ಮಡಿಕೇರಿ, ಜು. 17: ಜಿಲ್ಲಾಡಳಿತ ತರಲು ಉದ್ದೇಶಿಸಿರುವ ರ್ಯಾಫ್ಟಿಂಗ್ ಟೆಂಡರನ್ನು ವಿರೋಧಿಸಿ ದುಬಾರೆ ರ್ಯಾಫ್ಟಿಂಗ್ ಅಸೋಸಿಯೇಷನ್ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.

ರ್ಯಾಫ್ಟಿಂಗ್ ಉದ್ದಿಮೆಯಲ್ಲಿ ದುಬಾರೆ ವ್ಯಾಪ್ತಿಯಲ್ಲಿ ಇದುವರೆಗೂ ಒಟ್ಟು 16 ಮಂದಿ ಮಾಲೀಕರು 60ಕ್ಕೂ ಅಧಿಕ ಕಾರ್ಮಿಕರೊಂದಿಗೆ ದುಡಿಯುತ್ತಿದ್ದಾರೆ. ರ್ಯಾಫ್ಟಿಂಗ್‍ನ್ನು ಟೆಂಡರ್ ಅಥವಾ ಕೊಟೇಶನ್ ಮೂಲಕ ಖರೀದಿಸಿದಲ್ಲಿ ಒಬ್ಬ ವ್ಯಕ್ತಿಯ ಹಿಡಿತದಲ್ಲಿ ರ್ಯಾಫ್ಟಿಂಗ್ ಉದ್ದಿಮೆ ಕೇಂದ್ರೀಕೃತವಾಗುವ ಅಪಾಯವಿದೆ. ಅಲ್ಲದೆ ಇದೀಗ ರ್ಯಾಫ್ಟಿಂಗ್ ಉದ್ದಿಮೆ ನಡೆಸುತ್ತಿರುವ ವರು ಈಗಾಗಲೇ ಬ್ಯಾಂಕ್ ಸಾಲ ಮಾಡಿ ರ್ಯಾಫ್ಟಿಂಗ್‍ಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿದ್ದು, ಉದ್ದಿಮೆದಾರರು ಬ್ಯಾಂಕ್ ಸಾಲದಲ್ಲಿದ್ದಾರೆ. ಟೆಂಡರ್ ನೀಡಿದಲ್ಲಿ ಈಗ ಉದ್ದಿಮೆ ನಡೆಸುತ್ತಿರುವವರು ಹಾಗೂ ಅದರಲ್ಲಿ ತೊಡಗಿಸಿ ಕೊಂಡಿರುವವರು ಬೀದಿ ಪಾಲಾಗುವ ಸಂಭವವಿದೆ. ಜಿಲ್ಲಾಡಳಿತ ಉದ್ದೇಶಿತ ನಿಯಮವನ್ನು ಹಿಂದಕ್ಕೆ ಪಡೆದು ಈಗಿರುವ ನೀತಿ - ನಿಯಮಗಳನ್ನು ಪರಿಶೀಲಿಸಿ ಕಟ್ಟುನಿಟ್ಟಿನ ನೀತಿ - ನಿಯಮಗಳನ್ನು ರೂಪಿಸಿ ಶಿಸ್ತುಬದ್ಧ ವಾಗಿ ಉದ್ದಿಮೆ ನಡೆಸಲು ಅನುವು ಮಾಡಿಕೊಡುವಂತೆ ಮನವಿಯಲ್ಲಿ ಆಗ್ರಹಿಸಲಾಯಿತು.

