ವೀರಾಜಪೇಟೆ, ಜು. 17: ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕಲು ಪೊಲೀಸರಂತೆ ಬೀಟ್ ಸದಸ್ಯರುಗಳು ಇಲಾಖೆಗೆ ಸಹಕರಿಸಿದರೆ ಇಲಾಖೆಯೊಂದಿಗೆ ಸಾರ್ವಜನಿಕರ ಬಾಂಧವ್ಯ ವೃದ್ಧಿಯಾಗುವದು. ಸಮಾಜದಲ್ಲಿ ದೈನಂದಿನ ಅವ್ಯವಹಾರಗಳನ್ನು ಕಂಡು ಹಿಡಿಯಲು ಸಹಕಾರವಾಗುವದು ಎಂದು ಕೊಡಗು ಜಿಲ್ಲಾ ಪೊಲೀಸ್ ಉನ್ನತಾಧಿಕಾರಿ ರಾಜೇಂದ್ರ ಪ್ರಸಾದ್ ಹೇಳಿದರು.ವೀರಾಜಪೇಟೆ ಪೊಲೀಸ್ ಬೀಟ್ ವೃತ್ತದ ಸಮಿತಿ ಸದಸ್ಯರುಗಳ ಸಂಪರ್ಕ ಸಭೆಯನ್ನು ಇಲ್ಲಿನ ಕಾವೇರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಉದ್ಘಾಟಿಸಿ ಬೀಟ್ ಸದಸ್ಯರುಗಳನ್ನು ಉದ್ದೇಶಿಸಿ ಮಾತನಾಡಿದ ರಾಜೇಂದ್ರ ಪ್ರಸಾದ್ ಅವರು ವೀರಾಜಪೇಟೆ ವೃತ್ತದಲ್ಲಿ ಬೀಟ್ ಸಮಿತಿಯನ್ನು ರಚಿಸಿ ಕಾರ್ಯರೂಪಕ್ಕೆ ತರಲಾಗಿದೆ. ಪೊಲೀಸ್ ಇಲಾಖೆ, ಸಾರ್ವಜನಿಕರ ನಡುವೆ ತಡೆ ಗೋಡೆಗೆ ಅವಕಾಶ ನೀಡದೆ ಸಂಪರ್ಕದ ಸೇತುವೆ ಜೊತೆಗೆ ಉತ್ತಮ ಬಾಂಧವ್ಯವನ್ನು ಬಯಸುತ್ತದೆ. ಪಟ್ಟಣ, ಊರು, ಗ್ರಾಮಗಳಲ್ಲಿ ಯಾವದೇ ಅವ್ಯವಹಾರ, ಅಕ್ರಮ ದಂಧೆ ಕಿಡಿಗೇಡಿಗಳಿಂದ ಕಿರುಕುಳ ಕ್ಕೊಳಗಾದರೂ ಸಾರ್ವಜನಿಕರು ಇಲಾಖೆಯೊಂದಿಗೆ
(ಮೊದಲ ಪುಟದಿಂದ) ಮುಕ್ತವಾಗಿ ನೇರವಾಗಿ ಸಂಪರ್ಕಿಸಬಹುದು. ಬೀಟ್ ಸಮಿತಿ ಶಾಂತಿ ಸುವ್ಯವಸ್ಥೆ ಬಗ್ಗೆ ನಿಗಾ ಇಡಬೇಕು. ಈಗಿನ ನೂತನ ಡಿ.ಜಿ.ಪಿ ಆದೇಶದಂತೆ ಹಳೆ ಗಸ್ತು ಸಮಿತಿಯನ್ನು ಸುಧಾರಿತವಾಗಿ ಮಾರ್ಪಡಿಸಿ ಪೊಲೀಸ್ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಪೊಲೀಸ್ ಹಾಗೂ ಜನರ ನಡುವೆ ಸಾಮರಸ್ಯವಿದ್ದರೆ ಸಾರ್ವಜನಿಕರು ಪೊಲೀಸ್ ಇಲಾಖೆಯ ಜನಸ್ನೇಹಿಯಾಗಲು ಸಾಧ್ಯ. ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕಾರವಾಗಲಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ ವೀರಾಜಪೇಟೆ ಪಟ್ಟಣದಲ್ಲಿ ಅಂಗಡಿ ಮಾಲೀಕರುಗಳು ತಮ್ಮ ವಾಹನವನ್ನು ಅಂಗಡಿ ಮುಂದೆ ನಿಲ್ಲಿಸಿ ಟ್ರಾಫಿಕ್ ಸಮಸ್ಯೆ ಉಂಟು ಮಾಡುತ್ತಿದ್ದಾರೆ. ಇದನ್ನು ಪೊಲೀಸರು ತಪ್ಪಿಸಬೇಕು. ಜೊತೆಗೆ ರಾತ್ರಿ ಹಗಲೆನ್ನದೆ ಮರಳು ದಂಧೆ ನಿರಂತರವಾಗಿ ನಡೆಯುತ್ತಿದೆ. ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದಾಗ ಇದಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವದಾಗಿ ರಾಜೇಂದ್ರ ಪ್ರಸಾದ್ ಹೇಳಿದರು.
ಸಾಮಾಜಿಕ ಕಾರ್ಯಕರ್ತೆ ಆಶಾ ಸುಬ್ಬಯ್ಯ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗುತ್ತಿರುವದನ್ನು ತಪ್ಪಿಸಬೇಕು. ದ್ವಿಚಕ್ರ ವಾಹನಗಳ ಮಾಲೀಕರು ಹೆಲ್ಮೆಟ್ ಧರಿಸುವದನ್ನು ಕಡ್ಡಾಯಗೊಳಿಸಬೇಕು ಎಂದಿದಕ್ಕೆ ಕ್ರಮ ಕೈಗೊಳ್ಳುವದಾಗಿ ರಾಜೇಂದ್ರ ಪ್ರಸಾದ್ ತಿಳಿಸಿದರು.
ಕದನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಮಾತನಾಡಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದಿಂದ ಕಾರ್ಮಿಕರು ಬೆಳಗಿನಿಂದಲೇ ಕೆಲಸಕ್ಕೆ ಹೋಗದೆ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಅಕ್ರಮ ಮದ್ಯ ಮಾರಾಟಗಾರರ ಮೇಲೆ ತಕ್ಷಣ ಕ್ರಮ ಕೈಗೊಳ್ಳವಂತೆ ಒತ್ತಾಯಿಸಿದಾಗ ಇದು ಅಬ್ಕಾರಿ ಇಲಾಖೆ ಕೆಲಸವಾದರೂ ಪೊಲೀಸರು ಕ್ರಮ ಕೈಗೊಳ್ಳಲು ಆದೇಶಿಸುವುದಾಗಿ ರಾಜೇಂದ್ರ ಪ್ರಸಾದ್ ತಿಳಿಸಿದರು.
ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಸಿ.ಕೆ.ಪೃಥ್ವಿನಾಥ್ ಮಾತನಾಡಿ ಕೊಡಗು ಮಾಕುಟ್ಟ ಗಡಿಯಲ್ಲಿ ಕರ್ನಾಟಕ ಗಡಿಯೊಳಗೆ ನುಗ್ಗಿ ಕೇರಳ ಪೊಲೀಸರು ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಇದರಿಂದ ಗಡಿಯಲ್ಲಿರುವ ಸಿಬ್ಬಂದಿಗಳು, ವಾಹನ ಮಾಲೀಕರಿಗೆ ಕಿರುಕುಳ ಉಂಟಾಗುತ್ತಿದೆ. ಜೊತೆಗೆ ಕೇರಳದ ತ್ಯಾಜ್ಯವನ್ನು ಕೊಡಗು ಗಡಿಯ ಅರಣ್ಯದಲ್ಲಿ ಎಸೆಯುತ್ತಿದ್ದಾರೆ. ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಿದಾಗ ರಾಜೇಂದ್ರ ಪ್ರಸಾದ್ ಪ್ರತಿಕ್ರಿಯಿಸಿ ಕೇರಳ ಪೊಲೀಸರು ಕೊಡಗು ಗಡಿಯ ಚೆಕ್ ಪೋಸ್ಟ್ ಬಳಿ ಬರುವಂತಿಲ್ಲ. ಇದು ಅಪರಾಧ, ಕೇರಳದ ತ್ಯಾಜ್ಯ ವಸ್ತುವನ್ನು ಕರ್ನಾಟಕಕ್ಕೆ ಸಾಗಿಸುವದು ಅಪರಾಧ. ಈ ಸಂಬಂಧದಲ್ಲಿ ಕೇರಳದ ಡಿ.ಐ.ಜಿಯೊಂದಿಗೆ ಮಾತುಕತೆ ನಡೆಸಿ ಕೊಡಗು ಕೇರಳದ ಗಡಿ ಭದ್ರತೆಗೆ ಕಠಿಣ ಕ್ರಮ ಕೈಗೊಳ್ಳುವದಾಗಿ ಹೇಳಿದರು.
ಸಂಪರ್ಕ ಸಭೆ ತಾ. 14-2017ರಿಂದ ಜಾರಿಗೆ ಬಂದಿದ್ದು ಪಟ್ಟಣ ವ್ಯಾಪ್ತಿಯಲ್ಲಿ 34 ಬೀಟ್ ಸಮಿತಿಗಳಿದ್ದು ಗ್ರಾಮಾಂತರ ಪ್ರದೇಶದಲ್ಲಿ 44 ಬೀಟ್ ಸಮಿತಿ ಸೇರಿದಂತೆ ಒಟ್ಟು 78 ಸಮಿತಿಗಳಿವೆ. ಪ್ರತಿ ತಿಂಗಳಿಗೊಮ್ಮೆ ಸಭೆ ಸೇರಿ ಪ್ರಚಲಿತ ಸಮಸ್ಯೆಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿವೆ. ಎಲ್ಲ ಬೀಟ್ ಸಮಿತಿ ಸದಸ್ಯರುಗಳಿಗೆ ಸಧ್ಯದಲ್ಲಿಯೇ ಗುರುತಿನ ಚೀಟಿ ವಿತರಿಸಲಾಗುವದು ಎಂದು ಡಿ.ವೈಎಸ್‍ಪಿ ನಾಗಪ್ಪ ತಿಳಿಸಿದರು.
ಸಂಪರ್ಕ ಸಭೆಯಲ್ಲಿ ಆರ್.ಎಂ.ಸಿ ಅಧ್ಯಕ್ಷ ಸುವಿನ್ ಗಣಪತಿ, ಪಟ್ರಪಂಡ ರಘುನಾಣಯ್ಯ, ಕೊಡವ ಸಮಾಜದ ಅಧ್ಯಕ್ಷ ವಾಂಚೀರ ನಾಣಯ್ಯ, ವೀರಾಜಪೇಟೆ ಪ್ರೆಸ್‍ಕ್ಲಬ್ ಅಧ್ಯಕ್ಷ ಕೋಲತಂಡ ರಘು ಮಾಚಯ್ಯ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಡಿವೈಎಸ್‍ಪಿ ನಾಗಪ್ಪ ಸ್ವಾಗತಿಸಿದರು. ಸರ್ಕಲ್ ಇನ್ಸ್‍ಪೆಕ್ಟರ್ ಎನ್.ಕುಮಾರ್ ಆರಾಧ್ಯ ನಿರೂಪಿಸಿ ವಂದಿಸಿದರು. ಬೀಟ್ ಸಮಿತಿ ಸಂಪರ್ಕ ಸಭೆಯಲ್ಲಿ ಸುಮಾರು 1500ಕ್ಕು ಅಧಿಕ ಮಂದಿ ಸದಸ್ಯರು ಹಾಜರಿದ್ದರು.