ಶ್ರೀಮಂಗಲ, ಜು. 17 : ಕೊಡಗಿನ ಪಶ್ಚಿಮ ಘಟ್ಟ ಹಾಗೂ ನದಿ, ಜಲಾನಯನ ಪ್ರದೇಶಗಳಲ್ಲಿ ಮೋಡ ಬಿತ್ತನೆ ಮಾಡು ವದು ಪರಿಸರಕ್ಕೆ ಮಾರಕವಾಗಿದ್ದು, ಇದನ್ನು ಕೈಬಿಡಬೇಕು. ಮಳೆ ಕೊರತೆಗೆ ಶಾಶ್ವತ ಪರಿಹಾರಕ್ಕೆ ಸರಕಾರ ಯೋಜನೆ ರೂಪಿಸ ಬೇಕು ಎಂದು ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೆ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯು ಪ್ರತಿ ವರ್ಷ ಅತಿವೃಷ್ಟಿಗೆ ತುತ್ತಾಗುತ್ತಿದ್ದು, ಈ ಬಾರಿ ಸಾಮಾನ್ಯ ಮಳೆಯಾಗಿದೆ. ಇದರಿಂದ ಕೊಳೆ ರೋಗಕ್ಕೆ ತುತ್ತಾಗಿ ಕಾಫಿ, ಕರಿಮೆಣಸು, ಅಡಿಕೆ ಫಸಲು ಹಾನಿಯಾಗುವುದಕ್ಕೆ ತಡೆಯಾಗಿದೆ. ಇದುವರೆಗೆ ಅತಿವೃಷ್ಟಿಗೆ ನಷ್ಟಗೊಂಡ ಬೆಳೆಗಳಿಗೆ ಸರಕಾರ ಪರಿಹಾರ ನೀಡಿಲ್ಲ. ಹೀಗೆ ಇರುವಾಗ ಕೃತಕ ಮೋಡ ಬಿತ್ತನೆ ಮೂಲಕ ಮಳೆ ಸುರಿಸಲು ಸರಕಾರ ಮುಂದಾಗಿರುವದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಕೃತಕ ಮೋಡ ಬಿತ್ತನೆಯಿಂದ ರೈತರು ಬೆಳೆದ ಬೆಳೆಗಳಿಗೆ ದುಷ್ಪರಿಣಾಮ ಉಂಟಾಗಲಿದೆ. ಬೆಳೆಗಳಿಗೆ ಮಾರಕ ರೊಗಗಳು ತಗುಲುತ್ತದೆ. ಜಾನುವಾರು, ಪಕ್ಷಿ, ಪ್ರಾಣಿಗಳು, ಮನುಷ್ಯ ಸಹ ಕೃತಕ ಮೋಡ ಬಿತ್ತನೆಯಿಂದ ಉಂಟಾಗುವ ನೀರು ಬಳಸುವದು ಹಾನಿಕಾರಕವಾಗಿದೆ.

ಮಳೆಗಾಲದಲ್ಲಿ ಟಿಂಬರ್ ವ್ಯಾಪಾರ ಮಾಡುವವರು ತಮ್ಮ ವ್ಯವಹಾರವನ್ನು ನಿಲ್ಲಿಸಬೇಕು. ಮರದ ದಿಮ್ಮಿಗಳನ್ನು ಹೊತ್ತು ಸಾಗುವ ಭಾರಿ ವಾಹನಗಳು ಮಳೆಗಾಲದಲ್ಲಿ ಹದವಾಗಿರುವ ರಸ್ತೆ ಮೇಲೆ ಸಂಚರಿಸುವದರಿಂದ ರಸ್ತೆಗಳು ಹಾನಿಯಾಗುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇದಲ್ಲದೆ ಅರಣ್ಯ ಇಲಾಖೆ ಅರಣ್ಯದಲ್ಲಿ ವನ್ಯ ಪ್ರಾಣಿಗಳಿಗೆ ಅಗತ್ಯ ಮೇವು ಒದಗಿಸಲು ಸೂಕ್ತ ಮರಗಿಡಗಳನ್ನು ನೆಡಲು ಹಾಗೂ ಬೀಜಗಳನ್ನು ಬಿತ್ತಲು ಇದೀಗ ಸೂಕ್ತ ಸಮಯವಾಗಿದೆ. ಈ ಮೂಲಕ ಅರಣ್ಯದೊಳಗೆ ಆಹಾರ ಲಭ್ಯವಾಗುವಂತೆ ಕ್ರಮ ಕೈಗೊಂಡು ಕಾಡು ಪ್ರಾಣಿಗಳು ಆಹಾರ ಅರಸಿ ಗ್ರಾಮಗಳಿಗೆ ನುಸುಳದಂತೆ ಯೋಜನೆ ರೂಪಿಸಬೇಕೆಂದು ತಂಬಿ ನಾಣಯ್ಯ ಒತ್ತಾಯಿಸಿದ್ದಾರೆ.