ಮಡಿಕೇರಿ, ಜು. 16: ಕೊಡವ ಜನಾಂಗದಲ್ಲಿ ಎಲ್ಲರೂ ಶ್ರೀಮಂತರಲ್ಲ... ತೀರಾ ಬಡತನ ಸಂಕಷ್ಟದಲ್ಲಿ ಇರುವವರೂ ಇದ್ದಾರೆ. ಹಲವಾರು ಕಾರಣಗಳಿಂದಾಗಿ ವಿದ್ಯಾರ್ಥಿಗಳು ಇವರ ಪಾಲಕರು ಶೈಕ್ಷಣಿಕವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹವರಿಗೆ ಸಹಾಯಹಸ್ತ ನೀಡಲು ಮಡಿಕೇರಿ ಕೊಡವ ಸಮಾಜ ಮಹತ್ವದ ನಿರ್ಧಾರ ಕೈಗೊಂಡಿದೆ.ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಸಮಾಜದ ವಾರ್ಷಿಕ ಮಹಾಸಭೆ ನಡೆದಿದ್ದು, ಸಭೆಯಲ್ಲಿ ಈ ವಿಚಾರ ಪ್ರಸ್ತಾಪಗೊಂಡಿತು. ಸಮಾಜದ ಮಾಜಿ ಜಂಟಿ ಕಾರ್ಯದರ್ಶಿ ಶಾಂತೆಯಂಡ ಸನ್ನಿ ಪೂವಯ್ಯ ಅವರು ಈ ವಿಚಾರವನ್ನು ಸಭೆಯ ಮುಂದಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಕೆ.ಎಸ್. ದೇವಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಈ ಬಾರಿಯ ಬಜೆಟ್‍ನಲ್ಲಿ ಶಿಕ್ಷಣಕ್ಕಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವವರಿಗೆ ನೆರವಾಗಲು ರೂ. 1 ಲಕ್ಷ ಹಣವನ್ನು ಮೀಸಲಿಡುವದಾಗಿ ಪ್ರಕಟಿಸಿದ್ದು, ಸಭೆ ಇದಕ್ಕೆ ಅಂಗೀಕಾರ ನೀಡಿತು.

ನಗರದ ಚೈನ್‍ಗೇಟ್‍ನಲ್ಲಿ ಸಮಾಜಕ್ಕೆ ಸೇರುವ ಜಾಗದಲ್ಲಿ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಾಣ, ಇದರೊಂದಿಗೆ ಜಿಲ್ಲಾ ಕೇಂದ್ರವೂ ಆಗಿರುವ ಮಡಿಕೇರಿ ನಿರ್ಮಾಣ, ಇದರೊಂದಿಗೆ ಜಿಲ್ಲಾ ಕೇಂದ್ರವೂ ಆಗಿರುವ ಮಡಿಕೇರಿಯಲ್ಲಿ ಕೊಡವ ಸಂಸ್ಕøತಿ, ಆಚಾರ-ವಿಚಾರಗಳನ್ನು ಪ್ರತಿಬಿಂಬಿಸುವ ಮುಂದ್‍ಮನೆಯ ಮಾದರಿಯ ಕಟ್ಟಡ, ಮ್ಯೂಸಿಯಂ, ಒಳಗೊಂಡ ಸಾಂಸ್ಕøತಿಕ ಕೇಂದ್ರ ಸ್ಥಾಪನೆಗೆ ಈಗಾಗಲೇ ಸಮಾಜ ಕಾರ್ಯೋನ್ಮುಖವಾಗಿರುವದಾಗಿ ಅಧ್ಯಕ್ಷ ಕೆ.ಎಸ್. ದೇವಯ್ಯ ಅವರು ತಿಳಿಸಿದರು.

ಈ ಪ್ರದೇಶದಲ್ಲಿರುವ ಸ್ಮಶಾನ ಜಾಗದ ಅಭಿವೃದ್ಧಿ ಸೇರಿದಂತೆ ಪ್ರಸ್ತುತ ನಡೆಯುತ್ತಿರುವ ಕೆಲಸ ಕಾರ್ಯ, ಯೋಜನೆಗಳ ಕುರಿತಾಗಿ ಅವರು ಮಾಹಿತಿಯಿತ್ತರು.

(ಮೊದಲ ಪುಟದಿಂದ)

ಸಮಾಜದ ಅಧೀನದ ಜನರಲ್ ತಿಮ್ಮಯ್ಯ ಶಾಲೆಯ ಪ್ರಗತಿ, ಈ ಹಿಂದಿನ ಕೊಡಗು ಜಮೀನುದಾರರ ಸಂಘ (ಕೊಡಗು ಪ್ರೆಸ್)ದ ಜಾಗದಲ್ಲಿ ಪಿಯುಸಿ ವಿಭಾಗ ಪ್ರಾರಂಭ, ಜನಾಂಗದವರು ಎದುರಿಸುತ್ತಿರುವ ಕಂದಾಯ ಇಲಾಖೆಗೆ ಸಂಬಂಧಿಸಿದ ಹಾಗೂ ಇತರ ಸಮಸ್ಯೆಗಳಿಗೆ ನೂತನವಾಗಿ ಸಹಾಯವಾಣಿ ಕೇಂದ್ರ ಪ್ರಾರಂಭಿಸಲಾಗುತ್ತಿರುವ ಕುರಿತು ದೇವಯ್ಯ ವಿವರಿಸಿದರು.

ಕೊಡವ ಜನಾಂಗದವರು ಪ್ರಸ್ತುತ ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಜನಾಂಗದವರ ಮೇಲೆ ಅಸೂಯೆಯ ಭಾವನೆಯೂ ಕಂಡುಬರುತ್ತಿದೆ. ಇದನ್ನು ಅರ್ಥೈಸಿಕೊಂಡು ಜನಾಂಗದ ಉಳಿವು-ಅಭಿವೃದ್ಧಿಗಾಗಿ ಎಲ್ಲರೂ ಒಂದಾಗಿ ಕೆಲಸ ನಿರ್ವಹಿಸಬೇಕಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಾಜದ ಕೆಲಸ ಕಾರ್ಯಗಳು, ಯೋಜನೆಗಳು, ಆಗಬೇಕಾದ ಕೆಲಸ ಕಾರ್ಯಗಳ ಕುರಿತು ಮಹಾಸಭೆಯಲ್ಲಿ ಚರ್ಚೆ ನಡೆಯಿತು.

ಉಪಾಧ್ಯಕ್ಷ ಮಣವಟ್ಟಿರ ಚಿಣ್ಣಪ್ಪ, ಕಾರ್ಯದರ್ಶಿ ಅರೆಯಡ ರಮೇಶ್, ಜಂಟಿ ಕಾರ್ಯದರ್ಶಿ ಮಾದೇಟಿರ ಬೆಳ್ಯಪ್ಪ ಸೇರಿದಂತೆ ಆಡಳಿತ ಮಂಡಳಿ ನಿರ್ದೇಶಕರು, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.

ಬೊಟ್ಟೋಳಂಡ ಕಾಶಿ ಅಚ್ಚಯ್ಯ ಪ್ರಾರ್ಥಿಸಿ, ಮಣವಟ್ಟಿರ ಚಿಣ್ಣಪ್ಪ ಸ್ವಾಗತಿಸಿದರು. ಮಾದೇಟಿರ ಬೆಳ್ಯಪ್ಪ ವಂದಿಸಿದರು.