ನಾಪೆÇೀಕ್ಲು, ಜು. 16: ಮಡಿಕೇರಿ ತಾಲೂಕಿನ ಎರಡನೇ ದೊಡ್ಡ ಪಟ್ಟಣ. ಆದರೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಿಲ್ಲದೆ ರೋಗಿಗಳು ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದುದರಿಂದ ಜಿಲ್ಲಾ ಉಸ್ತವಾರಿ ಸಚಿವರು, ಆರೋಗ್ಯ ಸಚಿವರು ಹಾಗೂ ಆರೋಗ್ಯ ಇಲಾಖಾಧಿಕಾರಿಗಳು ಕೂಡಲೇ ವೈದ್ಯಾಧಿಕಾರಿ ನೇಮಕಕ್ಕೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಈ ಹಿಂದೆ ವೈದ್ಯಾಧಿಕಾರಿ ವರ್ಗಾವಣೆಗೊಂಡ ಬಳಿಕ ಇಲ್ಲಿಗೆ ಇನ್ನೂ ವೈದ್ಯಾಧಿಕಾರಿ ನೇಮಕವಾಗಿಲ್ಲ. ಭಾಗಮಂಡಲ, ಚೆಯ್ಯಂಡಾಣೆ, ಚೇರಂಬಾಣೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವಾರಕ್ಕೆ ಒಂದೆರಡು ದಿನ ಇಲ್ಲಿಗೆ ಭೇಟಿ ನೀಡುತ್ತಿದ್ದರು. ಆದರೆ ಅವರು ಕೂಡಾ ಇಲ್ಲಿಗೆ ಭೇಟಿ ನೀಡದ ಕಾರಣ ರೋಗಿಗಳು ಪರದಾಡುವಂತಾಗಿದೆ. ಸದ್ಯಕ್ಕೆ ಸ್ಥಳೀಯ ಮಹಿಳಾ ವೈದ್ಯೆ ಡಾ. ಉಮಾಭಾರತಿ ನರೇಂದ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇಲ್ಲಿ ದಿನಂಪ್ರತಿ 250 ರಿಂದ 300 ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲು ಇವರು ಹರಸಾಹಸ ಪಡುತ್ತಿದ್ದಾರೆ. ರಾತ್ರಿ ಇಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರಿಲ್ಲದ ಕಾರಣ ರಾತ್ರಿ ಆಗಮಿಸುವ ರೋಗಿಗಳನ್ನು ಪ್ರಥಮ ಚಿಕಿತ್ಸೆ ನೀಡಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕಳುಹಿಸಿ ಕೊಡಲಾಗುತ್ತಿದೆ. ಇದರಿಂದ ರೋಗಿಗಳು ಹೆಚ್ಚಿನ ತೊಂದರೆ ಅನುಭವಿಸಬೇಕಾಗಿದೆ ಎನ್ನುತ್ತಾರೆ ಜನ. ವೈದ್ಯರಿಲ್ಲದ ಕೋಪವನ್ನು ನಮ್ಮ ಮೇಲೆ ತೋರಿಸುವ ಪ್ರಸಂಗ ಆಗಾಗ ನಡೆಯುತ್ತಿದ್ದು ಜನರ ನಿಂದನೆ ಮಾತುಗಳಿಗೆ ನಾವು ಗುರಿಯಾಗಬೇಕಾಗುತ್ತದೆ ಎಂದು ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಈ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಾಪೆÇೀಕ್ಲು ವ್ಯಾಪ್ತಿಯ ಸುಮಾರು 24 ಗ್ರಾಮಗಳ ಜನ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಇಲ್ಲಿ ವೈದ್ಯರಿಲ್ಲದ ಕಾರಣ ದೂರದ ಮಡಿಕೇರಿ, ವೀರಾಜಪೇಟೆಗೆ ತೆರಳುವಂತಾಗಿದೆ. ಎರಡಂತಸ್ತಿನ ವಿಶಾಲವಾದ ಕಟ್ಟಡದಲ್ಲಿ ಸಂದರ್ಶಕರಿಗೆ ಕೂರಲು ವಿಶಾಲವಾದ ಸ್ಥಳಾವಕಾಶ, ವೈದ್ಯರ ಕೊಠಡಿಗಳು, ಔಷಧಿ ದಾಸ್ತಾನು ಕೊಠಡಿ, ಲ್ಯಾಬ್, ಲೇಬರ್ ಥಿಯೇಟರ್, ಲೇಬರ್ ವಾರ್ಡ್, ಕಣ್ಣು ಪರೀಕ್ಷಾ ಕೊಠಡಿ, ಐಸಿಟಿಸಿ ವಿಭಾಗ, ಹೆಚ್‍ಐವಿ ಆಪ್ತ ಸಮಾಲೋಚನೆ ಹಾಗೂ ಪರೀಕ್ಷೆ, ಎಕ್ಸರೇ ಕೊಠಡಿ ಸೇರಿದಂತೆ ಎಲ್ಲಾ ವ್ಯವಸ್ಥೆಗಳೂ ಇದೆ. ಆದರೆ ಮುಖ್ಯವಾಗಿ ವೈದ್ಯಾಧಿಕಾರಿ, ಬೇರೆ ಬೇರೆ ವಿಭಾಗಗಳಿಗೆ ಸಂಬಂಧಿಸಿದ ತಜ್ಞ ವೈದ್ಯರ ನೇಮಕವಾಗಬೇಕಾಗಿದೆ. ಅದರೊಂದಿಗೆ ವೈದ್ಯರಿಗೆ, ಸಿಬ್ಬಂದಿಗೆ ವಾಸಿಸಲು ಯೋಗ್ಯವಾದ ವಸತಿ ಗೃಹಗಳ ನಿರ್ಮಾಣ ಮಾಡಲು ಯೋಜನೆ ರೂಪಿಸಿದಲ್ಲಿ ಸೌಲಭ್ಯದ ಕೊರತೆಯಿಂದ ರೋಗಿಗಳು ಮಡಿಕೇರಿ ಜಿಲ್ಲಾಸ್ಪತ್ರೆಯನ್ನು ಅವಲಂಭಿಸಬೇಕಾದ ಪರಿಸ್ಥಿತಿ ನಿವಾರಣೆಯಾಗುತ್ತದೆ ಎನ್ನುತ್ತಾರೆ ರೋಗಿಗಳು. ಆದುದರಿಂದ ಕೂಡಲೇ ವೈದ್ಯಾಧಿಕಾರಿ ನೇಮಕಕ್ಕೆ ಕೂಡಲೇ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.