ಕುಶಾಲನಗರ, ಜು 16: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಹಿಂತೆರಳಿದ ಬಳಿಕ ಮಗುವೊಂದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ವೈದ್ಯರಿಂದ ಯಾವುದೇ ಲೋಪದೋಷ ಉಂಟಾಗಿಲ್ಲ ಎಂದು ಕೇಂದ್ರದ ವೈದ್ಯರಾದ ಡಾ.ಡಿ.ಆರ್.ಭರತ್ ಸ್ಪಷ್ಟಪಡಿಸಿದ್ದಾರೆ.ಆರೋಗ್ಯ ಕೇಂದ್ರದಲ್ಲಿ ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಗುವಿನ ಸಾವಿಗೆ ಆಸ್ಪತ್ರೆ ವೈದ್ಯರೆ ಕಾರಣ ಎಂದು ಮಗುವಿನ ಪೋಷಕರು ಹಾಗೂ ಸಾರ್ವಜನಿಕರು ಜು.5 ರಂದು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಈ ಸಂಬಂಧ ಮಗುವಿನ ಮೃತದೇಹದ ಮರಣೋತ್ತರ ಪರೀಕ್ಷೆ ಮಡಿಕೇರಿಯಲ್ಲಿ ನಡೆಸಲಾಗಿತ್ತು. ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಮಗುವಿನ ಸಾವಿಗೆ ಮಾರಕ ಡೆಂಗ್ಯು ರೋಗ ಕಾರಣ ಎಂದು ವರದಿ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮಗುವಿಗೆ ಸೂಕ್ತ ಪರೀಕ್ಷೆಗೆ ವೈದ್ಯರು ಸೂಚಿಸಿದರಾದರೂ ಪೋಷಕರು ನಿರ್ಲಕ್ಷ್ಯ ವಹಿಸಿದ್ದರಿಂದ ರೋಗ ಉಲ್ಭಣಗೊಂಡು ಮಗು ಮೃತಪಟ್ಟಿದೆ. ಆದರೆ ತಮ್ಮ ಲಾಭಕ್ಕಾಗಿ ಪೋಷಕರು ವೈದ್ಯರ ವಿರುದ್ಧ ಅನಗತ್ಯ ಆರೋಪ ಮಾಡಿ ಪ್ರತಿಭಟನೆ ನಡೆಸಿದ್ದಾರೆ ಎಂದು ಅವರು ತಿಳಿಸಿದರು. ಈ ಸಂದರ್ಭ ವೈದ್ಯರಾದ ಡಾ. ವಸುಂಧರ ಹೆಗಡೆ, ಡಾ. ಪ್ರತಿಮಾ ಇದ್ದರು.