ಮಡಿಕೇರಿ, ಜು. 18: ಗ್ರಾಮೀಣ ಜನರಿಂದಲೇ ಗ್ರಾಮಗಳ ಅಭಿವೃದ್ಧಿ ಸಾಧ್ಯವೆಂದು ಅಭಿಪ್ರಾಯಪಟ್ಟಿರುವ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷರಾದ ಟಿ.ಪಿ.ರಮೇಶ್ ಎಲ್ಲಾ ಕೆಲಸ, ಕಾರ್ಯಗಳಿಗೂ ಜನಪ್ರತಿನಿಧಿ ಗಳನ್ನೇ ಅವಲಂಬಿಸಬಾರದೆಂದು ಕಿವಿ ಮಾತು ಹೇಳಿದ್ದಾರೆ. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಘಟಕದ ವತಿಯಿಂದ ಮೂರ್ನಾಡುವಿನ ಕಾಂಗ್ರೆಸ್ ಕಚೇರಿ ಮತ್ತು ಹೊದ್ದೂರು ಪಂಚಾಯಿತಿ ವ್ಯಾಪ್ತಿಯ ಪಾಲೆಮಾಡು ಕಾಲೋನಿಯಲ್ಲಿ ಗ್ರಾಮ ಸಂವಾದ ಕಾರ್ಯಕ್ರಮ ನಡೆಯಿತು.
ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಯೊಂದು ಗ್ರಾಮದ ಅಭಿವೃದ್ಧಿ ಗ್ರಾಮಸ್ಥರಿಂದಲೇ ಆಗಬೇಕು, ಪ್ರತಿ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಭಾಗವಹಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ಕರೆ ನೀಡಿದರು.
ಸಂಘಟನೆಯ ರಾಜ್ಯ ವಲಯ ಸಂಯೋಜಕ ಎಂ.ಎ. ರಂಗಸ್ವಾಮಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಜನಪ್ರಿಯ ಕಾರ್ಯಕ್ರಮಗಳನ್ನು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕಾರ್ಯ ಕರ್ತರು ಮನೆ ಮನೆಗೆ ತಿಳಿಸಬೇಕು. ಆ ಮೂಲಕ ಅರ್ಹ ಫಲಾನುಭ ವಿಗಳಿಗೆ ಸರಕಾರದ ಯೋಜನೆ ತಲಪುವಂತೆ ನೋಡಿಕೊಳ್ಳಬೇಕು ಮತ್ತು ಪಕ್ಷದ ಬಲವನ್ನೂ ಹೆಚ್ಚಿಸಬೇಕೆಂದರು. ಜನ ಜಾಗೃತಿ ಮೂಡಿಸಲು ಪ್ರತಿಯೊಂದು ಗ್ರಾಮದಲ್ಲೂ ಸಂವಾದಗಳು ನಡೆಯಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಂಯೋಜಕತೆನ್ನಿರಾ ಮೈನಾ, ಪಂಚಾಯತ್ ರಾಜ್ ವ್ಯವಸ್ಥೆಯನ್ನು ಕಾಂಗ್ರೆಸ್ ಪಕ್ಷ ಜಾರಿಗೆ ತಂದಿದ್ದು, ಇದರ ಪ್ರಯೋಜನ ಪ್ರತಿಯೊಬ್ಬರಿಗೂ ಸಿಗುವಂತೆ ಮಾಡುವದೇ ಸಂಘಟನೆಯ ಉದ್ದೇಶ ಮತ್ತು ಕರ್ತವ್ಯವಾಗಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಆಡಳಿತ ಮತ್ತು ವಿರೋಧ ಪಕ್ಷವಿದ್ದಂತೆ. ಇದನ್ನು ಅರಿತು ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಮೈನಾ ಕರೆ ನೀಡಿದರು.
ಸಂವಾದದಲ್ಲಿ ಉತ್ಸಾಹದಿಂದ ಪಾಲ್ಗೊಂಡ ಪಾಲೆಮಾಡು ಗ್ರಾಮಸ್ಥರು ಮೊದಲ ಬಾರಿಗೆ ನಮ್ಮ ಸಮಸ್ಯೆಯನ್ನು ಆಲಿಸುವದಕ್ಕಾಗಿ ಸಂವಾದವನ್ನು ಆಯೋಜಿಸಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕಾಳಜಿ ಅಭಿನಂದನಾರ್ಹವೆಂದರು.
ಮೂರ್ನಾಡು ವಲಯ ಕಾಂಗ್ರೆಸ್ ಅಧ್ಯಕ್ಷ ಮುಂಡಂಡ ಭಾಗೇಶ್, ಡಿಸಿಸಿ ಸದಸ್ಯ ವಜೀರ್, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಾಫಿ, ಗ್ರಾ.ಪಂ. ಉಪಾಧ್ಯಕ್ಷೆ ಕುಸುಮಾವತಿ, ಗ್ರಾ.ಪಂ. ಸದಸ್ಯರಾದ ಮೀನಾಕ್ಷಿ, ಕೇಶವ, ಬಿ.ಎಂ. ಹರೀಶ್, ಎಂ.ಇ. ಅಯ್ಯಪ್ಪ, ವಿ.ವೈ. ಸಂಧ್ಯಾ, ರಾಧ, ಬಿಂದುರಾಣಿ, ಸಮೀರ್, ಜಲೀಲ್, ಶರೀಫ್, ಶಾಹಿದ್, ಮೊಣ್ಣಪ್ಪ, ಕಾನ್ಶಿರಾಂ ನಗರದ ಪಾವನಿ, ಮಣಿ, ಉದಯ, ಸುಮ, ರಿಯಾಬ್, ರಾಜು, ದೇವಕ್ಕಿ, ಲಕ್ಷ್ಮಿ, ಬೋಜಿ, ಕುಸುಮ, ಗೋವಿಂದ, ಕಿಶೋರ್, ಸುರೇಶ್, ದಿವಾಕರ, ವಿಜು, ಪುನಿತ್ ರವಿಚಂದ್ರ, ಚೆಲುವ, ರಫೀಕ್, ಸಿದ್ದು, ಪಾವನ ಮತ್ತಿತರರು ಉಪಸ್ಥಿತರಿದ್ದರು.