ಸಿದ್ದಾಪುರ, ಜು. 17: ನೆಲ್ಯಹುದಿಕೇರಿ ಗ್ರಾಮದಲ್ಲಿ ಕಸ ವಿಲೇವಾರಿಗೆ ಸೂಕ್ತ ಜಾಗವನ್ನು ಒದಗಿಸಿ ಕೊಡದೇ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ಕರೆ ನೀಡಿದ್ದ ನೆಲ್ಯಹುದಿಕೇರಿ ಬಂದ್ ಸಂಪೂರ್ಣ ಯಶ್ವಸಿಯಾಯಿತು. ಬೆಳಿಗ್ಗೆ 6 ಗಂಟೆಯಿಂದಲೇ ನೆಲ್ಯಹುದಿಕೇರಿ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ವರ್ತಕರು ಸ್ವಯಂ ಪ್ರೇರಿತವಾಗಿ ಮುಚ್ಚಿ ಬಂದ್‍ಗೆ ಬೆಂಬಲ ನೀಡಿದರು. ಬಂದ್‍ಗೆ ಕರೆ ನೀಡಿದ್ದ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ಸೇರಿ ನೆಲ್ಯಹುದಿಕೇರಿ ಪಟ್ಟಣದಲ್ಲಿ ಧರಣಿ ಕುಳಿತು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು. ಪ್ರತಿಭಟನಾಕಾರರ ಪ್ರತಿಭಟನೆ ಕಾವು ಏರುತ್ತಿದಂತೆ ಸ್ಥಳಕ್ಕೆ ಸೋಮವಾರಪೇಟೆ ತಾಲೂಕು ಪ್ರಭಾರ ತಹಶೀಲ್ದಾರ್ ಮಹೇಶ್ ಹಾಗೂ ಕುಶಾಲನಗರ ಹೋಬಳಿ ಕಂದಾಯ ಪರಿವೀಕ್ಷಕ ನಂದ ಕುಮಾರ್ ಗ್ರಾಮ ಲೆಕ್ಕಿಗ ಶ್ವೇತ ಭೇಟಿ ನೀಡಿ ನೆಲ್ಯ ಹುದಿಕೇರಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿರುವ ಪೈಸಾರಿ ಜಾಗಗಳನ್ನು ಹಾಗೂ ಒತ್ತುವರಿ ಜಾಗಗಳನ್ನು ಪರಿಶೀಲಿಸಿದರು. ನಂತರ ಪ್ರತಿಭಟನಾ ಕಾರರ ಬಳಿ ಆಗಮಿಸಿದ ಕಂದಾಯ ಇಲಾಖಾಧಿಕಾರಿಗಳು ತಾವು ಒತ್ತುವರಿ ಜಾಗವನ್ನು ಕಂಡು ಹಿಡಿದಿದ್ದು ಆ ಜಾಗವನ್ನು ತೆರವುಗೊಳಿಸಿ ಕಸ ಹಾಕಲು ವ್ಯವಸ್ಥೆ ಕಲ್ಪಿಸಲು 15 ದಿನಗಳ ಕಾಲಾವಕಾಶ ನೀಡುವಂತೆ ವಿನಂತಿಸಿ ಕೊಂಡರು. ಆದರೆ ತಹಶೀಲ್ದಾರ್ ಮಹೇಶ್ ಅವರ ಭರವಸೆಗೆ ಒಪ್ಪದ ಗ್ರಾಮಸ್ಥರು ಈ ಹಿಂದಿನಿಂದಲೂ ಕಂದಾಯ ಅಧಿಕಾರಿಗಳು ಭರವಸೆ ನೀಡಿ ನಂತರ

(ಮೊದಲ ಪುಟದಿಂದ) ಇಲ್ಲಿಂದ ತೆರಳಿ ಹೋದವರು ಬಳಿಕ ಇತ್ತ ತಲೆ ಹಾಕುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರಲ್ಲದೆ, ಇಂದೇ ಜಾಗ ಗುರುತಿಸಿ ಕೊಡುವಂತೆ ಪಟ್ಟು ಹಿಡಿದರು. ಈ ಸಂದರ್ಭ ಕೆಲಕಾಲ ಗೊಂದಲದ ವಾತಾವರಣ ಕಂಡು ಬಂದಿತು. ಕಂದಾಯ ಇಲಾಖೆ ಅಧಿಕಾರಿ ಮಹೇಶ್ ಅವರ ಬಳಿ ಲಿಖಿತ ರೂಪದಲ್ಲಿ ನೀಡುವಂತೆ ಒತ್ತಾಯಿಸಿದ ಗ್ರಾಮಸ್ಥರು ಪೊಳ್ಳು ಭರವಸೆಯ ಅಗತ್ಯವಿಲ್ಲ; ಈಗಾಗಲೇ ನೆಲ್ಯಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ 9 ಮಂದಿ ಡೆಂಗ್ಯೂ ಜ್ವರಕ್ಕೆ ಸಿಲುಕಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಶಾಶ್ವತ ಜಾಗವನ್ನು ಕಲ್ಪಿಸಿಕೊಡುವಂತೆ ಗ್ರಾಮಸ್ಥರು ಕಂದಾಯ ಇಲಾಖಾಧಿಕಾರಿಗಳನ್ನು ಏರು ಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡರು.

