ಮಡಿಕೇರಿ, ಜು. 18: ಕಾವೇರಿ ತವರು ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಜೂನ್ ತಿಂಗಳಿನಿಂದ ಆರಂಭಗೊಂಡು ಆಗಸ್ಟ್, ಸೆಪ್ಟೆಂಬರ್ ತನಕವೂ ಸುರಿಯುವದು ವಾಡಿಕೆ. ಆದರೆ ಪ್ರಸಕ್ತ ವರ್ಷ ಜುಲೈ ಮಾಸದ ಅರ್ಧ ಭಾಗ ಕಳೆದರೂ ಈ ಹಿಂದಿನ ವರ್ಷಗಳಂತೆ ಮಳೆಯಾಗಿರಲಿಲ್ಲ. ವಾತಾವರಣದ ಏರುಪೇರು ಸಹಜವಾಗಿಯೇ ಜನತೆಯಲ್ಲಿ ದಿಗಿಲು ಮೂಡಿಸುತಿ ತ್ತಲ್ಲದೆ ಹಲವೆಡೆ ಮಳೆಗಾಲದ ಈ ಸಂದರ್ಭದಲ್ಲೇ ಜಲಕ್ಷಾಮದ ಆತಂಕ ಸೃಷ್ಟಿಯಾಗಿತ್ತು.ಇದೀಗ ಒಂದೆರಡು ದಿನದಿಂದ ಜಿಲ್ಲೆಯ ಹಲವೆಡೆಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಕುರಿತು ವರದಿಯಾಗಿದೆ. ಇದೀಗ ಪುನರ್ವಸು ಮಳೆ ನಕ್ಷತ್ರವಿದ್ದು, ಈ ಮಳೆ ಕೊನೆಯ ಹಂತ ತಲಪಿದೆ. ಈ ಸಂದರ್ಭದಲ್ಲಿ ಪುನರ್ವಸು ಸ್ವಲ್ಪಮಟ್ಟಿಗೆ ಬಿರುಸು ತೋರುತ್ತಿರುವದು ರೈತಾಪಿ ವರ್ಗಕ್ಕೆ ಹಾಗೂ ನೀರಿನ ಭೀತಿ ಎದುರಿಸುತ್ತಿದ್ದ ಜನತೆಗೆ ತುಸು ಭರವಸೆ ಮೂಡಿಸುತ್ತಿದೆ.

ದಕ್ಷಿಣ ಕೊಡಗಿನಲ್ಲಂತೂ ಈ ತನಕ ಬಹುತೇಕ ಬೇಸಿಗೆಯ ಮಾದರಿಯ ಚಿತ್ರಣ ಕಂಡುಬಂದಿದ್ದು, ಜನತೆ ಆತಂಕಪಡುವಂತಾಗಿತ್ತು. ಇದೀಗ ನಿನ್ನೆಯಿಂದ ಬಹುತೇಕ ಕಡೆಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲೂ ಸ್ವಲ್ಪಮಟ್ಟಿಗೆ ಉತ್ತಮ ಮಳೆಯಾಗುತ್ತಿದೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ಮಂಜಿನನಗರಿಯಲ್ಲಿ ತೀರಾ ಚಳಿಯ ವಾತಾವರಣ ಕಂಡು ಬರುತ್ತಿದೆ. ಮಾತ್ರವಲ್ಲದೆ ಒಂದಷ್ಟು ರಭಸದ ಗಾಳಿಯೂ ನೈಜ ಮಳೆಗಾಲದ ಅನುಭವ ಮೂಡಿಸುತ್ತಿದೆ. ಕಳೆದ ರಾತ್ರಿ ಕನಿಷ್ಟ ಉಷ್ಣಾಂಶ 17.3 ಡಿಗ್ರಿ ಸೆಲ್ಸಿಯಸ್‍ನಷ್ಟಾಗಿತ್ತು.

ವಿಶೇಷವೆಂದರೆ ಹೆಚ್ಚು ಮಳೆಯಾಗುವ ಭಾಗಮಂಡಲದಲ್ಲಿ ನಿನ್ನೆ ಸ್ವಲ್ಪ ಮಳೆಯಾಗಿದ್ದರೂ

ತಾ. 18 ರಂದು ಅಪರಾಹ್ನದ ತನಕ ಮಳೆ ಕಡಿಮೆಯಾಗಿತ್ತು.

ಕಳೆದ 24 ಗಂಟೆಗಳಲ್ಲಿ ದಕ್ಷಿಣ ಕೊಡಗಿನ ಬಿರುನಾಣಿ, ಶ್ರೀಮಂಗಲ, ಪೊನ್ನಂಪೇಟೆ ನಾಪೋಕ್ಲು ಸೋಮವಾರಪೇಟೆ, ಮಡಿಕೇರಿ, ಭಾಗಮಂಡಲ, ಶಾಂತಳ್ಳಿ, ಶನಿವಾರಸಂತೆ ವ್ಯಾಪ್ತಿಯ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ.

