ಸೋಮವಾರಪೇಟೆ, ಜು.17 : ತಾಲೂಕು ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದ್ದು, ‘ಶಕ್ತಿ’ಯ ಈರ್ವರು ವರದಿಗಾರರು ಸೇರಿದಂತೆ ಒಟ್ಟು ಐವರು ಪತ್ರಕರ್ತರು ಭಾಜನರಾಗಿದ್ದಾರೆ.ಶನಿವಾರಸಂತೆ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್. ಹರೀಶ್ ಕುಮಾರ್ ತಮ್ಮ ತಂದೆ ಎಚ್.ಎಸ್. ರಾಮೇಗೌಡ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಗ್ರಾಮೀಣ ವರದಿ ಪ್ರಶಸ್ತಿ ‘ಶಕ್ತಿ’ಯ ಕೂಡಿಗೆ ವರದಿಗಾರ ಕೆ.ಕೆ ನಾಗರಾಜ್ ಶೆಟ್ಟಿ ಬರೆದಿರುವ ‘ಆದಿ ಮಾನವರಂತೆ ಬದುಕುತ್ತಿರುವ ಹಾಡಿ ನಿವಾಸಿಗಳು’ ಎಂಬ ಲೇಖನಕ್ಕೆ ದೊರೆತಿದೆ.
ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ಬಿ.ಎಸ್.ಲೋಕೇಶ್ ಸಾಗರ್ ತಮ್ಮ ತಂದೆ ತಾಯಿಯವರಾದ ಬಿ.ಕೆ. ಸುಬ್ಬಯ್ಯ ತಾಯಿ ಜಯಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ ಪರಿಸರ ವನ್ಯ ಜೀವಿ ವಿಭಾಗದ ಪ್ರಶಸ್ತಿಗೆ ಶಕ್ತಿ ಪತ್ರಿಕೆಯ ಕುಶಾಲನಗರ ವರದಿಗಾರ ಎಂ.ಎನ್. ಚಂದ್ರಮೋಹನ್ ರವರ ‘ಕಾಡಾನೆಗಳಿಗೆ ದುರ್ಗತಿ, ಜನತೆಗೆ ಭೀತಿ, ಅರಣ್ಯ ಸಿಬ್ಬಂದಿಗೆ ಫಜೀತಿ’ ಎಂಬ ಲೇಖನಕ್ಕೆ ದೊರೆತಿದೆ.
ಪತ್ರಕರ್ತರ ಸಂಘದ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ತಮ್ಮ ತಂದೆ ತಾಯಿಯವರಾದ ತೇಲಪಂಡ ಸೋಮಣ್ಣ ಶಾರದ ಸ್ಮರಣಾರ್ಥ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿಯನ್ನು ಶನಿವಾರಸಂತೆಯ ವಿಜಯವಾಣಿ ವರದಿಗಾರ ದಿನೇಶ್ ಮಾಲಂಬಿ ಅವರ ‘ಚಿಂದಿ ಆಯುವ ಹಾವುಗೊಲ್ಲರ ಮಕ್ಕಳ ಬದುಕು’ ಎಂಬ ವರದಿಗೆ ಲಭಿಸಿದೆ.
ಪತ್ರಕರ್ತರ ಸಂಘದ ರಾಜ್ಯ ಸಮಿತಿ ನಿರ್ದೇಶಕ ಎಸ್.ಎ. ಮುರುಳೀಧರ ತಮ್ಮ ಸಹೋದರ ಎಸ್.ಎ. ಗಣೇಶ್ ಸ್ಮರಣಾರ್ಥ ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿಯನ್ನು ಕನ್ನಡ ಪ್ರಭ ವರದಿಗಾರ ಎಂ.ಬಿ. ವಿನ್ಸೆಂಟ್ ಅವರ ‘ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರೂ ಕ್ರೀಡಾ ಪಟುಗಳಿಗೆ ತರಬೇತಿಯೇ ಇಲ್ಲ’ ಎಂಬ ಲೇಖನಕ್ಕೆ ಪಡೆದಿದ್ದಾರೆ.
ಕುಶಾಲನಗರ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರ ಮೋಹನ್ ಅವರು ತಮ್ಮ ತಂದೆ-ತಾಯಿಯರಾದ ನಾರಾಯಣ ಮತ್ತು ಪದ್ಮಾವತಿ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿ ಸೋಮವಾರಪೇಟೆ ವಿಶ್ವವಾಣಿ ವರದಿಗಾರ ಬಿ.ಎ. ಭಾಸ್ಕರ್ ಅವರ ‘ವೈದ್ಯರ ಅಚಾತುರ್ಯ; ಬಾಣಂತಿ ಸಾವು’ ಎಂಬ ವರದಿಗೆ ಲಭಿಸಿದೆ.
ತಾಲೂಕು ಪತ್ರÀಕರ್ತರ ಸಂಘದ ವತಿಯಿಂದ ಸುಂಟಿಕೊಪ್ಪದ ಪತ್ರಕರ್ತರ ಸಂಘದ ಸಹಯೋಗ ದೊಂದಿಗೆ ತಾ. 20ರಂದು ಸುಂಟಿಕೊಪ್ಪದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆಯಂದು ಪ್ರಶಸ್ತಿ ನೀಡಲಾಗುವದೆಂದು ಸಂಘದ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ತಿಳಿಸಿದ್ದಾರೆ.