ಮಡಿಕೇರಿ, ಜು. 16: ಕರ್ನಾಟಕದ 411 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ತಾ. 10 ರಿಂದ ನಿತ್ಯವೂ ಬೆಳಿಗ್ಗೆ 8 ಗಂಟೆಗೆ ತರಗತಿಗಳನ್ನು ಪ್ರಾರಂಭಿಸಬೇಕೆಂದು ರಾಜ್ಯ ಕಾಲೇಜು ಶಿಕ್ಷಣ ಮಂಡಳಿ ಆಯುಕ್ತರು ದಿಢೀರ್ ಸುತ್ತೋಲೆ ರವಾನಿಸಿದ್ದಾರೆ.ಸರಕಾರದ ನಿರ್ದೇಶನದಂತೆ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8 ಗಂಟೆಯಿಂದ ತರಗತಿಗಳನ್ನು ಆರಂಭಿಸಿ ಅಪರಾಹ್ನ 3.15ಕ್ಕೆ ಕಾಲೇಜು ಶೈಕ್ಷಣಿಕ ಚಟುವಟಿಕೆಗಳನ್ನು ಪೂರೈಸಿ ಮನೆಗಳಿಗೆ ಹಿಂತೆರಳುವಂತೆ ಸುತ್ತೋಲೆಯಲ್ಲಿ ಆದೇಶಿಸಲಾಗಿದೆ. ಆ ಮೇರೆಗೆ ತಾ. 10 ರಿಂದ ಸರಕಾರಿ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವರ್ಗ ಮರು ಮಾತನಾಡಲಾರದೆ, ನಿತ್ಯ ಬೆಳಿಗ್ಗೆ 8 ಗಂಟೆಗೆ ಕಾಲೇಜುಗಳನ್ನು ತೆರೆದು ಕುಳಿತುಕೊಳ್ಳುತ್ತಿದ್ದರಾದರೂ ವಿದ್ಯಾರ್ಥಿಗಳು ಮಾತ್ರ ಇತ್ತ ಸುಳಿಯುತ್ತಿಲ್ಲ.
ಸರಕಾರಿ ಆದೇಶ ಹೊರಬಿದ್ದು, ನಾಳೆಗೆ 8 ದಿನವಾಗುತ್ತಿದ್ದರೂ, ವಿದ್ಯಾರ್ಥಿಗಳು 8 ಗಂಟೆಗೆ ಕಾಲೇಜುಗಳಿಗೆ ಬಾರದಿರುವ ಹಿನ್ನೆಲೆ ಏನು ಮಾಡಬೇಕೆಂದು ಕಾಲೇಜು ಶಿಕ್ಷಣ ಮಂಡಳಿಯಲ್ಲಿ ಯಾರೂ ಸಮರ್ಪಕ ಉತ್ತರ ನೀಡುತ್ತಿಲ್ಲ. ಬದಲಾಗಿ ಮೂಲವೊಂದರ ಪ್ರಕಾರ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಲಂಡನ್ ಪ್ರವಾಸದಲ್ಲಿರುವ ಮಾತು ಕೇಳಿ ಬರುತ್ತಿದೆ. ಇನ್ನು ಕಾಲೇಜು ಶಿಕ್ಷಣ ಮಂಡಳಿ ಆಯುಕ್ತರಾದ ಅಜಯ್ ನಾಗಭೂಷಣ್ ತಾ. 10 ರಿಂದ ಇಂದಿನ ತನಕವೂ ‘ಶಕ್ತಿ’ ನಿತ್ಯ ಕರೆ ಮಾಡುತ್ತಿದ್ದರೂ ಅತ್ತಲಿಂದ ಸ್ವೀಕರಿಸಲು ನಿರ್ಧಾರ ತೆಗೆದುಕೊಂಡಂತಿಲ್ಲ. ಪ್ರತಿ ಕರೆಯನ್ನು ಮೊಟಕುಗೊಳಿಸುತ್ತಿದ್ದಾರೆ. ಕಚೇರಿಯ ಸ್ಥಿರ ದೂರವಾಣಿ ಕೂಡ ಸ್ವೀಕರಿಸದೆ, ಕಾಲೇಜು ವಿದ್ಯಾರ್ಥಿ ಸಮೂಹ ಹಾಗೂ ಉಪನ್ಯಾಸಕ ವೃಂದ ಯಾವದೇ ನಿರ್ಧಾರ ತೆಗೆದುಕೊಳ್ಳಲಾರದೆ ನಿತ್ಯ ಪರದಾಡುವಂತಾಗಿದೆ.
-ಶ್ರೀ ಸುತ