ಮಡಿಕೇರಿ: ಪದವಿ ಶಿಕ್ಷಣ ಇಲಾಖೆ ಸರ್ಕಾರಿ ಪದವಿ ಕಾಲೇಜುಗಳನ್ನು ಬೆಳಿಗ್ಗೆ 8 ಗಂಟೆಗೆ ಆರಂಭಗೊಳಿಸಬೇಕೆಂದು ಸಮಯ ನಿಗದಿಪಡಿಸಿ ಹೊರಡಿಸಿರುವ ಆದೇಶದ ವಿರುದ್ಧ ನಗರದಲ್ಲಿ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಮಡಿಕೇರಿ ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಆವರಣ ದಿಂದ ಸರ್ಕಾರದ ಆದೇಶದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ಯಲ್ಲಿ ಸಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು, ಗ್ರಾಮೀಣ ಪ್ರದೇಶಗಳಿಗೆ ಬೆಳಗ್ಗಿನ ಸಮಯದಲ್ಲಿ ಬಸ್ ಸೌಲಭ್ಯವಿಲ್ಲ. ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ವಿಪರೀತವಿದ್ದು, ಬೆಳ್ಳಂಬೆಳಗ್ಗೆಯೇ ದಾರಿಗಳಲ್ಲಿ ಕಾಡಾನೆಗಳು ಕಂಡು ಬರುತ್ತವೆ. ಕಾಡಾನೆಗಳಿಂದ ಅಪಾರ ಜೀವ ಹಾನಿಗಳು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಈ ಹಿಂದಿನಂತೆಯೇ ಸಮಯ ನಿಗದಿಪಡಿಸಿ ವಿದ್ಯಾರ್ಥಿಗಳ ಪಠ್ಯಚಟುವಟಿಕೆಗಳು ಸುಗಮವಾಗಿ ಸಾಗುವಂತಾಗಲು ಸರ್ಕಾರ ಕ್ರಮಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಲಾಯಿತು.

ಪ್ರತಿಭಟನೆಯ ನೇತೃತ್ವವನ್ನು ಕಾಲೇಜಿನ ವಿದ್ಯಾರ್ಥಿಗಳಾದ ಸುಮಂತ್, ರೇಣು, ಕಾವ್ಯ ವಹಿಸಿದ್ದರು. ಕಾಲೇಜಿನ ಇತರ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನಾಪೆÇೀಕ್ಲು : ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಶರತ್ ಮಡಿವಾಳ ಹತ್ಯೆಗೆ ಸಂಬಂಧಿಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ನಾಪೆÇೀಕ್ಲು ವಿನಲ್ಲಿ ಬಿಜೆಪಿ ಮತ್ತು ವಿವಿಧ ಹಿಂದೂ ಸಂಘಟನೆಗಳು ಕಂದಾಯ ಪರಿವೀಕ್ಷಕರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಅದಕ್ಕೂ ಮೊದಲು ಪಟ್ಟಣದ ಶ್ರೀ ರಾಮ ಮಂದಿರದಲ್ಲಿ ಮೃತರ ಗೌರವಾರ್ಥ ಶ್ರದ್ಧಾಂಜಲಿ ಸಭೆ ನಡೆಸಿ ಗೌರವ ಅರ್ಪಿಸಿದ ಕಾರ್ಯಕರ್ತರು, ಸ್ಥಳೀಯ ನಾಡ ಕಚೇರಿ ಬಳಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಮತ್ತು ರಾಜ್ಯಾಡಳಿತದ ಪಕ್ಷಪಾತ ಧೋರಣೆಯ ಬಗ್ಗೆ ಘೋಷಣೆ ಕೂಗಿದರು.

ಈ ಸಂದರ್ಭ ಆರ್.ಎಸ್.ಎಸ್. ಮುಖಂಡ ಕಂಗಾಂಡ ಜಾಲಿ ಪೂವಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ನೆಲ್ಲಚಂಡ ಕಿರಣ್ ಕಾರ್ಯಪ್ಪ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಸದಸ್ಯರಾದ ನೆರೆಯಂಡಮ್ಮಂಡ ಉಮಾ ಪ್ರಭು, ಕೋಡಿಯಂಡ ಇಂದಿರಾ ಹರೀಶ್, ಡಿ.ಸಿ.ಸಿ ಬ್ಯಾಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಭಜರಂಗದಳದ ಅಧ್ಯಕ್ಷ ಬಿ.ಎಂ. ಪ್ರತೀಪ್, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕೇಲೇಟಿರ ಸಾಬು ನಾಣಯ್ಯ, ಮುಖಂಡರಾದ ಕಲಿಯಂಡ ವಿಠಲ್ ಮುದ್ದಯ್ಯ, ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಚಂಗಂಡ ಸೂರಜ್, ಪಾಡಿಯಮ್ಮಂಡ ಮನು ಮಹೇಶ್, ಶಿವಚಾಳಿಯಂಡ ಜಗದೀಶ್, ಬದ್ದಂಜೆಟ್ಟಿರ ದೇವಿ ದೇವಯ್ಯ, ಕಾಂಡಂಡ ಜಯಾ ಕರುಂಬಯ್ಯ, ಕಲಿಯಂಡ ಸುನಂದ, ಕರವಂಡ ಅಪ್ಪಣ್ಣ, ಚಂಗೇಟಿರ ಕುಮಾರ್ ಸೋಮಣ್ಣ, ಹೊಸೋಕ್ಲು ಮುತ್ತಪ್ಪ, ಕನ್ನಂಬಿರ ಸುದಿ ತಿಮ್ಮಯ್ಯ, ಕೊಂಡಿರ ಕಾಳಯ್ಯ ಮತ್ತಿತರರು ಇದ್ದರು.