ಭಾಗಮಂಡಲದಲ್ಲಿ

ಭಾಗಮಂಡಲದಲ್ಲಿ ಇಂದು ಬೆಳಿಗ್ಗೆ ಮಳೆಯ ಪ್ರಮಾಣ ಕಡಿಮೆ ಇತ್ತಾದರೂ ಅಪರಾಹ್ನ ನಂತರ ಬಿರುಸುಗೊಂಡಿದೆ. ತ್ರಿವೇಣಿ ಸಂಗಮದಲ್ಲಿ

(ಮೊದಲ ಪುಟದಿಂದ) ನೀರಿನ ಮಟ್ಟ ಏರಿಕೆಯಾಗುತ್ತಿದೆ. ತಲಕಾವೇರಿ ರಸ್ತೆಯಲ್ಲಿ ಬರೆ ಕುಸಿತವಾಗಿದೆ. ಆದರೆ ರಸ್ತೆ ಸಂಚಾರಕ್ಕೆ ಯಾವದೇ ಅಡಚಣೆಯಾಗಿಲ್ಲ.

ಕುಶಾಲನಗರ: ಕುಶಾಲನಗರ, ಕೂಡಿಗೆ, ಕೊಪ್ಪ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಗಳಲ್ಲಿ ಮಂಗಳವಾರ ನಿರಂತರ ಮಳೆಯಾಗಿದೆ. ಸುಮಾರು ಅರ್ಧ ಗಂಟೆಗಳಿಗೂ ಅಧಿಕ ಕಾಲ ಎಡೆಬಿಡದೆ ಮಳೆ ಸುರಿದ ಹಿನ್ನೆಲೆಯಲ್ಲಿ ರಸ್ತೆ, ಚರಂಡಿಗಳಲ್ಲಿ ನೀರು ತುಂಬಿ ಹರಿಯುತ್ತಿದ್ದ ದೃಶ್ಯ ಗೋಚರಿಸಿತು. ಜುಲೈ ತಿಂಗಳಲ್ಲೂ ಬಿರುಬಿಸಿಲಿನ ವಾತಾವರಣದಿಂದ ಜನತೆ ಹಾಗೂ ರೈತಾರ್ಪಿ ವರ್ಗ ಕಂಗೆಟ್ಟಿದ್ದರು. ಕಳೆದೆರೆಡು ದಿನಗಳಿಂದ ತುಂತುರು ಮಳೆ ಬಿಸಿಲಿನ ಮಿಶ್ರ ವಾತಾವರಣ ಆತಂಕ ಮೂಡಿಸಿತ್ತು. ಆದರೆ ಮಂಗಳವಾರ ಸುರಿದ ಮಳೆಯಿಂದ ಜನರಲ್ಲಿ ತುಸು ಸಮಾಧಾನ ಕಂಡುಬಂದಿದೆ.

ಕಳೆದ 24 ಗಂಟೆಯಲ್ಲಿ ಮಡಿಕೇರಿ ಹೋಬಳಿಯಲ್ಲಿ 1.09, ನಾಪೋಕ್ಲು 1.19, ಸಂಪಾಜೆ 1.04 ಇಂಚು, ಭಾಗಮಂಡಲ 2.20, ವೀರಾಜಪೇಟೆ 0.71, ಹುದಿಕೇರಿ 1.22, ಶ್ರೀಮಂಗಲ 1.62, ಪೊನ್ನಂಪೇಟೆ 1.14, ಅಮ್ಮತ್ತಿ 0.54, ಬಾಳೆಲೆ 0.96, ಸೋಮವಾರಪೇಟೆ 1.10, ಶನಿವಾರಸಂತೆ 1.20, ಶಾಂತಳ್ಳಿ 2.93, ಕೊಡ್ಲಿಪೇಟೆ 0.91 ಇಂಚು ಮಳೆಯಾಗಿದೆ. ಜಿಲ್ಲೆಯ ಸರಾಸರಿ ಮಳೆ 1.17 ಇಂಚಾಗಿದೆ.

ಮಡಿಕೇರಿ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 1.38 ಇಂಚಾಗಿದೆ. ಜನವರಿಯಿಂದ ಈತನಕ 50.09 ಇಂಚು ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 62.44 ಇಂಚು ಮಳೆಯಾಗಿತ್ತು.

ವೀರಾಜಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 1.03 ಇಂಚು, ತಾಲೂಕಿನಲ್ಲಿ ಜನವರಿಯಿಂದ ಈತನಕ 31.78 ಇಂಚು ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 31.09 ಇಂಚಾಗಿತ್ತು.

ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ 1.11 ಇಂಚು ಮಳೆಯಾಗಿದೆ. ಜನವರಿಯಿಂದ ಈತನಕ 27.91 ಇಂಚು ಮಳೆಯಾಗಿದ್ದರೆ ಕಳೆದ ವರ್ಷ ಇದೇ ಅವಧಿಯಲ್ಲಿ 33.03 ಇಂಚು ಮಳೆಯಾಗಿತ್ತು.

ಹಾರಂಗಿ ಜಲಾಶಯದ ನೀರಿನ ಮಟ್ಟ

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು. ಇಂದಿನ ನೀರಿನ ಮಟ್ಟ 2840.18 ಅಡಿಗಳು. ಕಳೆದ ವರ್ಷ ಇದೇ ದಿನ 2858.01 ಅಡಿ. ಹಾರಂಗಿಯಲ್ಲಿ ಬಿದ್ದ ಮಳೆ 6.4 ಮಿಮೀ. ಕಳೆದ ವರ್ಷ ಇದೇ ದಿನ 0.00 ಮಿಮೀ. ಇಂದಿನ ನೀರಿನ ಒಳ ಹರಿವು 1274 ಕ್ಯೂಸೆಕ್. ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 3513 ಕ್ಯೂಸೆಕ್.