*ಗೋಣಿಕೊಪ್ಪಲು, ಜು. 16: ಪಾಲಿಬೆಟ್ಟ ಕ್ಲಸ್ಟರ್ ಮಟ್ಟದ ಕಳತ್ಮಾಡು ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ, ಸಾಕ್ಸ್ ಹಾಗೂ ಲೇಖನಿ ಸಾಮಗ್ರಿಗಳನ್ನು ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ ವಿತರಿಸಿದರು.ಕಳತ್ಮಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಈ ಸೌಲಭ್ಯಗಳನ್ನು ನೀಡಲಾಯಿತು. ನಂತರ ಮಾತನಾಡಿದ ವಿಜು ಸುಬ್ರಮಣಿ ಅವರು, ಸರಕಾರಿ ಶಾಲೆಯ ಸವಲತ್ತುಗಳು ಸದ್ಬಳಕೆಯಾಗಲು ಹೆಚ್ಚು ಪ್ರಚಾರವಾಗಬೇಕು ಎಂದರು.
ಶಾಲೆಯಲ್ಲಿ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಿ, ಭಾರತೀಯ ಪರಂಪರೆ, ಇತಿಹಾಸವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕಾರ್ಯ ಶಿಕ್ಷಕರಿಂದ ಆಗಬೇಕಾಗಿದೆ. ಶಾಲೆಗೆ ದಾನಿಗಳ ಮೂಲಕ ಗಣಕ ಯಂತ್ರಗಳನ್ನು ನೀಡಲು ಮುಂದಾಗುವದಾಗಿ ಈ ಸಂದರ್ಭ ಭರವಸೆ ನೀಡಿದರು.
ತಾ.ಪಂ. ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಮಾತನಾಡಿ, ಪ್ರಧಾನಮಂತ್ರಿಯವರ ಸ್ವಚ್ಛ ಭಾರತ್ ಕಲ್ಪನೆ ಶಾಲೆಯಲ್ಲಿ ಕಾಣುತ್ತಿದೆ. ವಿದ್ಯಾರ್ಥಿಗಳಿಗೆ ಶಿಸ್ತು ಸಂಯಮ ಮತ್ತು ಬದುಕುವ ರೀತಿಯನ್ನು ತಿಳಿಸುವ ಮೂಲಕ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲ ಎಂಬ ರೀತಿಯಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಬೆಳೆಸುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಹೇಳಿದರು. ತಾ.ಪಂ. ಅನುದಾನದಿಂದ ಶಾಲೆಗೆ ರೂ. 1 ಲಕ್ಷ ಹಾಗೂ ಅಂಗನವಾಡಿಗೆ ರೂ. 45 ಸಾವಿರ ನೀಡುವದಾಗಿ ಭರವಸೆ ನೀಡಿದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ ಮಾತನಾಡಿ, ಶಾಲೆಗೆ ಅವಶ್ಯವಿರುವ ಕಾಂಪೌಂಡ್ ನಿರ್ಮಾಣ, ಕಂಪ್ಯೂಟರ್ ದುರಸ್ತಿ ಸೇರಿದಂತೆ ಸವಲತ್ತುಗಳನ್ನು ಒದಗಿಸಲು ಗ್ರಾ.ಪಂ. ವತಿಯಿಂದ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ ಮಾತನಾಡಿ, ಜನಪ್ರತಿನಿಧಿಗಳು ಸರಕಾರಿ ಶಾಲೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಿದಾಗ ಮಾತ್ರ ಸರಕಾರಿ ಶಾಲೆಗಳು ಹೆಚ್ಚು ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮುಖ್ಯ ಶಿಕ್ಷಕ ವಿನೋದ್ ಮಾತನಾಡಿದರು. ಗ್ರಾ.ಪಂ. ಸದಸ್ಯರುಗಳಾದ ಕೊಲ್ಲಿರ ಧನು, ಶಾರದಾ, ಕಾವೇರಮ್ಮ, ಕ್ರೀಡಾ ಸಮಿತಿ ಅಧ್ಯಕ್ಷ ಕತ್ರಿಕೊಲ್ಲಿ ಚಂದ್ರಶೇಖರ್, ಕಾರ್ಯದರ್ಶಿ ಕೊಲ್ಲಿರ ಸುಬ್ರಮಣಿ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ತುಳಸಿ, ಶಿಕ್ಷಕರುಗಳಾದ ತಾರಾ, ಭಾಗ್ಯವತಿ ಉಪಸ್ಥಿತರಿದ್ದರು.