ಸೋಮವಾರಪೇಟೆ,ಜು.16: ಮಾಜೀ ಸಚಿವ ಹಾಗೂ ಜಾತ್ಯತೀತ ಜನತಾದಳ ಪಕ್ಷದ ಮುಖಂಡ ಬಿ.ಎ. ಜೀವಿಜಯ ಅವರು ಸದ್ಯದಲ್ಲೇ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಆಧಾರ ರಹಿತ ಹೇಳಿಕೆಗಳನ್ನು ಕೆಲವರು ಹರಿಯಬಿಡುತ್ತಿದ್ದು, ಇದು ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುವ ಹುನ್ನಾರದ ಭಾಗವಾಗಿದೆ ಎಂದು ಜೀವಿಜಯ ಸ್ಪಷ್ಟನೆ ನೀಡಿದ್ದಾರೆ.ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್ ಮತ್ತು ಫೇಸ್‍ಬುಕ್‍ಗಳಲ್ಲಿ ಈ ಬಗ್ಗೆ ಕೆಲವರು ಸುಖಾಸುಮ್ಮನೆ ಹೇಳಿಕೆಗಳನ್ನು ಹರಿಯಬಿಡುತ್ತಿದ್ದಾರೆ. ತಾನು ಕಾಂಗ್ರೆಸ್ ಸೇರುವ ಬಗ್ಗೆ ಯೋಚಿಸಿಯೇ ಇಲ್ಲ. ಮಡಿಕೇರಿ ವಿಧಾನ ಸಭಾ ಕ್ಷೇತ್ರದಲ್ಲಿ ಜಾತ್ಯತೀತ ಜನತಾದಳ ಬಲಿಷ್ಠವಾಗುತ್ತಿದ್ದು, ಇದನ್ನು ಸಹಿಸದ ಕೆಲವರು ಇಂತಹ ಆಧಾರ ರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಜೀವಿಜಯ ಅವರು ‘ಶಕ್ತಿ’ಯೊಂದಿಗೆ ಮಾತನಾಡುತ್ತಾ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಮುಖಂಡರಾದ ನಾಪಂಡ ಮುತ್ತಪ್ಪ ಅವರು ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ‘ಜೆಡಿಎಸ್ ಮುಖಂಡ ಜೀವಿಜಯ ಅವರು ಕಾಂಗ್ರೆಸ್ ಸೇರುವದು ಬಹುತೇಕ ಖಚಿತ ಎಂದು ತಿಳಿದುಬಂದಿದೆ’ ಎಂದು ಬರೆದುಕೊಂಡಿದ್ದರು. ಇದಾದ ನಂತರ ಅವರ ಸಹೋದರ, ಐಎನ್‍ಟಿಯುಸಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ನಾಪಂಡ ಮುದ್ದಪ್ಪ ಅವರು ಜೀವಿಜಯ ಅವರು ಕಾಂಗ್ರೆಸ್‍ಗೆ ಸೇರ್ಪಡೆಗೊಂಡರೂ ಸಹ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ನಾಪಂಡ ಮುತ್ತಪ್ಪನವರೇ ಕಾಂಗ್ರೆಸ್ ಎಂಎಲ್‍ಎ ಅಭ್ಯರ್ಥಿ ಎಂದು ಪೋಸ್ಟ್ ಮಾಡಿದ್ದರು.

ಈ ವಿಚಾರಗಳ ಕುರಿತು ‘ಶಕ್ತಿ’ ಜೆಡಿಎಸ್ ಮುಖಂಡ ಜೀವಿಜಯ ಅವರನ್ನು ಮಾತನಾಡಿಸಿದಾಗ ‘ತಾನು ಕಾಂಗ್ರೆಸ್ ಸೇರುವ ಚರ್ಚೆಯೇ ಅಪ್ರಸ್ತುತ, ಅಂತಹ ಯೋಚನೆ ಇಲ್ಲವೇ ಇಲ್ಲ. ದುರುದ್ದೇಶದಿಂದ ಇಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ. ನಾನು ರಾತ್ರಿ ಕಂಡ ಬಾವಿಗೆ ಹಗಲು ಬೀಳುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಂ ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ನನಗೆ ಆಪ್ತರಿದ್ದಾರೆ. ಅಂದ ಮಾತ್ರಕ್ಕೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳಲು ಆಗುವದಿಲ್ಲ. ಇದೆಲ್ಲಾ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುವ ಹುನ್ನಾರವಷ್ಟೇ’ ಎಂದರು.

ನಾಪಂಡ ಮುತ್ತಪ್ಪ ಅವರ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ ಜೀವಿಜಯ, “ತಾನು ಕಾಂಗ್ರೆಸ್‍ಗೆ ಸೇರ್ಪಡೆಗೊಂಡರೆ ಅವರ ಗತಿ ಏನು? ಎಂದು ಮರುಪ್ರಶ್ನಿಸಿದರು. ಈಗಾಗಲೇ ಕಾಂಗ್ರೆಸ್‍ನಿಂದ ಕೆಲ ಮುಖಂಡರು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಹಲವು ಮುಖಂಡರು ಜಾತ್ಯತೀತ ಜನತಾದಳ ಸೇರ್ಪಡೆಗೊಳ್ಳುತ್ತಾರೆ. ಪಕ್ಷ ಸಂಘಟಿತವಾಗುತ್ತಿದೆ. ವಿಧಾನ ಸಭಾ ಚುನಾವಣೆಯಲ್ಲಿ ತಾನು ಜೆಡಿಎಸ್ ಪಕ್ಷದಿಂದಲೇ ಸ್ಪರ್ಧಿಸುತ್ತೇನೆ. ಇದು ನೂರಕ್ಕೆ ನೂರು ಸತ್ಯ” ಎಂದರು.

ಒಟ್ಟಾರೆ ವಿಧಾನ ಸಭಾ ಚುನಾವಣೆಗೆ ಕೆಲ ತಿಂಗಳುಗಳಷ್ಟೇ ಬಾಕಿಯಿದ್ದು, ರಾಜ್ಯಮಟ್ಟದಿಂದ ಹಿಡಿದು ಜಿಲ್ಲಾಮಟ್ಟದವರೆಗೂ ಪಕ್ಷಾಂತರ ಪರ್ವ ಆರಂಭವಾಗಿದೆ. ಮಡಿಕೇರಿ ವಿಧಾನ ಸಭಾ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆಗಳಾಗುವ ಸಂಭವವಿದ್ದು, ಯಾರು ಯಾವ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಯಾರು ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ ಎಂಬದನ್ನು ಕೊನೆಕ್ಷಣದವರೆಗೂ ಕಾದುನೋಡಬೇಕಿದೆ.

- ವಿಜಯ್ ಹಾನಗಲ್