ಸೋಮವಾರಪೇಟೆ,ಜು.16: ಸರ್ಕಾರಿ ಕೆಲಸವೆಂದರೆ ದೇವರ ಕೆಲಸ ಎಂಬ ಮಾತಿದೆ. ಆದರೆ ಕೆಲವರಿಗೆ ಸರ್ಕಾರಿ ಕೆಲಸವೆಂದರೆ ಚಿನ್ನದ ಮೊಟ್ಟೆಯಿಡುವ ಕೋಳಿಯಂತಾಗಿದೆ. ಈ ಮಾತು ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿರುವ ಆರ್‍ಟಿಸಿ ವಿತರಣಾ ಕೇಂದ್ರಕ್ಕೆ ಅಕ್ಷರಶಃ ಅನ್ವಯಿಸುತ್ತದೆ.ಹೌದು! ನಗರದ ಹೃದಯ ಭಾಗದಲ್ಲಿರುವ ಆರ್‍ಟಿಸಿ ವಿತರಣಾ ಕೇಂದ್ರದ ಬಾಗಿಲಿಗೇ ಬೀಗವೇ ಇಲ್ಲ. ಸಂಜೆ ವೇಳೆ ಕೆಲಸ ಮುಗಿಸಿ ತೆರಳಿದ ನಂತರ ಕಚೇರಿಯನ್ನು ಕಾಯಲು ಯಾರೂ ಇಲ್ಲ. ಬಾಗಿಲಿಗೆ ಚಿಲಕ ಅಳವಡಿಸಿದ್ದರೂ ಬೀಗವನ್ನು ಹಾಕುವದೇ ಇಲ್ಲ. ಕನಿಷ್ಟ 50 ರೂಪಾಯಿ ಖರ್ಚು ಮಾಡಿ ಬೀಗ ಕೊಂಡುಕೊಳ್ಳಲೂ ಸಹ ಆರ್‍ಟಿಸಿ ಕೇಂದ್ರದವರಲ್ಲಿ ಹಣವಿಲ್ಲ. ಇಂತಹ ಅವ್ಯವಸ್ಥೆ ಕಳೆದ ಅನೇಕ ದಿನಗಳಿಂದ ಮುಂದುವರೆದಿದ್ದರೂ ತಾಲೂಕು ದಂಡಾಧಿಕಾರಿಗಳು ಗಮನಿಸುತ್ತಲೇ ಇಲ್ಲ.

ಇಲ್ಲಿನ ತಾಲೂಕು ಕಚೇರಿ ಸಮುಚ್ಚಯದಲ್ಲಿ ಅನೇಕ ಇಲಾಖೆಗಳ ಕೊಠಡಿಗಳಿದ್ದು, ಕಚೇರಿಯ ಮುಖ್ಯದ್ವಾರದ ಬಳಿಯಲ್ಲೇ ಆರ್‍ಟಿಸಿ ವಿತರಣಾ ಕೇಂದ್ರವಿದೆ. ಇದಕ್ಕೆ ಅಲ್ಯೂಮಿನಿಯಂ ಬಾಗಿಲು ಅಳವಡಿಸಿದ್ದು, ಪ್ರತಿನಿತ್ಯ ಕಚೇರಿ ಕೆಲಸ ಮುಗಿದ ಮೇಲೆ ಕೊಠಡಿಯನ್ನು ಭದ್ರಪಡಿಸಲು ಬೀಗವನ್ನೂ ಹಾಕುತ್ತಿಲ್ಲ.

ಕಚೇರಿಯ ಒಳಗೆ ಸರ್ಕಾರದಿಂದ ನೀಡಲ್ಪಟ್ಟಿರುವ ಕಂಪ್ಯೂಟರ್‍ಗಳು, ಸಾರ್ವಜನಿಕರಿಗೆ ಸೇರಿದ ಅನೇಕ ದಾಖಲೆ ಪತ್ರಗಳು, ಪ್ರಿಂಟರ್‍ಗಳು, ಬೃಹತ್ ಕಪಾಟುಗಳಿದ್ದರೂ ಸಹ ಹೊರಗಿನಿಂದ ಒಂದು ಬೀಗವನ್ನು ಜಡಿಯಲು ಇಲ್ಲಿನ ಸಿಬ್ಬಂದಿಗಳು ಮನಸ್ಸು ಮಾಡುತ್ತಿಲ್ಲ. ಶನಿವಾರ ರಾತ್ರಿ ವೇಳೆಯಲ್ಲಿ ಈ ಬಾಗಿಲನ್ನು ಪ್ಲಾಸ್ಟಿಕ್ ವಯರ್‍ನಿಂದ ಕಟ್ಟಲಾಗಿದ್ದು, ರಜಾ ದಿನವಾದ ಭಾನುವಾರದಂದು ಬೀಗ ಜಡಿಯದ ಕಚೇರಿಯ ಬಾಗಿಲು ಸಾರ್ವಜನಿಕರನ್ನು ಸ್ವಾಗತಿಸುತ್ತಿತ್ತು.

ಸಾರ್ವಜನಿಕರ ದಾಖಲೆ ಪತ್ರಗಳು, ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ ಇತರ ಸರ್ಕಾರಿ ಸ್ವತ್ತುಗಳು ಒಳಗೊಂಡಿರುವ ಕಚೇರಿಗೆ ಭದ್ರತೆಯಿಲ್ಲ. ಕಂಪ್ಯೂಟರ್, ದಾಖಲೆಪತ್ರಗಳು ಕಳವಾದರೆ ಯಾರು ಜವಾಬ್ದಾರಿ? ಅಷ್ಟಕ್ಕೂ ಸರ್ಕಾರಿ ಕೆಲಸವೆಂದರೆ (ಆರ್‍ಟಿಸಿ ಕೇಂದ್ರದವರಿಗೆ) ಚಿನ್ನದ ಮೊಟ್ಟೆಯಿಡುವ ಕೋಳಿಯೇ? ಸರ್ಕಾರಿ ಕಚೇರಿಯ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯವೇ? - ವಿಜಯ್ ಹಾನಗಲ್