ಸುಂಟಿಕೊಪ್ಪ, ಜು. 16: ಸುಂಟಿಕೊಪ್ಪದ ಕೃಷಿ ಸಂಪರ್ಕ ಕೇಂದ್ರದ ಅಧಿಕಾರಿ ಕೃಷಿಕರಿಗೆ ಟಾರ್ಪಲ್, ಕೃಷಿ ಪರಿಕರ ವಿತರಿಸುವಲ್ಲಿ ಕರ್ತವ್ಯಲೋಪ ಹಾಗೂ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ; ಇದರಿಂದ ಕೃಷಿಕರು ಸರಕಾರದ ಸವಲತ್ತುಗಳನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಮಾದಾಪುರ ಗ್ರಾ.ಪಂ. ಸದಸ್ಯರುಗಳಾದ ಎನ್.ಎನ್. ಪ್ರಸನ್ನ ಕುಮಾರ್, ಹಾಗೂ ಹೆಚ್.ಎಂ. ಸೋಮಪ್ಪ ಆರೋಪಿಸಿದ್ದಾರೆ.
ಪರಿಶಿಷ್ಟ ಜಾತಿ, ಪಂಗಡದವರು, ಮಧ್ಯಮ ವರ್ಗದ ರೈತರು ಕೃಷಿಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದರೆ ಟಾರ್ಪಲ್ ಮುಗಿದು ಹೋಗಿದೆ ಎಂಬ ಉತ್ತರ ಸಿಬ್ಬಂದಿಗಳಿಂದ ಬರುತ್ತಿದೆ. ಕೃಷಿ ಅಧಿಕಾರಿ ಬೋಪಯ್ಯ ಕಛೇರಿಯಲ್ಲಿ ಲಭ್ಯವಿರುವದಿಲ್ಲ. ಬಡ ಕೃಷಿಕರು ಸಹಾಯಧನದ ಟಾರ್ಪಲ್ ತುಂತುರು ಹನಿನೀರಾವರಿ ಪೈಪ್ ಯಂತ್ರೋಪಕರಣಗಳು ಕೇಳಿದರೆ ಕೊಡುತ್ತಿಲ್ಲ, ಉಡಾಫೆಯ ಉತ್ತರ ನೀಡುತ್ತಿದ್ದಾರೆ.
ಆರ್‍ಟಿಸಿ ಇರುವ ಪರಿಶಿಷ್ಟ ಜಾತಿ ಪಂಗಡದವರಿಗೆ ಟಾರ್ಪಲ್ ಕೃಷಿ ಪರಿಕರಗಳು ಸಿಗುವದೇ ಇಲ್ಲ. ಟಾರ್ಪಲ್ ನೀಡಿರುವ ರಶೀದಿ ಕೊಡುತ್ತಿಲ್ಲ ಎಂದು ದೂರಿದ್ದಾರೆ.
ಸರಕಾರದ ಸೌಲಭ್ಯಗಳನ್ನು ರೈತರಿಗೆ ಆದ್ಯತಾನುಸಾರ ನೀಡದೆ ಕರ್ತವ್ಯಲೋಪವೆಸಗುವ ಅಧಿಕಾರಿಯನ್ನು ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ವರ್ಗಾವಣೆ ಮಾಡಬೇಕೆಂದು ಸೋಮಪ್ಪ ಹಾಗೂ ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.