ಶ್ರೀಮಂಗಲ, ಜು. 16: ಕೊಡಗು ಜಿಲ್ಲಾ ಬೆಳೆಗಾರ ಒಕ್ಕೂಟದ ವೀರಾಜಪೇಟೆ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಕೈಬಿಲೀರ ಹರೀಶ್ ಅಪ್ಪಯ್ಯ, ಕಾರ್ಯದರ್ಶಿಯಾಗಿ ಅಣ್ಣೀರ ಹರೀಶ್ ಮಾದಪ್ಪ, ಉಪಾಧ್ಯಕ್ಷರಾಗಿ ಕೇಚಂಡ ಎಂ. ಕುಶಾಲಪ್ಪ, ಜಂಟಿ ಕಾರ್ಯದರ್ಶಿಯಾಗಿ ಬಾಚಂಗಡ ದಾದಾ ದೇವಯ್ಯ, ಖಜಾಂಚಿಯಾಗಿ ಮಾಣೀರ ವಿಜಯ್ ನಂಜಪ್ಪ, ತಾಂತ್ರಿಕ ಸಲಹೆಗಾರರಾಗಿ ಚೆಪ್ಪುಡಿರ ಶೆರಿ ಸುಬ್ಬಯ್ಯ ಅವಿರೋಧವಾಗಿ ಮುಂದಿನ ಎರಡು ವರ್ಷದ ಅವಧಿಯ ಆಡಳಿತ ಮಂಡಳಿಗೆ ಆಯ್ಕೆಯಾಗಿದ್ದಾರೆ.ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಒಕ್ಕೂಟದ ಉಪಾಧ್ಯಕ್ಷ ಕೇಚಂಡ ಎಂ. ಕುಶಾಲಪ್ಪ ಅಧ್ಯಕ್ಷತೆಯಲ್ಲಿ ನಡೆದ ಬೆಳೆಗಾರರ ಒಕ್ಕೂಟದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಕಳೆದ ಆರು ವರ್ಷದಿಂದ ಸೇವೆ ಸಲ್ಲಿಸಿ ಅನಾರೋಗ್ಯ ಕಾರಣದಿಂದ ಒಕ್ಕೂಟದ ಅಧ್ಯಕ್ಷರಾಗಿದ್ದ ಅಜ್ಜಮಾಡ ಶಂಕರು ನಾಚಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಹರೀಶ್ ಅಪ್ಪಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ಉಳಿದಂತೆ ಕಾರ್ಯದರ್ಶಿ ಹರೀಶ್ ಮಾದಪ್ಪ ಅವರಿಗೆ ಒಕ್ಕೂಟದ ಮಾಧ್ಯಮ ಸಲಹೆಗಾರರಾಗಿ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಯಿತು. ಇದಲ್ಲದೆ ಈಗ ಇರುವ ತಾಂತ್ರಿಕ ಸಲಹೆಗಾರರೊಂದಿಗೆ ಇನ್ನು ಇಬ್ಬರೂ ಸಲಹೆಗಾರರನ್ನು ಹಾಗೂ ಕಾನೂನು ಸಲಹೆಗಾರರನ್ನು ನೇಮಿಸಿಕೊಳ್ಳಲು ನೂತನ ಸಮಿತಿಗೆ ಸಭೆಯಲ್ಲಿ ಅಧಿಕಾರ ನೀಡಲಾಯಿತು.

ತಾಲೂಕಿನ ಪ್ರತಿ ಗ್ರಾ.ಪಂ. ವ್ಯಾಪ್ತಿಯಿಂದ ಕನಿಷ್ಟ 2 ರೈತ ಮಹಿಳೆಯರು ಹಾಗೂ ಬೆಳೆಗಾರನ್ನು ಒಕ್ಕೂಟಕ್ಕೆ ಆಯ್ಕೆ ಮಾಡಿಕೊಳ್ಳುವ ಮೂಲಕ ಅಗತ್ಯವಿರುವವರನ್ನು ಕೋರ್ ಕಮಿಟಿಗೆ ತೆಗೆದುಕೊಳ್ಳಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ತಾಲೂಕು ಒಕ್ಕೂಟದ ಅಧೀನದಲ್ಲಿರುವ ಮಹಿಳಾ ಘಟಕವನ್ನು ಸದ್ಯದಲ್ಲಿಯೇ ಪುನರ್ ರಚಿಸಲು ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಮಾಜಿ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ, ಜಿಲ್ಲಾ ಒಕ್ಕೂಟದ ಸ್ಥಾಪಕ ಸದಸ್ಯ ಮಾಣೀರ ಕೆ. ಮುತ್ತಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಚೆಪ್ಪುಡಿರ ರಾಧ ಅಚ್ಚಯ್ಯ, ಕಾರ್ಯದರ್ಶಿ ಆಶಾ ಜೇಮ್ಸ್, ಪಾರುವಂಗಡ ಪದ್ಮಿನಿ ತಿಮ್ಮಯ್ಯ, ಮೀದೇರಿರ ಕವಿತಾ, ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್ ಮಾದಪ್ಪ, ಒಕ್ಕೂಟದ ಪ್ರಮುಖರಾದ ಬೊಳ್ಳೆರ ಕೆ. ಪೊನ್ನಪ್ಪ, ಜಮ್ಮಡ ಜಗನ್, ಅರಮಣಮಾಡ ಸತೀಶ್ ದೇವಯ್ಯ, ಪಿ.ಎ. ಯಾದವ್, ಕೆ.ಎ. ಕಿರಣ್, ಚೆಪ್ಪುಡಿರ ಕಿರಣ್ ಅಪ್ಪಯ್ಯ, ಕೊಣಿಯಂಡ ಸಂಜು ಸೋಮಯ್ಯ, ಅಳಮೇಂಗಡ ಮೋಟಯ್ಯ, ಬೊಳ್ಳೇರ ರಾಜ ಸುಬ್ಬಯ್ಯ, ಕಳ್ಳಿಚಂಡ ರತ್ನ ಪೂಣಚ್ಚ, ಕಳ್ಳಿಚಂಡ ರಂಜಿ ಪೂಣಚ್ಚ, ಚೆಪ್ಪುಡಿರ ರಾಮಕೃಷ್ಣ, ಕಾಳಿಮಾಡ ಮುತ್ತಣ್ಣ ಹಾಗೂ ಇತರರು ಸಂಘಟನೆಗೆ ಆರ್ಥಿಕ ಕ್ರೋಡಿಕರಣ ಸೇರಿದಂತೆ ಬೆಳೆಗಾರರ ವಿವಿಧ ಸಮಸ್ಯೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕೆಲಸ ಕಾರ್ಯದ ಬಗ್ಗೆ ಸಲಹೆ ನೀಡಿದರು.