ಮಡಿಕೇರಿ, ಜು. 17: ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಕಡಗದಾಳು ಪ್ರೌಢಶಾಲೆಗೆ ನೀಡಲಾದ 8 ಕಂಪ್ಯೂಟರ್‍ಗಳಿಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ರೋಟರಿ ಮಿಸ್ಟಿ ಹಿಲ್ಸ್‍ನ ಮಾಜಿ ಅಧ್ಯಕ್ಷ, ಕೆ.ಕೆ. ವಿಶ್ವನಾಥ್, ಬೆಂಗಳೂರು ದಕ್ಷಿಣ ರೋಟರಿ ಕ್ಲಬ್ ಸಹಯೋಗ ದಲ್ಲಿ ರೋಟರಿಯ ಸಂಖ್ಯಾ ಪ್ರಾಜೆಕ್ಟ್ ನಲ್ಲಿ ಕಡಗದಾಳು ಶಾಲೆಗೆ ಕಂಪ್ಯೂಟರ್ ಗಳನ್ನು ನೀಡಲಾಗಿದೆ. ಕಂಪ್ಯೂಟರ್‍ಗಳ ಅಗತ್ಯವಿರುವ ಶಾಲೆಗಳನ್ನು ನಿಗದಿತ ಮಾನದಂಡದ ಮೇಲೆ ಆಯ್ಕೆ ಮಾಡಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ನೀಡುವಲ್ಲಿ ರೋಟರಿ ಕ್ಲಬ್‍ಗಳ ಈ ಯೋಜನೆ ಸಹಕಾರಿಯಾಗಿದೆ ಎಂದು ಮಾಹಿತಿ ನೀಡಿದರು.

ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಗ್ರಾಮೀಣ ಪ್ರದೇಶದ ಮತ್ತು ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್‍ಗಳನ್ನು ನೀಡುವ ಮೂಲಕ ರೋಟರಿ ಸಂಸ್ಥೆ ಅಗತ್ಯವುಳ್ಳವರಿಗೆ ಆಧುನಿಕ ಮಾಧ್ಯಮಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದೆ. ಕಡಗದಾಳು ಶಾಲೆಗೆ 8 ಕಂಪ್ಯೂಟರ್ ಗಳೊಂದಿಗೆ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅನೇಕ ಕೊಡುಗೆಗಳನ್ನು ನೀಡಿದ್ದು ಇಂತಹÀ ಸೇವಾ ಕಾರ್ಯ ಗಳು ಮುಂದಿನ ದಿನಗಳಲ್ಲಿಯೂ ನಿರಂತರ ವಾಗಲಿದೆ ಎಂದು ಭರವಸೆ ನೀಡಿದರು.

ರೋಟರಿ ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಇಂದಿನ ಪ್ರಪಂಚ ಬಸ್ ಇದ್ದಂತಿದ್ದು ನಾವೆಲ್ಲರೂ ಪ್ರಯಾಣಿಕರಾಗಿದ್ದೇವೆ. ಆಧುನಿಕ ಕಾಲದ ಸ್ಪರ್ಧಾತ್ಮಕ ದಿನಗಳಲ್ಲಿ ಕಂಪ್ಯೂಟರ್ ಜ್ಞಾನ ಪ್ರತಿಯೋರ್ವ ರಿಗೂ ಅತ್ಯಂತ ಮುಖ್ಯವಾಗಿದ್ದು, ಇಡೀ ಪ್ರಪಂಚವೇ ಇಂದು ಕಂಪ್ಯೂಟರ್‍ಗಳನ್ನು ಆಧರಿಸಿಯೇ ಸಾಗುತ್ತಿದೆ. ಹೀಗಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ಕಂಪ್ಯೂಟರ್ ತಿಳುವಳಿಕೆ ಅಗತ್ಯ ಎಂದು ಹೇಳಿದರು.

ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪಿ.ಎಂ. ಸಂದೀಪ್ ಮಾತನಾಡಿ. ಕಂಪ್ಯೂಟರ್ ಬಗ್ಗೆ ಗ್ರಾಮೀಣ ಮಕ್ಕಳಿಗೆ ಭಯ ಬೇಡ. ಕಂಪ್ಯೂಟರ್ ಕೂಡ ಮಾನವ ನಿರ್ಮಿತವಾಗಿದ್ದು, ನಾವು ಹೇಗೆ ಅದನ್ನು ಸಮರ್ಥವಾಗಿ ಬಳಸುತ್ತೇವೆ ಎಂಬದರ ಮೇಲೆ ಕಂಪ್ಯೂಟರ್‍ಗಳ ಪ್ರಯೋಜನ ಆಧಾರಿತವಾಗಿದೆ ಎಂದರು.

ಕಡಗದದಾಳು ಪ್ರೌಡಶಾಲಾ ಮುಖ್ಯೋಪಾಧ್ಯಾಯಿನಿ ಎಂ.ಜೆ. ಗಂಗಮ್ಮ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅಬ್ದುಲ್ ಜಲೀಲ್, ಶಿಕ್ಷಕಿಯರಾದ ಪಿ.ಎನ್. ವಿಮಲ, ಪಿ.ಎಸ್. ವಿಮಲ, ಭಾರತಿ , ಆರತಿ ಹೆದ್ದಾರಿಮನೆ, ರೂಪ, ಪ್ರಭಾಕರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.