ನಾಪೆÉÇೀಕ್ಲು : ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಕಗೊಳಿಸುವಂತೆ ಒತ್ತಾಯಿಸಿ ನಾಪೆÉÇೀಕ್ಲುವಿನಲ್ಲಿ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ಪಕ್ಷಾತೀತವಾಗಿ ಆರೋಗ್ಯ ಕೇಂದ್ರ ಎದುರು ಪ್ರತಿಭನೆ ನಡೆಸಿದರು.

ಈ ಸಂದರ್ಭ ಮುಖ್ಯಮಂತ್ರಿ, ಆರೋಗ್ಯ ಮಂತ್ರಿಗಳ ವಿರುದ್ಧ ಘೋಷಣೆ ಕೂಗುವದರ ಮೂಲಕ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿ ವೈದ್ಯರಿಲ್ಲದೆ ವರ್ಷಗಳೇ ಕಳೆದರೂ ಜನಪ್ರತಿನಿಧಿಗಳು ಮತ್ತು ಸರಕಾರ ನಿದ್ರಾವಸ್ಥೆಯಲ್ಲಿದೆ. ಗ್ರಾಮೀಣ ಪ್ರದೇಶದ ಜನರ ಬದುಕಿನಲ್ಲಿ ಸರಕಾರ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಇಲ್ಲಿ ತಜ್ಞ ವೈದÀ್ಯರು ಹಾಗೂ ವೈದ್ಯಾಧಿಕಾರಿ ಗಳನ್ನು ನೇಮಿಸದಿದ್ದಲ್ಲಿ ನಾಪೆÉÇೀಕ್ಲು ಪಟ್ಟಣವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಮಾತನಾಡಿ ಜಿಲ್ಲೆಯಲ್ಲಿ ವೈದ್ಯರ ಕೊರತೆ ಇದೆ. ಈ ಸಮುದಾಯ ಆರೋಗ್ಯ ಕೇಂದ್ರಕ್ಕೆ ಐದು ತಜ್ಞ ವೈದ್ಯರ ನೇಮಕ ವಾಗಬೇಕಿದೆ. ಮುಂದಿನ ದಿನಗಳಲ್ಲಿ ಇಲ್ಲಿಗೆ ವೈದ್ಯರನ್ನು ನೇಮಕಗೊಳಿಸಲು ಪ್ರಯತ್ನಿಸುವದಾಗಿ ಭರವಸೆ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಮಾತನಾಡಿ ಇಲ್ಲಿಗೆ ತಜÐ ವೈದ್ಯರನ್ನು ನೇಮಿಸಲು ಒಂದು ತಿಂಗಳ ಕಾಲಾವಕಾಶ ನೀಡುವಂತೆ ಕೋರಿದರು. ಇವರ ಕೋರಿಕೆಗೆ ಮನ್ನಣೆ ನೀಡಿದ ಪ್ರತಿಭಟನಾಕಾರರು ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದರು.

