ಸೋಮವಾರಪೇಟೆ, ಜು.16: ಕಲ್ಲುಕೋರೆಯಿಂದ ಸಿಡಿದ ಕಲ್ಲುಗಳಿಂದ ಗಾಯಗೊಂಡು ಕೊಡಗಿನ ಅವಿವಾಹಿತ ಯುವಕನೋರ್ವ ಸಾವನ್ನಪ್ಪಿದ್ದರೂ ಸಹ ಇದನ್ನು ವಾಹನ ಅಪಘಾತ ಎಂಬಂತೆ ಬಿಂಬಿಸಲು ಹಾಸನದ ಕೊಣನೂರುವಿನ ಕೋರೆಯ ಮಾಲೀಕರು ನಡೆಸಿದ ಯತ್ನ ವಿಫಲಗೊಂಡಿದ್ದು ಇದೀಗ ಕೋರೆÉ ಮಾಲೀಕತ್ವದ ಮೂವರು ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ನೆರೆಯ ಕೊಣನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಸೋಮವಾರಪೇಟೆ ತಾಲೂಕಿನ ಬಾಣಾವರ ಕಲ್ಲುಕೋರೆ ಕೆರೆಯ ಸಮೀಪ ವಾಸವಿದ್ದ ಅಣ್ಣಪ್ಪ (37) ಎಂಬವರು ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿಗೆ ಒಳಪಡುವ ಬೆಟ್ಟಗಳಲೆ (ಬಾಣಾವರದಿಂದ 4 ಕಿ.ಮೀ. ದೂರ) ಗ್ರಾಮದಲ್ಲಿ ಕಲ್ಲುಕೋರೆಯಲ್ಲಿ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದು, ತಾ. 13 ರಂದು ಸಂಜೆ 6 ಗಂಟೆ ಸುಮಾರಿಗೆ ತೀವ್ರ ಗಾಯಗೊಂಡಿದ್ದ ಸ್ಥಿತಿಯಲ್ಲಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.

ಇವರನ್ನು ಮಡಿಕೇರಿಯ ಆಸ್ಪತ್ರೆಗೆ ಸಾಗಿಸಿದ ಕಲ್ಲುಕೋರೆಗೆ ಸಂಬಂಧಿಸಿದ ವ್ಯಕ್ತಿಗಳು, ಆಲೂರು ಸಿದ್ದಾಪುರ ಬಳಿ ಅಣ್ಣಪ್ಪ ಅವರು ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದುದಾಗಿ ವೈದ್ಯರಿಗೆ ಮಾಹಿತಿ ನೀಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರ ಪ್ರಕಾರ ಕಲ್ಲುಕೋರೆ ಮಾಲೀಕರು ಶನಿವಾರಸಂತೆ ಪೊಲೀಸ್ ಎಸ್.ಐ ಅವರನ್ನು ಆಲೂರು ಸಿದ್ದಾಪುರದ ಸ್ಥಳವೊಂದಕ್ಕೆ ಕರೆದೊಯ್ದು ಬೈಕ್ ಒಂದು ಬಿದ್ದಿದ್ದುದನ್ನು ತೋರಿಸಿ ಅಣ್ಣಪ್ಪ ಈ ಬೈಕ್ ಅವಘಡದಲ್ಲಿ ಗಾಯಗೊಂಡಿದಾಗಿ ನಂಬಿಸಲು ಯತ್ನಿಸಿದ್ದರು. ಈ ಬೈಕ್ ಅವಘಡದಲ್ಲಿ ಅಣ್ಣಪ್ಪ ಅವರು ಗಾಯಗೊಂಡಿರು ವದಾಗಿ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲೂ ಮುಂದಾಗಿದ್ದರು. ಆದರೆ ಶನಿವಾರಸಂತೆ ಪೊಲೀಸರು ದೂರು ದಾಖಲಿಸಿಕೊಳ್ಳಲು

