ಮಡಿಕೇರಿ, ಜು. 16: ಗಿಡ, ಮರ, ಪ್ರಾಣಿ ಮತ್ತು ಪಕ್ಷಿಗಳು ಪ್ರಕೃತಿಯ ಅವಿಭಾಜ್ಯ ಅಂಗವಾಗಿದ್ದು, ಇವು ಪರಿಸರ ಸಮತೋಲನಕ್ಕೆ ಸಹಕಾರಿಯಾಗಿವೆ ಎಂದು ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಆರ್.ಕೆ.ಎಂ.ಎಂ. ಮಹಾಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಬಾಲಕರ ಬಾಲಮಂದಿರ, ರೋಟರಿ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಬಾಲಕರ ಬಾಲಮಂದಿರದಲ್ಲಿ ನಡೆದ ಗಿಡ ನೆಡುವ ಕಾರ್ಯಕ್ರಮ ಮತ್ತು ಕಾನೂನು ಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರತಿಯೊಬ್ಬರೂ ನೆಮ್ಮದಿಯ ಬದುಕು ನಡೆಸುವಂತಾಗಬೇಕಾದರೆ ಪರಿಸರ ಸಮತೋಲನದಿಂದ ಕೂಡಿರಬೇಕು. ಪರಿಸರ ಸಂರಕ್ಷಣೆ ಕಾಪಾಡಿದಾಗ ಉತ್ತಮ ಜೀವನ ನಡೆಸಬಹುದು. ಪ್ಲಾಸ್ಟಿಕ್ ಬಳಕೆಯನ್ನು ಮಾಡಬಾರದು. 14 ವರ್ಷದೊಳಗಿನ ಎಲ್ಲರಿಗೂ ಉಚಿತ ಶಿಕ್ಷಣವಿದ್ದು, ಅದನ್ನು ಪಡೆದುಕೊಳ್ಳಬೇಕು. ಯಾವದೇ ಕಾರಣಕ್ಕೂ ಮಕ್ಕಳನ್ನು ದುಡಿಮೆಗೆ ದೂಡಬಾರದು. ಮಕ್ಕಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಿದೆ ಎಂದು ಸಲಹೆ ಮಾಡಿದರು.

ಒಂದನೇ ಅಪರ ಮತ್ತು ಜಿಲ್ಲಾ ಸೆಷನ್ ನ್ಯಾಯಾಧೀಶ ಡಿ. ಪವನೇಶ್ ಮಾತನಾಡಿ, ದೇಶದಲ್ಲಿ ಸಂವಿಧಾನವೇ ಮೂಲ ಗ್ರಂಥವಾಗಿದ್ದು, ಮೂಲಭೂತ ಹಕ್ಕುಗಳನ್ನು ಪಡೆಯುವದರ ಜೊತೆಗೆ ಕರ್ತವ್ಯಗಳನ್ನು ಪಾಲಿಸುವದು ಅತ್ಯಗತ್ಯ. ಆ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಮಾಡುವದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ರೋಟರಿಯ ಜಿಲ್ಲಾ ಗವರ್ನರ್ ಸುರೇಶ್ ಚಂಗಪ್ಪ ಮಾತನಾಡಿ, ರೋಟರಿ ವತಿಯಿಂದ ಜಿಲ್ಲೆಯಲ್ಲಿ 1 ಲಕ್ಷ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದೆ. ಜೊತೆಗೆ ನೆಟ್ಟ ಗಿಡವನ್ನು ಮೂರು ವರ್ಷದವರೆಗೆ ಆರೈಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ವಕೀಲರ ಸಂಘದ ಅಧ್ಯಕ್ಷ ಸಿ.ಟಿ. ಜೋಸಫ್, ಮಡಿಕೇರಿ ರೋಟರಿ ಅಧ್ಯಕ್ಷ ಪ್ರೀತಂ, ಮಡಿಕೇರಿ ರೋಟರಿ ಕಾರ್ಯದರ್ಶಿ ಕೆ.ಎಸ್. ತಮ್ಮಯ್ಯ, ಬಾಲ ನ್ಯಾಯ ಮಂಡಳಿ ಸದಸ್ಯೆ ಬಿ.ಎಸ್. ಕುಮಾರಿ, ಅರಣ್ಯ ಇಲಾಖೆಯ ಜಗದೀಶ್, ಬಾಲಕರ ಬಾಲಮಂದಿರದ ಮೇಲ್ವಿಚಾರಕ ಚರಣ್ ಹಾಗೂ ಇತರರು ಇದ್ದರು.

ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಜಯಪ್ಪ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.