ಮಡಿಕೇರಿ, ಜು. 17: ಹಿರಿಯ ಉದ್ಯಮಿ ಹಾಗೂ ಅಶ್ವಿನಿ ಆಸ್ಪತ್ರೆಯ ಸ್ಥಾಪಕ ವಿಶ್ವಸ್ಥ ಕಾರ್ಯದರ್ಶಿ ಯಾಗಿದ್ದು, ಈಚೆಗೆ ನಿಧನರಾದ ಬಿ.ಜಿ. ವಸಂತ್ ಅವರಿಗೆ ಇಂದು ಅಶ್ವಿನಿ ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಆಸ್ಪತ್ರೆ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಪ್ರಸಕ್ತ ಗೌರವ ಕಾರ್ಯದರ್ಶಿಗಳಾದ ಜಿ. ರಾಜೇಂದ್ರ ಅವರು ಸ್ವರಚಿತ ಕವನವನ್ನು ಗಮಕ ಗಾಯನದೊಂದಿಗೆ ಸುಶ್ರಾವ್ಯವಾಗಿ ಹಾಡುವ ಮೂಲಕ ಅಗಲಿದ ಬಿ.ಜಿ. ವಸಂತ್ ಅವರಿಗೆ ಸಂಸ್ಮರಣೆಗೈದರು.ವಿಹಿಂಪ ಹಿರಿಯರೂ, ವಿಶ್ವಸ್ಥರೂ ಆಗಿರುವ ಬೆಂಗಳೂರಿನ ವೈ.ಕೆ. ರಾಘವೇಂದ್ರರಾವ್ ಅವರು, ಬಿ.ಜಿ. ವಸಂತ್ ಅವರ ಸೇವೆಯನ್ನು ಸ್ಮರಿಸುತ್ತಾ, ದೇಹ ಅಳಿದರೂ ಆತ್ಮ ಮುಂದೆಯೂ ಈ ಆಸ್ಪತ್ರೆಯ ಏಳಿಗೆಯತ್ತ ಬೆಳಕು ನೀಡಲಿದೆ ಎಂದು ಬಣ್ಣಿಸಿದರು. ಶ್ರೀ ಕೃಷ್ಣನ ಸಂದೇಶದಂತೆ ಪ್ರತಿಫಲ ಅಪೇಕ್ಷಿಸದೆ ಸಮರ್ಪಣಾ ಭಾವದಿಂದ ಸರ್ವರ ಒಳಿತಿಗಾಗಿಯೇ ಬದುಕಿರುವಷ್ಟು ದಿನವೂ ಬಿ.ಜಿ. ವಸಂತ್ ಸೇವೆ ಸಲ್ಲಿಸಿದ್ದಾಗಿ ರಾಘವೇಂದ್ರರಾವ್ ಶ್ಲಾಘಿಸಿದರು.
ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ತಲಕಾವೇರಿಯ ಆನಂದತೀರ್ಥಸ್ವಾಮೀಜಿ, ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ, ನಿಟ್ಟೆ ವಿದ್ಯಾಸಂಸ್ಥೆಯ ಉಪಕುಲಪತಿ ರಮಾನಂದ ಶೆಟ್ಟಿ, ರೋಟರಿ ರಾಜ್ಯಪಾಲ ಸುರೇಶ್ ಚಂಗಪ್ಪ, ಆಸ್ಪತ್ರೆಯ ವಿಶ್ವಸ್ಥರಾದ ಬಿ.ಎನ್. ಮೂರ್ತಿ, ಬೇ.ಸು ಶೇಷಾದ್ರಿ, ಎಂ.ಸಿ. ಗೋಖಲೆ, ಡಾ. ಕುಲಕರ್ಣಿ, ಸಿ.ಕೆ. ಉತ್ತಪ್ಪ,
(ಮೊದಲ ಪುಟದಿಂದ) ಬೆಲ್ಲು ಬೆಳ್ಯಪ್ಪ, ಅಧ್ಯಕ್ಷ ಬಿ.ಕೆ. ಕೃಷ್ಣ ಅವರುಗಳು ಮಾತನಾಡಿ, ಬಿ.ಜಿ. ವಸಂತ್ ಅವರ ಸೇವೆಯ ದಿನಗಳೊಂದಿಗೆ ಒಡನಾಟವನ್ನು ಸ್ಮರಿಸಿದರು.
ವಿಶ್ವಸ್ಥರಾದ ಚಂಗಪ್ಪ, ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್, ಉದ್ಯಮಿ ಮಂಡಿರ ದೇವಿ ಪೂಣಚ್ಚ ಸೇರಿದಂತೆ ಅಶ್ವಿನಿ ಬಳಗದ ಪ್ರಮುಖರು ಉದ್ಯೋಗಿಗಳು, ವೈದ್ಯರು ಮೃತರ ಸ್ಮರಣೆಯೊಂದಿಗೆ ಬಿ.ಜಿ. ವಸಂತ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ವಿಸ್ವಸ್ಥ ಎಸ್.ಎಸ್. ಸಂಪತ್‍ಕುಮಾರ್ ನಿರೂಪಣೆಯೊಂದಿಗೆ ಸ್ವಾಗತಿಸಿದರೆ, ಗೀತಾ ಸಂಪತ್ ಭಗವದ್ಗೀತೆ ಪಠಿಸಿದರು. ಆಡಳಿತಾಧಿಕಾರಿ ಶೆಣೈ ವಂದಿಸಿದರು.