(ಮೊದಲ ಪುಟದಿಂದ) ನಿರಾಕರಿಸಿದ್ದರು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ತಾ. 13ರ ರಾತ್ರಿ 12 ಗಂಟೆ ಸುಮಾರಿಗೆ ಅಣ್ಣಪ್ಪ ಅವರು ಇಹಲೋಕ ತ್ಯಜಿಸಿದರು. ಗಾಯಾಳು ಸಾವಿಗೀಡಾದ ಬಳಿಕ ಎಸ್. ಪಿ. ರಾಜೇಂದ್ರ ಪ್ರಸಾದ್ ಅವರ ನಿರ್ದೇಶನದಂತೆ ಪ್ರಕರಣವನ್ನು ಕೊಣನೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಇಲ್ಲಿಯವರೆಗೂ ಮನೆಯವರಿಗೆ ವಿಷಯ ತಿಳಿಸದೇ ಮುಚ್ಚಿಟ್ಟಿದ್ದ ಕಲ್ಲುಕೋರೆಯನ್ನು ನಡೆಸುತ್ತಿರುವವರು, ತಾ. 13ರ ಮಧ್ಯರಾತ್ರಿ ಪೋಷಕರನ್ನು ಸಂಪರ್ಕಿಸಿ ಅಪಘಾತದಲ್ಲಿ ಗಾಯವಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರು ವದಾಗಿ ಮಾಹಿತಿ ನೀಡಿದರು.

ಈ ಮಧ್ಯೆ ಕಲ್ಲುಕೋರೆಯ ಆಸುಪಾಸಿನವರು, ಕೋರೆಯಲ್ಲಿ ಕಲ್ಲುಗಳನ್ನು ಬ್ಲಾಸ್ಟ್ ಮಾಡುವ ಸಂದರ್ಭ ಪಕ್ಕದ ರಸ್ತೆಯಲ್ಲಿ ಕೆಲಸ ಮುಗಿಸಿ ನಡೆದುಕೊಂಡು ಹೋಗುತ್ತಿದ್ದ ಅಣ್ಣಪ್ಪ ಅವರ ತಲೆ ಹಾಗೂ ಕಾಲಿನ ಭಾಗಕ್ಕೆ ಕಲ್ಲುಬಡಿದು ಗಾಯಗೊಂಡಿದ್ದರು ಎಂಬ ಮಾಹಿತಿಯನ್ನು ಬಾಣಾವರ ಗ್ರಾಮಸ್ಥರು ಮತ್ತು ಅಣ್ಣಪ್ಪ ಅವರ ಸಂಬಂಧಿಕರಿಗೆ ತಿಳಿಸಿದ್ದು, ಈ ಬಗ್ಗೆ ಕೋರೆಯ ಮಾಲೀಕರನ್ನು ಸಂಪರ್ಕಿಸಿದ ಸಂದರ್ಭ ರಾಜೀ ತೀರ್ಮಾನ ಮಾಡಿಕೊಳ್ಳುವ ಬಗ್ಗೆ ಮೃತನ ಸಂಬಂಧಿಕರ ಮನವೊಲಿಸಲು ಯತ್ನಿಸಿದ್ದರು ಎನ್ನಲಾಗಿದೆ.

ಅದರಂತೆ ತಾ. 14ರಂದು ಮಾತುಕತೆ ನಿಶ್ಚಯಗೊಂಡಿದ್ದು, ಕಲ್ಲುಕೋರೆಯ ಮಾಲೀಕರು ಸ್ಥಳಕ್ಕಾಗಮಿಸದ ಹಿನ್ನೆಲೆ ಮೃತನ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಅಣ್ಣಪ್ಪ ಅವರು ಸಾವನ್ನಪ್ಪುತ್ತಿದ್ದಂತೆ ಕೋರೆ ಮಾಲೀಕರು ನಾಪತ್ತೆಯಾಗಿದ್ದು, ಈ ಹಿನ್ನೆಲೆ ಪೋಷಕರು ಸಂಬಂಧಿಸಿದ ಕಲ್ಲುಕೋರೆಯ ಮಾಲೀಕರ ವಿರುದ್ಧ ಕೊಣನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆಟ್ಟಗಳಲೆ ಗ್ರಾಮದಲ್ಲಿನ ಚೆಲುವ ಎಂಬಾತನಿಗೆ ಸೇರಿದ ಕಲ್ಲುಕೋರೆಯನ್ನು ಸುಳುಗೋಡು ಸೋಮವಾರ ಗ್ರಾಮದ ಶಶಿಕಲಾ ಮತ್ತು ಪುರುಷೋತ್ತಮ್ ಎಂಬವರುಗಳು ಭೋಗ್ಯಕ್ಕೆ ವಹಿಸಿಕೊಂಡು ನಡೆಸುತ್ತಿದ್ದರು.

