ಭಾಗಮಂಡಲ, ಜು. 17: ರಾಜ್ಯ ಸರ್ಕಾರವು ನಾಲ್ಕು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದ್ದು ಜನಪರ ಆಡಳಿತವನ್ನು ಜನರಿಗೆ ನೀಡಿದೆ ಎಂದು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಕಲ್ ರಾಮನಾಥ್ ಹೇಳಿದರು. ಭಾಗಮಂಡಲದ ಗೌಡ ಸಮಾಜದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಭಾಗಮಂಡಲ ಪ್ರದೇಶದಲ್ಲಿ 2ಕೋಟಿಗೂ ಮಿಕ್ಕಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಮಾಡಿದೆ.

ಆದರೂ ಬಿಜೆಪಿ ಕಾಂಗ್ರೆಸ್ ಸರ್ಕಾರದ ಕೆಲಸ ಕಾರ್ಯವನ್ನು ಕೇಂದ್ರ ಸರ್ಕಾರದ ಯೋಜನೆ ಎಂದು ಬೆಂಬಲಿಸಿ ತನ್ನ ವಿಸ್ತಾರಕ ಕಾರ್ಯಕ್ರಮದ ಮೂಲಕ ಮನೆಮನೆಗೆ ತೆರಳಿ ಜನರನ್ನು ದಾರಿ ತಪ್ಪಿಸುವ ಕೆಲಸದಲ್ಲಿ ನಿರತವಾಗಿದ್ದು ಶಾಸಕ ಕೆ.ಜಿಬೋಪಯ್ಯ ಮೂರು ವರ್ಷದ ಅವಧಿಗೆ ಭಾಗಮಂಡಲ ಪ್ರದೇಶ ಅಭಿವೃದ್ಧಿಗೆ ಯಾವದೇ ಕೊಡುಗೆ ನೀಡಿಲ್ಲ ಎಂದು ಆರೋಪಿಸಿದರು. ಸಂಸದ ಪ್ರತಾಪ ಸಿಂಹ ಸೂಕ್ಷ್ಮ ಪರಿಸರ ತಾಣ ಹಾಗೂ ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಓರ್ವ ಸಂಸದರಾಗಿ ವರದಿಯನ್ನು ತಡೆಹಿಡಿಯಲು ಯಾವದೇ ಪ್ರಾಮಾಣಿಕ ಪ್ರಯತ್ನ ಮಾಡದೆ ರಾಜ್ಯ ಸರ್ಕಾರದ ಮೇಲೆ ಬೊಟ್ಟು ಮಾಡಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದರು.

ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಮಾತನಾಡಿ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯವನ್ನು ಜನರಿಗೆ ತಲುಪಿಸಬೇಕು ಅಭಿವೃದ್ದಿ ಕಾರ್ಯವನ್ನು ಪ್ರಚಾರ ಮಾಡಬೇಕು. ಮುಂದಿನ ಚುನಾವಣೆ ಸಲುವಾಗಿ ಬೂತ್ ಮಟ್ಟದಿಂದಲೇ ಪಕ್ಷವನ್ನು ಸಂಘಟನೆ ಮಾಡಬೇಕು. ಅಲ್ಲದೆ ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳು ಜಯಶೀಲರಾಗಲು ಒಮ್ಮತದಿಂದ ದುಡಿಯಬೇಕು. ಪಕ್ಷ ಸಂಘಟನೆಗೆ ಹೆಚ್ಚಿನ ಮಟ್ಟದಲ್ಲಿ ಯುವ ಕಾರ್ಯಕರ್ತರನ್ನು ಸೆಳೆಯುವ ಕಾಂiÀರ್iವನ್ನು ಮುಂದಿನ ದಿನಗಳಲ್ಲಿ ರೂಪಿಸಲಾಗುವದು ಎಂದರು.

ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಚಾಲಕ ತನ್ನೀರ ಮೈನ ಮಾತನಾಡಿ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಿಗೆ ರಾಜ್ಯಸರ್ಕಾರ ಕೊಡಮಾಡಿರುವ ಎಲ್ಲಾ ಸವಲತ್ತುಗಳನ್ನು ತಲುಪಿಸುವಂತೆ ಮಾಡಲು ಅಲ್ಲದೆ ಪಕ್ಷದ ಗೆಲುವಿಗೆ ಪಂಚಾಯಿತಿ ಸದಸ್ಯರು ಕಾರ್ಯಕರ್ತರು ಹೆಚ್ಚಿನ ಒತ್ತು ಕೊಡಬೇಕು ಎಂದರು. ಭಾಗಮಂಡಲ ವಲಯಾಧ್ಯಕ್ಷ ಸುನಿಲ್‍ಪತ್ರಾವೋ ಮಾತನಾಡಿ ಭಾಗಮಂಡಲ ಪಟ್ಟಣಕ್ಕೆ ಮಹತ್ವಾ ಕಾಂಕ್ಷಿಯಾದ ಮೇಲ್ಸೇತುವೆಯನ್ನು ರಾಜ್ಯ ಸರ್ಕಾರ ನೀಡಿದ್ದು ಸಪ್ಟೆಂಬರ್‍ನಲ್ಲಿ ಶಿಲಾನ್ಯಾಸ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿರುವದು ಸ್ವಾಗತಾರ್ಹ ಎಂದರು. ರಾಜ್ಯ ಸರ್ಕಾರದ ಸಾಲಮನ್ನಾ ಮತ್ತು ಸಮಾಜಮುಖಿ ಕಾರ್ಯಕ್ರಮವನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದರು. ಅಲ್ಲದೆ ರಾಜ್ಯ ಸರ್ಕಾರದ ಅಭಿವೃದ್ದಿ ಕಾರ್ಯವನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.

ಸಂದರ್ಭ ಭಾಗಮಂಡಲ ವಲಯ ಕಾಂಗ್ರೆಸ್ ಸಮಿತಿಯನ್ನು ರಚಿಸಲಾಯಿತು. ಈ ಸಭೆಯಲ್ಲಿ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯೆ ಬೊಪ್ಪಂಡ ಬೊಳ್ಳಮ್ಮನಾಣಯ್ಯ, ಮಹಿಳಾ ಬ್ಲಾಕ್ ಅಧ್ಯಕ್ಷೆ ಆಮೀನಾ, ಯುವಕಾಂಗ್ರೆಸ್ ಅಧ್ಯಕ್ಷ ಹನೀಫ್ ಸಂಪಾಜೆ, ಪ್ರಮುಖರಾದ ದೇವಂಗೋಡಿ ಹರ್ಷ, ವಾಸುದೇವ, ಕುದುಪಜೆ ಪ್ರಕಾಶ್, ವಾಸುದೇವ ನಾಯರ್ , ಕೆದಂಬಾಡಿ ರಮೇಶ, ಹ್ಯಾರೀಸ್, ಅಬ್ದುಲ್‍ಲತೀಫ್, ಕರಿಕೆ ಗ್ರಾಮಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ನಾಯರ್, ಗ್ರಾಮಪಂಚಾಯಿತಿ ಸದಸ್ಯೆ ಪ್ರಮೀಳ, ಮುನೀರ್, ಬಷೀರ್, ಬಾರಿಕೆ ವೆಂಕಟರಮಣ ಉಪಸ್ಥಿತರಿದ್ದರು.