ಪ್ರತಿಭಟನೆಯಲ್ಲಿ ತಾಲೂಕು ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಬಿದ್ದಾಟಂಡ ಜಿನ್ನು ನಾಣಯ್ಯ. ಜೆ.ಡಿ.ಎಸ್. ನಾಯಕ ಮನ್ಸೂರ್ ಆಲಿ, ಬಿ.ಜೆ.ಪಿ. ಪ್ರಮುಖರಾದ ಕೇಟೋಳಿರ ಹರೀಶ್ ಪೂವಯ್ಯ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಚಂಗಂಡ ಸೂರಜ್, ಕಿಶೋರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೇಯಂಡ ಸಾಬ ತಿಮ್ಮಯ್ಯ, ಸದಸ್ಯರಾದ ಜಗದೀಶ್, ಜ್ಯೋತಿ, ಸುಶೀಲಮ್ಮ, ಮುತ್ತುರಾಣಿ ಅಚ್ಚಪ್ಪ, ಎಂ.ಎಂ. ಆಮೀನ, ವನಜಾಕ್ಷಿ, ಕುಶಾಲಪ್ಪ, ಖುರೇಶಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ತಾಲೂಕು ಪಂಚಾಯಿತಿ ಸದಸ್ಯರಾದ ಉಮಾ ಪ್ರಭು, ಇಂದಿರಾ ಹರೀಶ್, ಪಾಡಿಯಮ್ಮಂಡ ಮನು, ಟಿ.ಎ ಹನೀಫ್, ಕನ್ನಂಬಿರ ಸುಧಿ ತಿಮ್ಮಯ್ಯ, ಅಬ್ದುಲ್ ರಜಾಕ್, ದೇವರಾಜ್, ಮತ್ತಿತರರು ಇದ್ದರು.

ಸೋಮವಾರಪೇಟೆ: ಜಿಟಿ ಜಿಟಿ ಮಳೆಯ ನಡುವೆ ಸಂತೆ ದಿನವಾದ ಸೋಮವಾರದಂದು ಸೋಮವಾರಪೇಟೆ ಪಟ್ಟಣ ಸರಣಿ ಪ್ರತಿಭಟನೆಯ ಬಿಸಿ ಅನುಭವಿಸಿತು. ವಿವಿಧ ಬೇಡಿಕೆ, ಆಗ್ರಹಗಳನ್ನು ಮುಂದಿಟ್ಟುಕೊಂಡು ನಗರದಲ್ಲಿ ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಲೂಕು ಕಚೇರಿಯಲ್ಲಿ ಸಮರ್ಪಕವಾಗಿ ಸೇವೆಗಳು ಲಭ್ಯವಾಗುತ್ತಿಲ್ಲ ಎಂದು ಆರೋಪಿಸಿ ಜಾತ್ಯತೀತ ಜನತಾದಳದ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ತಾಲೂಕಿನ ಪುಷ್ಪಗಿರಿ ವ್ಯಾಪ್ತಿಯನ್ನು ಸೂಕ್ಷ್ಮ ಪರಿಸರ ತಾಣಕ್ಕೆ ಸೇರ್ಪಡೆಗೊಳಿಸುತ್ತಿರುವ ಹಿನ್ನೆಲೆ ಮೂಲನಿವಾಸಿಗಳ ಹಿತರಕ್ಷಣೆ ಕಾಪಾಡಬೇಕೆಂದು ಆಗ್ರಹಿಸಿ ಅಲ್ಲಿನ ಮೂಲ ನಿವಾಸಿಗಳು ತಾಲೂಕು ಕಚೇರಿ ಎದುರು ಧರಣಿ ನಡೆಸಿದರು. ಬಂಟ್ವಾಳದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಯನ್ನು ಖಂಡಿಸಿ ಬಿಜೆಪಿ ವತಿಯಿಂದ ಬಸ್‍ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು.

ಅವ್ಯವಸ್ಥೆ ಖಂಡಿಸಿ ಬೀದಿಗಿಳಿದ ಜೆಡಿಎಸ್: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಮರ್ಪಕವಾಗಿ ವೈದ್ಯರಿಲ್ಲ. ಸಣ್ಣಪುಟ್ಟ ಖಾಯಿಲೆಗಳಿಗೂ ಮಡಿಕೇರಿ ಸೇರಿದಂತೆ ಮೈಸೂರು, ಹಾಸನ, ಮಂಗಳೂರಿಗೆ ತೆರಳಬೇಕಿದೆ. 12 ವೈದ್ಯರುಗಳಿರಬೇಕಾದ ಆಸ್ಪತ್ರೆಯಲ್ಲಿ ಕೇವಲ 4 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆಯನ್ನೂ ಕರೆದಿಲ್ಲ ಎಂದು ಜೆಡಿಎಸ್ ಕಾರ್ಯಕರ್ತರು ಆರೋಪಿಸಿದರು.

ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲ ರಾಗಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರೂ ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳಿದ್ದರೂ ಶಾಸಕರು ಹಾಗೂ ಜಿಲ್ಲಾಡಳಿತ, ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ನಗರದ ಮುಖ್ಯರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ತೆರಳಿದ ಕಾರ್ಯಕರ್ತರು ಸರ್ಕಾರಿ ಆಸ್ಪತ್ರೆಯ ಎದುರು ಜಮಾವಣೆಗೊಂಡು ಅವ್ಯವಸ್ಥೆಯ ವಿರುದ್ಧ ಆಕ್ರೋಶದ ನುಡಿಯಾಡಿದರು.

ಮುಂದಿನ ಒಂದು ತಿಂಗಳ ಒಳಗೆ ಅವ್ಯವಸ್ಥೆಯನ್ನು ಸರಿಪಡಿಸದಿದ್ದಲ್ಲಿ ಜೆಡಿಎಸ್ ವತಿಯಿಂದ ಆಸ್ಪತ್ರೆಗೆ ಬೀಗಜಡಿದು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವದು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಕ್ಷದ ಜಿಲ್ಲಾ ಉಸ್ತುವಾರಿ ವಿ.ಎಂ. ವಿಜಯ ಎಚ್ಚರಿಸಿದರು. ಈ ಬಗೆಗಿನ ಮನವಿ ಸ್ವೀಕರಿಸಿದ ಆಸ್ಪತ್ರೆಯ ಆಡಳಿತಾಧಿಕಾರಿ ಆನಂದ್‍ಕುಮಾರ್ ಮಾತನಾಡಿ,ಕಳೆದ ಏಪ್ರಿಲ್‍ನಲ್ಲಿಯೇ ಆರೋಗ್ಯ ರಕ್ಷಾ ಸಮಿತಿಯ ಸಭೆನಡೆಸಲಾಗಿದೆ. ವೈದ್ಯರ ಕೊರತೆ ಬಗ್ಗೆ ಖುದ್ದು ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಶಾಸಕರೂ ಸಹ ಇಲಾಖೆಯೊಂದಿಗೆ ಮಾತುಕತೆ ನಡೆಸಿದ್ದು, ಈ ಆಸ್ಪತ್ರೆಗೆ ವೈದ್ಯರುಗಳೇ ಆಗಮಿಸುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ನಂತರ ಪಕ್ಷದ ಮುಖಂಡ ಬಿ.ಎ. ಜೀವಿಜಯ ಅವರ ನೇತೃತ್ವದಲ್ಲಿ ತಾಲೂಕು ಕಚೇರಿಗೆ ಆಗಮಿಸಿದ ಪಕ್ಷದ ಕಾರ್ಯಕರ್ತರು, ಕಚೇರಿಯ ಅವ್ಯವಸ್ಥೆಗಳ ವಿರುದ್ಧ ದನಿ ಎತ್ತಿದರು. ಸಾರ್ವಜನಿಕರ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಎಲ್ಲಾ ಕೆಲಸಗಳಿಗೂ ಲಂಚದ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿದರು.

ಎಂ.ಸಿ. ನಕಲು ಪಡೆಯಲು 200 ರೂ. ಕೇಳುತ್ತಾರೆ. ಜನನ ಮರಣ ಪತ್ರಕ್ಕೆ ತಿಂಗಳುಗಟ್ಟಲೆ ಅಲೆದಾಡಿಸುತ್ತಾರೆ. ಪಡಿತರ ಚೀಟಿ ವ್ಯವಸ್ಥೆ ಸಮರ್ಪಕ ವಾಗಿಲ್ಲ. ಕೆಲವೊಂದು ಸಿಬ್ಬಂದಿಗಳು ಮಧ್ಯಾಹ್ನದ ವೇಳೆಗೆ ಪಾನಮತ್ತ ರಾಗಿರುತ್ತಾರೆ. ಹೆಚ್ಚುವರಿ ಆರ್‍ಟಿಸಿ ಕೌಂಟರ್ ತೆರೆದಿಲ್ಲ ಎಂದು ಆರೋಪಗಳ ಸುರಿಮಳೆಗೈದರಲ್ಲದೇ, ಇವುಗಳನ್ನು ನಿಯಂತ್ರಿಸುವಲ್ಲಿ ಜನಪ್ರತಿನಿಧಿಗಳೂ ವಿಫಲರಾಗಿದ್ದಾರೆ ಎಂದು ದೂರಿದರು.