ಇದೀಗ ಸ್ಥಳೀಯರ ಮಾಹಿತಿ ಮೇರೆ ಕಲ್ಲುಕೋರೆಯಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಅಣ್ಣಪ್ಪ ಗಾಯಗೊಂಡಿದ್ದು, ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸತ್ಯವನ್ನು ಮರೆಮಾಚುವ ಉದ್ದೇಶದಿಂದ ಕಲ್ಲುಕೋರೆಯ ಮಾಲೀಕರು ನಕಲಿ ಬೈಕ್ ಅವಘಡ ಎಂಬ ಸನ್ನಿವೇಶವನ್ನು ಸೃಷ್ಟಿಸಿದ್ದು, ಇವರುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮೃತನ ಸಹೋದರ ಕಂದಸ್ವಾಮಿ ಅವರು ಕೊಣನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರೊಂದಿಗೆ ಕಲ್ಲುಕೋರೆಯನ್ನು ಅಕ್ರಮವಾಗಿ ನಡೆಸುತ್ತಿದ್ದು, ಇದರ ಬಗ್ಗೆಯೂ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಕೊಣನೂರು ಪೊಲೀಸ್ ಠಾಣಾಧಿಕಾರಿ ಬ್ಯಾಟರಾಯಗೌಡ ಅವರು ಮೊಕದ್ದಮೆ ದಾಖಲಿಸಿಕೊಂಡು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ. ಇದೀಗ ಕೊಣನೂರು ಪೊಲೀಸ್ ಠಾಣೆಯಲ್ಲಿ ಐಪಿಸಿ 304 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಅಣ್ಣಪ್ಪ ಅವರು ಅಂಗವೈಕಲ್ಯ ಹೊಂದಿರುವ ತಾಯಿ ಮೈಲಮ್ಮ ಅವರನ್ನು ಅಗಲಿದ್ದು, ತಾ. 15ರಂದು ಬಾಣಾವರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಕೊಣನೂರು ಪೊಲೀಸರ ಪ್ರಕಾರ ಕೊಣನೂರು ತಾಲೂಕು ಬೆಟ್ಟಗಳಲೆ ಗ್ರಾಮದಲ್ಲಿ ಚೆಲುವ ಎಂಬಾತನಿಗೆ ಸೇರಿದ ಜಮೀನಿನಲ್ಲಿ ಶಶಿಕಲಾ ಹಾಗೂ ಪುರುಷೋತ್ತಮ್ ಎಂಬವರುಗಳು ಅನಧಿಕೃತ, ಪರವಾನಗಿ ರಹಿತ ಕಲ್ಲುಕೋರೆ ಗಣಿಗಾರಿಕೆ ನಡೆಸುತ್ತಿದ್ದಾರೆ. ಇದೀಗ ನತದೃಷ್ಟ ಕೊಡಗಿನ ಅಮಾಯಕ ವ್ಯಕ್ತಿ ಅಣ್ಣಪ್ಪ ಕಲ್ಲುಕೋರೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸ್ಫೋಟದಿಂದಲೇ ಸಾವಿಗೀಡಾಗಿರುವದು ಆರಂಭಿಕ ತನಿಖೆಯಿಂದ ಬಯಲಾಗಿದ್ದು ಮೂವರು ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಈ ಮೂವರು ಆರೋಪಿಗಳೂ ಇದೀಗ ತಲೆ ಮರೆಸಿಕೊಂಡಿದ್ದು ಇವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಕಲ್ಲುಕೋರೆಯಲ್ಲಿ ಉಂಟಾದ ಅವಘಡದಲ್ಲಿ ಅಣ್ಣಪ್ಪ ಅವರು ಗಾಯಗೊಂಡು ನಂತರ ಮಡಿಕೇರಿಯಲ್ಲಿ ಸಾವನ್ನಪ್ಪಿದ್ದರೂ ಸಹ ಅದನ್ನು ಮುಚ್ಚಿಟ್ಟು, ರಸ್ತೆ ಅವಘಡದಲ್ಲಿ ಗಾಯಗೊಂಡಿದ್ದಾಗಿ ಸುಳ್ಳು ಮಾಹಿತಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಡವರಿಗೆ ನ್ಯಾಯ ದೊರಕಬೇಕು. ಕಲ್ಲುಕೋರೆಯ ಮಾಲೀಕರನ್ನು ತಕ್ಷಣ ಬಂಧಿಸಿ ನ್ಯಾಯ ಒದಗಿಸಬೇಕೆಂದು ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ ಜಿಲ್ಲಾಧ್ಯಕ್ಷ ಸುಜಿತ್ ಆಗ್ರಹಿಸಿದ್ದಾರೆ.