ಕುಶಾಲನಗರ, ಜು. 16: ವಿಧಾನ ಸಭಾ ಅರ್ಜಿ ಸಮಿತಿ ಹಾರಂಗಿಗೆ ಭೇಟಿ ನೀಡಿದ ಸಂದರ್ಭ ಹಲವು ಅರ್ಜಿಗಳನ್ನು ಸಲ್ಲಿಸಲಾಯಿತು. ಹಾರಂಗಿ ಅಣೆಕಟ್ಟು ಮುಂಭಾಗ ನಿರ್ಬಂಧಿತ ಪ್ರದೇಶದಲ್ಲಿ ನೆಲೆಸಿರುವ ನೂರಾರು ಮನೆಗಳಿಗೆ ಹಕ್ಕುಪತ್ರ ಒದಗಿಸುವದು, ಕಲ್ಲೂರು ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವದು, ಕಾವೇರಿ ನದಿ ಸಂರಕ್ಷಣೆ ಮತ್ತು ನದಿ ತಟಗಳ ಅಭಿವೃದ್ಧಿಗೆ ಯೋಜನೆ ರೂಪಿಸುವದು ಸೇರಿದಂತೆ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಮಿತಿಯ ಅಧ್ಯಕ್ಷರು ಹಾಗೂ ವಿಧಾನಸಭಾ ಉಪಾಧ್ಯಕ್ಷ ಶಿವಶಂಕರ ರೆಡ್ಡಿ ಅವರಿಗೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಲ್ಲಿಸಿದರು.
ಹಾರಂಗಿ ಅಣೆಕಟ್ಟು ಮುಂಭಾಗ 300ಕ್ಕೂ ಅಧಿಕ ಕುಟುಂಬಗಳು ಕಳೆದ 4 ದಶಕಗಳಿಂದ ನೆಲೆಸಿದ್ದು, ಇದುವರೆಗೆ ಯಾವದೇ ಮೂಲಭೂತ ವ್ಯವಸ್ಥೆ ಕಲ್ಪಿಸಲು ಅನಾನುಕೂಲವಾಗುತ್ತಿದೆ. ಹಕ್ಕುಪತ್ರಗಳು ದೊರಕದೆ ಇರುವ ಹಿನ್ನೆಲೆಯಲ್ಲಿ ಸಾವಿರಕ್ಕೂ ಅಧಿಕ ಗ್ರಾಮಸ್ಥರು ಅತಂತ್ರರಾಗಿದ್ದಾರೆ ಎಂದು ಸ್ಥಳೀಯ ಗ್ರಾ.ಪಂ. ಸದಸ್ಯ ಭಾಸ್ಕರ್ ನಾಯಕ್ ಮನವಿ ಪತ್ರದಲ್ಲಿ ಕೋರಿದ್ದಾರೆ.
ಕಲ್ಲೂರು ಅಂದಗೋವೆ ಗ್ರಾಮ ವ್ಯಾಪ್ತಿಯಲ್ಲಿ ಗ್ರಾನೈಟ್ ಬಳಕೆಯಿಂದ ಪರಿಸರ ನಾಶ, ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ರಮ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲು ಕ್ರಮಕೈಗೊಳ್ಳ ಬೇಕೆಂದು ಅಲ್ಲಿನ ಗ್ರಾಮಸ್ಥರು ಅರ್ಜಿ ಸಮಿತಿಗೆ ಮನವಿ ಅರ್ಪಿಸಿದರು.
ಗಣಿಗಾರಿಕೆಯಿಂದ ಅಂತರ್ಜಲ ಮಟ್ಟ ಕುಸಿತ ಕಂಡುಬರುತ್ತಿದೆ. ವನ್ಯಜೀವಿಗಳಿಗೆ ತೊಂದರೆ ಉಂಟಾಗಿ ಕಾಡಿನಿಂದ ನಾಡಿಗೆ ಲಗ್ಗೆಯಿಡುತ್ತಿವೆ. ಬೃಹತ್ ಯಂತ್ರಗಳಿಂದ ಶಬ್ಧ ಮಾಲಿನ್ಯ ಉಂಟಾಗುತ್ತಿದೆ. ಗ್ರಾಮಸ್ಥರಿಗೆ, ಬಡಜನತೆಗೆ ಕಿರುಕುಳ ಉಂಟಾಗುತ್ತಿದ್ದು, ನಿಯಮಬಾಹಿರ ವಾಗಿ ಗಣಿಗಾರಿಕೆ ನಡೆಯುತ್ತಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಕಾವೇರಿ ನದಿ ಸಂರಕ್ಷಣೆ ಹಾಗೂ ನದಿ ತಟಗಳ ರಕ್ಷಣೆಗಾಗಿ ರಾಜ್ಯ ಸರಕಾರದ ಮೂಲಕ ಯೋಜನೆ ರೂಪಿಸುವಂತೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಮುಖರು ಅರ್ಜಿ ಸಮಿತಿಗೆ ಮನವಿ ಪತ್ರ ಸಲ್ಲಿಸಿದರು. ತಲಕಾವೇರಿಯಿಂದ ಮೂಲ ಕಾವೇರಿಯಿಂದಲೇ ನದಿ ಮಾಲಿನ್ಯಗೊಳ್ಳುತ್ತಿದ್ದು, ನದಿ ನೀರಿನ ಕಲುಷಿಕೆ ತಪ್ಪಿಸಲು ಶಾಶ್ವತ ಯೋಜನೆಗಳನ್ನು ರೂಪಿಸಬೇಕು. ಭಾಗಮಂಡಲದಿಂದ ಜಿಲ್ಲೆಯ ಗಡಿಭಾಗ ಶಿರಂಗಾಲತನಕ ನದಿ ಹರಿಯುವ 24 ಗ್ರಾಮ ವ್ಯಾಪ್ತಿಯಲ್ಲಿ ನದಿ ಸಂರಕ್ಷಣೆಗೆ ಯೋಜನೆಗಳನ್ನು ರೂಪಿಸುವದರೊಂದಿಗೆ ನದಿ ತಟಗಳ ಅಭಿವೃದ್ಧಿಪಡಿಸಲು ಸರಕಾರದ ಮೂಲಕ ಕ್ರಮಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಅರ್ಜಿ ಸಮಿತಿ ಅಧ್ಯಕ್ಷ ಶಿವಶಂಕರ ರೆಡ್ಡಿ ಅವರಿಗೆ ನದಿ ಮಾಲಿನ್ಯದ ವಾಸ್ತವಾಂಶದ ಬಗ್ಗೆ ಮಾಹಿತಿ ಒದಗಿಸಿದರು.