ತಕ್ಷಣ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸುವ ಮನವಿ ಪತ್ರವನ್ನು ಶಿರಸ್ತೇದಾರ್ ಪೊನ್ನು ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್, ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್, ಮುಖಂಡರಾದ ಕಾಟ್ನಮನೆ ವಿಠಲ್ ಗೌಡ, ಎನ್.ಎಸ್. ಗೀತಾ, ಅಜೀಶ್‍ಕುಮಾರ್, ಎಸ್.ಎಂ. ಡಿಸಿಲ್ವಾ, ಬಗ್ಗನ ಅನಿಲ್‍ಕುಮಾರ್, ಕೆ.ಟಿ. ಪರಮೇಶ್, ಪ್ರವೀಣ್, ಚಂದ್ರಶೇಖರ್, ಆದಿಲ್ ಪಾಷ, ಬೋಜಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

ಮೂಲನಿವಾಸಿಗಳ ರಕ್ಷಣೆಗೆ ಆಗ್ರಹ: ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶಗಳ ಕೆಲವೇ ಗ್ರಾಮಗಳನ್ನು ಮಾತ್ರ ಸೂಕ್ಷ್ಮ ಪರಿಸರ ತಾಣ ಎಂದು ಘೋಷಿಸಿದ್ದು, ಇಲ್ಲಿರುವ ಅತ್ಯಮೂಲ್ಯ ಜೀವರಾಶಿ, ಬೆಟ್ಟಗುಡ್ಡ, ನದಿತೊರೆಗಳನ್ನು ಸಂರಕ್ಷಿಸಬೇಕಿದೆ. ಈ ಹಿನ್ನೆಲೆ ಪಶ್ಚಿಮಘಟ್ಟ ಪ್ರದೇಶಗಳನ್ನು ಸಂಪೂರ್ಣವಾಗಿ ಸೂಕ್ಷ್ಮ ಪರಿಸರ ತಾಣ ಎಂದು ಘೋಷಿಸಿ, ಇಲ್ಲಿರುವ ಮೂಲನಿವಾಸಿಗಳ ಹಿತರಕ್ಷಣೆ ಯೊಂದಿಗೆ, ಪರಿಸರಕ್ಕೆ ಪೂರಕವಾದ ಕೃಷಿ ಮತ್ತು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಪುಷ್ಪಗಿರಿ ಮೂಲನಿವಾಸಿಗಳ ಸಂಘ ಆಗ್ರಹಿಸಿದೆ.

ತಾಲೂಕು ಕಚೇರಿ ಎದುರು ಧರಣಿ ನಡೆಸಿದ ಸಂಘದ ಪದಾಧಿಕಾರಿಗಳು, ಈ ಭಾಗದಲ್ಲಿ ಕೆಲವು ಕುಗ್ರಾಮಗಳನ್ನು ಮಾತ್ರ ಗುರುತಿಸಿ ಸೂಕ್ಷ್ಮ ಪ್ರದೇಶವೆಂದು ಘೋಷಿಸಿರುವ ಹಿಂದೆ ರಾಜಕೀಯ ಷಡ್ಯಂತ್ರ್ಯ ಅಡಗಿದೆ. ಪುಷ್ಪಗಿರಿ ವ್ಯಾಪ್ತಿಯಲ್ಲಿ ನೆಲೆನಿಂತಿರುವ ಮೂಲನಿವಾಸಿಗಳಿಗೆ ವಿಶೇಷ ಆದ್ಯತೆ ನೀಡಬೇಕು. ಪರಿಸರ ಪೂರಕ ಅಭಿವೃದ್ಧಿ, ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕು. ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಇಲ್ಲಿನವರ ಹಿತ ಕಾಯಬೇಕು. ಇದರೊಂದಿಗೆ ಪರಿಸರ ಸಂರಕ್ಷಣೆಗೂ ಮುಂದಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂಬಂಧಿತ ಮನವಿ ಪತ್ರವನ್ನು ಶಿರಸ್ತೇದಾರ್ ಪೊನ್ನು ಅವರ ಮುಖಾಂತರ ಭಾರತ ಸರ್ಕಾರದ ಪರಿಸರ ಖಾತೆ ಮತ್ತು ಪ್ರಧಾನ ಮಂತ್ರಿಗಳಿಗೆ ಕಳುಹಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಎಂ.ಎಸ್. ಚಂದ್ರಶೇಖರ್, ಕಾರ್ಯದರ್ಶಿ ಎಂ.ಟಿ. ದಿನೇಶ್, ಸಹ ಕಾರ್ಯದರ್ಶಿ ಕಿರಣ್‍ಕುಮಾರ್, ಬೆಟ್ಟದಳ್ಳಿ ಗ್ರಾ.ಪಂ. ಸದಸ್ಯ ಮಾಚಯ್ಯ, ಪ್ರಮುಖರಾದ ಯೋಗೇಶ್, ಸೋಮಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.

