ಮಡಿಕೇರಿ, ಜು. 18: ಸುಳ್ಳು ಹಾಗೂ ಭಾವನಾತ್ಮಕ ವಿಚಾರ ಗಳನ್ನು ಮುಂದಿಟ್ಟು ಕೊಂಡು ಬಿಜೆಪಿ ಕೋಮುವಾದವನ್ನು ಸೃಷ್ಟಿಸಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುತ್ತಿದೆ ಎಂದು ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದರು. ನಗರದ ಕಮ್ಯೂನಿಟಿ ಹಾಲ್‍ನಲ್ಲಿ ನಡೆದ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ವಿವಿಧ ಭಾಗ್ಯಗಳ ಯೋಜನೆ ಮತ್ತು ಬಡವರಿಗೆ ಪೂರಕವುಳ್ಳ ಕಾರ್ಯಕ್ರಮಗಳನ್ನು ರೂಪಿಸಿ ರಾಜ್ಯದ ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನು ಸಹಿಸದ ಬಿಜೆಪಿ ಅವರು ಕಾಂಗ್ರೆಸ್ ಮೇಲೆ ಸಲ್ಲದ ಆರೋಪ ಮಾಡುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ಮತ್ತೆ ಸರಕಾರ ಎರಡನೇ ಭಾರಿ ಅಧಿಕಾರ ಪಡೆಯುವ ಎಲ್ಲ ಲಕ್ಷಣಗಳು ಇದೆ. ಬಿಜೆಪಿಯ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆಯವರ ಸುಳ್ಳು ಮಾತನ್ನು ಜನತೆ ತಿರಸ್ಕರಿಸುತ್ತಿದ್ದಾರೆ.

ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲೂ ಮುಂದಿನ ಚುನಾವಣೆ ಯನ್ನು ಗೆಲ್ಲಲ್ಲು ಶ್ರಮಿಸಲಾಗುವದು. ಆದರಿಂದ ಉತ್ತಮ ಆಭ್ಯರ್ಥಿಯನ್ನು ನೇಮಿಸಲು ಕಾರ್ಯ ಕರ್ತರ ಸಹಕಾರ ಅಗತ್ಯವಿದೆ ಎಂದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಶೀಘ್ರದಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕವಾಗಬೇಕು. ಬೂತ್ ಮಟ್ಟದ ಸಮಿತಿ ಮೊದಲು ಸಂಘಟನೆಗೊಳ್ಳ ಬೇಕು. ಕೆಲವು ವಲಯಗಳ ಅಧ್ಯಕ್ಷರು ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿಲ್ಲವಾದಲ್ಲಿ ಅಂತವ ರನ್ನು ಬದಲಾವಣೆ ಮಾಡಬೇಕಾದ ಅಗತ್ಯ ಕೂಡ ಇದೆ ಎಂದರು.

ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ ರಮೇಶ್ ಮಾತನಾಡಿ, ಮುಂದಿನ ವಿಧಾನಸಭಾ ಕ್ಷೇತ್ರದ ಚುನಾವಣೆ ನಿಟ್ಟಿನಲ್ಲಿ ಮತ ಗಟ್ಟೆ ಸಮಿತಿಯನ್ನು ಪುನರ್ ಸಂಘಟನೆ ಮಾಡಬೇಕು. ಪ್ರತಿಯೊಬ್ಬರು ಪಕ್ಷಕ್ಕೆ ಮೊದಲು ಆದ್ಯತೆಯನ್ನು ನೀಡಬೇಕು ಎಂದರು.

ಕಾಂಗ್ರೆಸ್‍ಗೆ 130 ವರ್ಷಗಳ ಇತಿಹಾಸವಿದೆ. ಯಾರು ಪಕ್ಷವನ್ನು ಬಿಟ್ಟು ಹೋದರೂ ಕಾಂಗ್ರೆಸ್‍ಗೆ ನಷ್ಟವಿಲ್ಲ. ನಾವುಗಳು ಸರಕಾರದ ಕಾರ್ಯಕ್ರಮವನ್ನು ಮನೆಮನೆಗೆ ತಿಳಿಸಲು ಪ್ರಯತ್ನಿಸಬೇಕು ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ಮಾತನಾಡಿ, ಪಕ್ಷ ಸಂಘಟನೆ ದೃಷ್ಟಿಯಿಂದ ಹಿರಿಯರು ಹೆಚ್ಚಿನ ಒತ್ತಡ ಹಾಕುತ್ತಿದ್ದಾರೆ. ನಾನು ಈ ಒತ್ತಡವನ್ನು ಕಾರ್ಯಕರ್ತರ ಮೇಲೆ ಹಾಕುವದು. ಅನಿವಾರ್ಯ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಎಂ. ಇಬ್ರಾಹಿಂ ಹಿಂದುಗಳ ಮತವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಬಿಜೆಪಿ ಕೋಮು ಗಲಭೆಯನ್ನು ಉಂಟುಮಾಡುತ್ತಿದೆ ಎಂದು ಆರೋಪಿಸಿದರು.

ಹಿರಿಯ ವಕೀಲ ಚಂದ್ರಮೌಳಿ ಮಾತನಾಡಿ ಈ ಹಿಂದೆ ಕಮಲ ಕಾಂಗ್ರೆಸ್ ಇತ್ತು. ಇದೀಗ ಇದರೊಂದಿಗೆ ತೆನೆ ಕಾಂಗ್ರೆಸ್ ಕೂಡ ಸೇರ್ಪಡೆಗೊಂಡಿದೆ ಎಂದು ಟೀಕಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಅರುಣ್ ಮಾಚಯ್ಯ, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತ ಮತ್ತಿತರರು ಪಾಲ್ಗೊಂಡಿದ್ದರು. ಸಭೆಯಲ್ಲಿ ಪಕ್ಷ ಸಂಘಟನೆ ಬಗ್ಗೆ ಸಂವಾದ ನಡೆಯಿತು.