತ್ತು. ಇದರಿಂದ ನುಣುಚಿಕೊಂಡ ಪರಿಣಾಮ ಸಮಸ್ಯೆ ಎದುರಿಸುವಂತಾಗಿದೆ ಎಂದು ಜೀವಿಜಯ ವಿಶ್ಲೇಷಿಸಿದರು.
ಇದೀಗ ಅನುಷ್ಠಾನಗೊಂಡಿರುವ ಯೋಜನೆಯನ್ನು ತಡೆಯಲು ಈಗಿನ ಜನಪ್ರತಿನಿಧಿಗಳಿಗೆ ಸಾಧ್ಯವಿಲ್ಲ. ಮೋದಿ ಎದುರು ನಿಂತುಕೊಂಡು ಈ ಬಗ್ಗೆ ಆಗ್ರಹಿಸುವ ತಾಕತ್ತು ಯಾವೊಬ್ಬ ಬಿಜೆಪಿ ಸಂಸದರಿಗೂ ಇಲ್ಲ ಎಂದು ಟೀಕಿಸಿದ ಜೀವಿಜಯ ಅವರು, ರಾಷ್ಟ್ರೀಯ ಪಕ್ಷಗಳಿಂದ ಜನತೆಯ ಹಿತರಕ್ಷಣೆ ಸಾಧ್ಯವಿಲ್ಲ ಎಂದರು.
ಭಾರತದ ಕೆಲ ಪ್ರದೇಶಗಳನ್ನು ಸೂಕ್ಷ್ಮ ಪರಿಸರ ತಾಣವನ್ನಾಗಿ ಘೋಷಿಸುವ ಹಿಂದೆ ಅಮೇರಿಕಾದ ಕೈವಾಡವೂ ಅಡಗಿದೆ. ಮುಂದುವರೆಯುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ ಭಾರತ ಗುರುತಿಸಿಕೊಳ್ಳುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಪಶ್ಚಿಮಘಟ್ಟಗಳ ಸಂರಕ್ಷಣೆಯ ಯೋಜನೆ ತಯಾರಿಸಿದೆ. ಆ ಮೂಲಕ ಈ ಭಾಗಗಳಲ್ಲಿ ಅಭಿವೃದ್ಧಿಗೆ ತಡೆಯೊಡ್ಡುವ ಚಿತಾವಣೆಯನ್ನು ಹೆಣೆದಿದೆ ಎಂದು ದೂರಿದರು.
ಮುಂದಿನ ದಿನಗಳಲ್ಲಿ ರೈತರು ಬೆಳೆದ ಕೃಷಿ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಬಗ್ಗೆ ಕೇಂದ್ರದ ನೀತಿ ಆಯೋಗ ಯೋಜನೆ ರೂಪಿಸಿದೆ. ಕೇಂದ್ರದ ಮಾತನ್ನು ಕೇಳುವ ಸರ್ಕಾರ ಮುಂದೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸ್ಥಿತಿ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಲಿದೆ. ಈ ಹಿನ್ನೆಲೆ ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಏರಬೇಕಾಗಿದೆ ಎಂದು ಜೀವಿಜಯ ಅಭಿಪ್ರಾಯಿಸಿದರು.
ಇದರೊಂದಿಗೆ ಕೇಂದ್ರ ಸರಕಾರ ಹಿಂದಿ ಭಾಷೆಯನ್ನು ರಾಷ್ಟ್ರದಾದ್ಯಂತ ಹೇರಲು ಹೊರಟಿರುವದು ಖಂಡನೀಯ. ಪ್ರಾದೇಶಿಕ ಭಾಷೆಗಳು ಉಳಿಯಬೇಕಾದರೆ ಸರ್ಕಾರದ ಈ ಕ್ರಮವನ್ನು ಎಲ್ಲರೂ ವಿರೋಧಿಸಬೇಕು ಎಂದರು.
ಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ಉಸ್ತುವಾರಿ ವಿ.ಎಂ. ವಿಜಯ, ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಆರ್. ಸುರೇಶ್, ಪ್ರಮುಖರಾದ ಎಸ್.ಬಿ. ಭರತ್‍ಕುಮಾರ್, ರಾಜೇಶ್, ಎಸ್.ಎಂ. ಡಿಸಿಲ್ವ, ರಮೇಶ್, ಆದಿಲ್‍ಪಾಷ ಅವರುಗಳು ಉಪಸ್ಥಿತರಿದ್ದರು.