ಶರತ್ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ: ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ. ರೋಡ್‍ನಲ್ಲಿ ನಡೆದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಹತ್ಯೆಯನ್ನು ಖಂಡಿಸಿ, ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಿದ ಕಾರ್ಯಕರ್ತರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಮುಖಂಡರ ಹತ್ಯೆಗಳು ಎಗ್ಗಿಲ್ಲದೇ ನಡೆಯುತ್ತಿದೆ. ಕೊಲೆಗಡುಕರನ್ನು ಬಂಧಿಸಲು ವಿಫಲವಾಗಿರುವ ಕಾಂಗ್ರೆಸ್ ಸರ್ಕಾರ ಒಂದು ವರ್ಗದ ತುಷ್ಟೀಕರಣದಲ್ಲೇ ಕಾಲ ಕಳೆಯುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭ ಮಾತನಾಡಿದ ಪಕ್ಷದ ಜಿಲ್ಲಾ ವಿಸ್ತಾರಕ್ ಉಸ್ತುವಾರಿ ಸುಲೋಚನಾ ಭಟ್, ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಷಡ್ಯಂತ್ರದ ಮೂಲಕ ಹತ್ಯೆ ಮಾಡಲಾಗುತ್ತಿದೆ. ಜೆಹಾದಿ ಭಯೋತ್ಪಾದಕರು ರಾಜ್ಯದಲ್ಲಿ ರಕ್ತದ ಕೋಡಿ ಹರಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದ ಸರ್ಕಾರ ಮತಗಳಿಕೆಯ ಉದ್ದೇಶದಿಂದ ಕೈಕಟ್ಟಿ ಕುಳಿತಿದೆ. ಈ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿ ಮೊಕದ್ದಮೆ ಎದುರಿಸುತ್ತಿದ್ದ ದುಷ್ಕರ್ಮಿಗಳ ಮೇಲಿನ ಕೇಸ್‍ಗಳನ್ನು ವಾಪಸ್ ಪಡೆಯಲಾಯಿತು. ಇದರ ಪರಿಣಾಮವೇ ಇಂದು ಹಿಂದೂ ಸಮಾಜದ ಮೇಲಿನ ಆಕ್ರಮಣಗಳು ಎಂದ ಅವರು, ಇಂತಹ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ತಾಲೂಕು ಕಚೇರಿಗೆ ತೆರಳಿ, ಶರತ್ ಹತ್ಯೆ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಹಿಂದೂಪರ ಸಂಘಟಕರಿಗೆ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸುವ ಮನವಿ ಪತ್ರವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸದಸ್ಯೆ ತಂಗಮ್ಮ, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಪಕ್ಷದ ತಾಲೂಕು ಅಧ್ಯಕ್ಷ ಕುಮಾರಪ್ಪ, ಕಾರ್ಯದರ್ಶಿ ಮನುಕುಮಾರ್ ರೈ, ನಗರಾಧ್ಯಕ್ಷ ಸೋಮೇಶ್, ಮುಖಂಡರಾದ ನಳಿನಿ ಗಣೇಶ್, ಲೀಲಾ ನಿರ್ವಾಣಿ, ಸುಷ್ಮಾ, ಸುಶೀಲ, ಜೆ.ಸಿ. ಶೇಖರ್, ಟಿ.ಕೆ. ರಮೇಶ್, ಕೆ.ಜಿ. ಸುರೇಶ್, ಕಿಬ್ಬೆಟ್ಟ ಮಧು, ಸುಧಾಕರ್ ಸೇರಿದಂತೆ ಇತರರು ಭಾಗವಹಿಸಿದ್ದರು.