ಸೋಮವಾರಪೇಟೆ, ಜು. 18 : ಮುಂದಿನ ವಿಧಾನ ಸಭಾ ಚುನಾವಣೆಗೆ 5 ತಿಂಗಳು ಇರುವಂತೆಯೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವದು. ಇದರ ವಿರುದ್ಧ ನಿಂತು ಪಕ್ಷ ಬಿಡುವವರು ಮುಂಚಿತವಾಗಿಯೇ ಹೊರಹೋದರೆ ಸಂಘಟನೆಯ ಕೆಲಸ ಸುಲಭವಾಗುತ್ತದೆ ಎಂದು ಟಿಕೇಟ್ ವಿಚಾರದಲ್ಲಿ ಬಂಡಾಯ ಏಳುವ ನಾಯಕರುಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಪರೋಕ್ಷ ಎಚ್ಚರಿಕೆ ನೀಡಿದರು.ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೊನೆಕ್ಷಣದಲ್ಲಿ ಅಭ್ಯರ್ಥಿ ಘೋಷಣೆಯಿಂದ ಪಕ್ಷದ ಆಂತರಿಕ ಗೊಂದಲ ಹೆಚ್ಚಾಗಿ ಅಭ್ಯರ್ಥಿ ಸೋಲುತ್ತಿದ್ದರು.
(ಮೊದಲ ಪುಟದಿಂದ) ಇದನ್ನು ತಪ್ಪಿಸಲು ಮುಂಚಿತವಾಗಿಯೇ ಘೋಷಣೆ ಮಾಡುತ್ತೇವೆ. ಎಲ್ಲರೂ ಒಮ್ಮತದಿಂದ ಅಭ್ಯರ್ಥಿಯ ಗೆಲುವಿಗೆ ಪಣತೊಡಬೇಕು. ಪಕ್ಷ ತ್ಯಜಿಸುವವರು ಬೇಗ ಹೊರಹೋದರೆ ಸಂಘಟನೆಗೂ ಹೆಚ್ಚು ಸಮಯ ಲಭಿಸುತ್ತದೆ ಎಂದರು.
ಬಿಜೆಪಿ ಕಾರ್ಯಕರ್ತರು ಇದೀಗ ಮನೆ ಮನೆಗೆ ತೆರಳಿ ಕೇಂದ್ರದ ಸಾಧನೆಗಳನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸುಳ್ಳು ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ಜನತೆಯ ದಿಕ್ಕು ತಪ್ಪಿಸುತ್ತಿದ್ದಾರೆ. ಯುಪಿಎ ಸರ್ಕಾರದ ಕಾರ್ಯ ಕ್ರಮಗಳನ್ನೇ ಎನ್‍ಡಿಎ ನಕಲು ಮಾಡುತ್ತಿದೆ. ಈ ಹಿಂದೆ ಬಿಜೆಪಿ ವಿರೋಧಿಸಿದ ಕಾರ್ಯಕ್ರಮಗಳಾದ ನರೇಗಾ, ಆಧಾರ್ ಯೋಜನೆಗಳನ್ನು ಇದೀಗ ಅಳವಡಿಸಿಕೊಳ್ಳುತ್ತಿದೆ. ಮೋದಿ ಸರ್ಕಾರ ನೂತನ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದೆ ಎಂದು ದೂರಿದರು.
ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷವಾದರೂ ಕೃಷಿಕರು, ಯುವಕರು, ಕಾರ್ಮಿಕರು, ಮಹಿಳೆಯರಿಗೆ ಯಾವದೇ ಯೋಜನೆಗಳನ್ನು ತಂದಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿಸುವದಾಗಿ ಭರವಸೆ ನೀಡಿ ಕೇವಲ 1.50 ಲಕ್ಷ ಉದ್ಯೋಗ ಸೃಷ್ಟಿಸಿದ್ದಾರೆ. ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು, ರಾಜ್ಯ ಸರ್ಕಾರ ಅನಿಲ ಭಾಗ್ಯ ಯೋಜನೆಯನ್ನು ಜಾರಿಗೆ ತಂದು ಪ್ರತಿ ಮನೆಗೂ ಗ್ಯಾಸ್ ಸಂಪರ್ಕ ಒದಗಿಸುತ್ತಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜನಪರವಾಗಿ ಕೆಲಸ ಮಾಡುತ್ತಿದೆ. ಒಂದೇ ಒಂದು ಭ್ರಷ್ಟಾಚಾರ ನಡೆದಿಲ್ಲ. ಇದರಿಂದ ಕಂಗೆಟ್ಟಿರುವ ಬಿಜೆಪಿ ಕೋಮುಭಾವನೆಯನ್ನು ಕೆರಳಿಸಿ ಹಿಂದುತ್ವದ ಅಸ್ತ್ರ ಪ್ರಯೋಗಿಸಿ ರಾಜಕೀಯ ಮಾಡುತ್ತಿದೆ. ಕೋಮುಗಲಭೆ ಸೃಷ್ಟಿಸಿ ಆ ಮೂಲಕ ಕೀಳು ಮಟ್ಟದ ರಾಜಕೀಯ ಲಾಭ ಪಡೆಯಲು ಆ ಪಕ್ಷ ಯತ್ನಿಸುತ್ತಿದೆ ಎಂದ ದಿನೇಶ್ ಗುಂಡೂರಾವ್, ಬಿಜೆಪಿಯಿಂದ ಮಾತ್ರ ಹಿಂದುತ್ವ ಉಳಿದಿಲ್ಲ. ಹಿಂದುತ್ವಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದರು.
ತಾ. 30ರ ಒಳಗೆ ಎಲ್ಲಾ ಬೂತ್‍ಗಳ ಸಮಿತಿ ರಚಿಸಿ ಪಟ್ಟಿ ನೀಡಬೇಕು. ತಪ್ಪಿದಲ್ಲಿ ಪಕ್ಷದ ವತಿಯಿಂದ ಕಠಿಣ ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಸಿದ ದಿನೇಶ್, ಒಗ್ಗಟ್ಟಿನ ಕಾರ್ಯತಂತ್ರದಿಂದ ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ವಿಧಾನ ಪರಿಷತ್ ಮಾಜೀ ಸದಸ್ಯ ಅರುಣ್ ಮಾಚಯ್ಯ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಹಲವು ಜನಪರ ಕಾರ್ಯಕ್ರಮಗಳಿದ್ದರೂ ಪ್ರಚಾರದ ಕೊರತೆ ಎದುರಿಸುತ್ತಿದೆ. ಯುಪಿಎ ಸರ್ಕಾರ ಈ ಹಿಂದೆ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿತ್ತು. ಇದರಲ್ಲಿ ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ರೈತರಿಗೆ 900 ಕೋಟಿ ಸಾಲಮನ್ನಾ ಆಗಿತ್ತು. ಈಗಿನ ಮೋದಿ ಸರ್ಕಾರ ಸಾಲಮನ್ನ ಮಾಡದೇ ರೈತರ ಹಿತ ಕಡೆಗಣಿಸಿದೆ ಎಂದು ಆರೋಪಿಸಿದರು.
ವೇದಿಕೆಯಲ್ಲಿ ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.