ಚೆಟ್ಟಳ್ಳಿ, ಜು. 16: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಜೆ.ಸಿ. ಶಾಲಾ ಸಮೂಹ ಸಂಸ್ಥೆ ಶ್ರೀಮಂಗಲ ಇದರ ವತಿಯಿಂದ ಹಮ್ಮಿಕೊಂಡಿದ್ದ ಕೊಡವ ಭಾಷಾ ಆಟ್-ಪಾಟ್-ಪಡಿಪು ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಜ್ಜಮಾಡ ಮುತ್ತಮ್ಮ, ಮಕ್ಕಳು ಚೆನ್ನಾಗಿ ಓದಿ ಸತ್ಪ್ರಜೆಗಳಾಗಬೇಕೆಂದರು. ಈಗಿನ ಕಾಲದಲ್ಲಿ ವಿದ್ಯಾಭ್ಯಾಸ ಎಲ್ಲಾ ರಂಗದಲ್ಲೂ ಉಪಯೋಗಕ್ಕೆ ಬರುತ್ತದೆ. ನಮ್ಮ ಮಣ್ಣಿನ ಸಂಸ್ಕೃತಿಯನ್ನು ಕಲಿತು ಇತರರಿಗೂ ಕಲಿಸಬೇಕೆಂದರು. ಅತಿಥಿ ಕೊಟ್ರಂಗಡ ಸುಬ್ರಮಣಿ ಮಾತನಾಡಿ, ಈಗಿನ ಮಕ್ಕಳು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದು, ಇಂತಹ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯ ಅರಿವು ಮಾಡಿ ಕೊಡುತ್ತದೆ ಎಂದರು.
ಕೊಡಗು ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕ್ರು ನಾಚಪ್ಪ ಮಾತನಾಡಿ, ಈಗಿನ ಮಕ್ಕಳಿಗೆ ಕೊಡಗಿನ ಮಂದ್-ಮಾನಿಯಾ ಪರಿಚಯ ಮಾಡುತ್ತಿರುವ ಕೊಡವ ಸಾಹಿತ್ಯ ಅಕಾಡೆಮಿಗೆ ಧನ್ಯವಾದ ಎಂದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಮಾತನಾಡಿ, ಪ್ರತಿ ನಾಡಿನಲ್ಲಿಯೂ ಮಂದ್-ಮಾನಿ ಇತ್ತು, ಈಗ ಮುಚ್ಚಿ ಹೋಗಿದೆ. ಹಾಗೆಯೆ ಸಂಸ್ಕೃತಿಯು ಅದರ ಜೊತೆಯಲ್ಲಿ ನಶಿಸಿಹೋಗಿದೆ. ಅದಕ್ಕಾಗಿಯೇ ಮಂದ್-ಮಾನಿಯನ್ನು ತೆರೆಯಿಸಿ ಆಟ್-ಪಾಟ್ ಅನ್ನು ಕಲಿಸಿದರೆ ಮಾತ್ರ ನಮ್ಮ ಸಂಸ್ಕೃತಿಯ ಉಳಿವಿಗೆ ಸಾಧ್ಯ ಎಂದರು.
ಜೆ.ಸಿ. ಶಾಲೆಯ ಮಕ್ಕಳು ಪ್ರಾರ್ಥಿಸಿ, ಶಿಕ್ಷಕಿ ಕಾಳಿಮಾಡ ಚಂಚಲ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಅಣ್ಣಿರ ಹರೀಶ್ ಕಾರ್ಯಕ್ರಮ ನಿರೂಪಿಸಿ, ಶಾಲೆಯ ಮುಖ್ಯಸ್ಥ ಕೊಟ್ರಂಗಡ ತಿಮ್ಮಯ್ಯ ವಂದಿಸಿದರು.
- ಪುತ್ತರಿರ ಪಪ್ಪು ತಿಮ್ಮಯ್ಯ, ಚೆಟ್ಟಳ್ಳಿ