ನಂತರ ಗ್ರಾಮದ ಹಿರಿಯ ದಾನಿಗಳಾದ ಕೊಂಗೇರ ಬೋಪಯ್ಯ ಅವರ ಸಮ್ಮುಖದಲ್ಲಿ ನೆಲ್ಯಹುದಿಕೇರಿಯ ವಿ.ಎಸ್.ಎಸ್.ಎನ್. ಸಭಾಂಗಣದಲ್ಲಿ ಕಂದಾಯ ಇಲಾಖಾಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗ್ರಾಮಸ್ಥರು ಸಭೆ ನಡೆಸಿ ಬರಡಿಯಲ್ಲಿ ಒತ್ತುವರಿಯಾಗಿರುವ ಜಾಗವನ್ನು ಮಾಲೀಕರಿಂದ ಪಡೆದುಕೊಂಡು ಅಲ್ಲೇ ಜಾಗದಲ್ಲಿ ಕಸ ಹಾಕಲು ತೀರ್ಮಾನಿಸಲಾಯಿತು. ಕಂದಾಯ ಪರಿವೀಕ್ಷಕ ನಂದ ಕುಮಾರ್ ಮಾತನಾಡಿ ಒಂದೇ ದಿನದಲ್ಲಿ ಪೈಸಾರಿ ಜಾಗವನ್ನು ತೆರವುಗೊಳಿಸಲು ಸಾಧ್ಯವಿಲ್ಲ; ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕಾನೂನು ರೀತಿಯಲ್ಲಿಯೇ ತೆರವು ಪ್ರಕ್ರಿಯೆ ಮಾಡಲು ಸಾಧ್ಯ ಎಂದು ಮಾಹಿತಿ ನೀಡಿದರು. ಆದರೆ ಗ್ರಾಮಸ್ಥರು ಕೂಡಲೇ ಜಾಗ ಗುರುತಿಸಿ ಇಂದಿನಿಂದಲೇ ಕಸ ಹಾಕಲು ಜಾಗ ಒದಗಿಸಿ ಕೊಡದಿದ್ದಲ್ಲಿ ಹೋರಾಟವನ್ನು ಮುಂದುವರಿಸುವ ದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಕಂದಾಯ ಇಲಾಖಾಧಿಕಾರಿಗಳು 15 ದಿನಗಳ ಒಳಗೆ ಸರ್ವೆ ಕಾರ್ಯ ನಡೆಸಿ ಶಾಶ್ವತ ಜಾಗ ಒದಗಿಸಿ ಕೊಡುವದಾಗಿ ನೀಡಿದ ಭರವಸೆಯ ಮೇರೆಗೆ ಪ್ರತಿಭಟನೆಯನ್ನು ಕೈಬಿಡಲಾಯಿತು. ಪ್ರತಿಭಟನೆಯಲ್ಲಿ ಜಿ.ಪಂ. ಸದಸ್ಯೆ ಸುನಿತಾ ಮಂಜುನಾಥ್, ತಾ.ಪಂ. ಸದಸ್ಯೆ ಸುಹದಾ ಆಶ್ರಫ್, ಗ್ರಾ.ಪಂ. ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷೆ ಸಫಿಯ, ಗ್ರಾಮಸ್ಥರಾದ ಕೆ.ಎ. ಬೋಪಯ್ಯ, ಪಿ.ಆರ್. ಭರತ್, ಹೊಸಮನೆ ವಸಂತ್ ಕುಮಾರ್, ವಿ.ಕೆ. ಲೋಕೆಶ್, ಎ.ಕೆ. ಹಕೀಂ, ಟಿ.ಸಿ. ಅಶೋಕ್, ಹಳಗದ್ದೆ ಮಾದಪ್ಪ, ಮಹಮ್ಮದ್, ಓ.ಎಂ. ಮುಸ್ತಾಫ, ರಜಾಕ್, ಗ್ರೇಸಿಮಣಿ, ಸುದೀರ್ ಕುಮಾರ್, ಗ್ರಾ.ಪಂ ಸದಸ್ಯರು ಸೇರಿದಂತೆ ಎಲ್ಲಾ ರಾಜಕೀಯ ಪಕ್ಷದ ಮುಖಂಡರು, ಮಹಿಳಾ ಸಂಘದ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯ ರೇಷ್ಮೆ ಮಾರಾಟ ನಿಗಮದ ಅಧ್ಯಕ್ಷ ಟಿ.ಪಿ. ರಮೇಶ್ ಪ್ರತಿಭಟನೆಗೆ ಬೆಂಬಲ ಸೂಚಿಸಿ ಪಾಲ್ಗೊಂಡಿದ್ದರು.

ಚಿತ್ರ ವರದಿ ಎ.ಎನ್. ವಾಸು