*ಗೋಣಿಕೊಪ್ಪಲು, ಜು. 18: ಮಳೆಗಾಲದ ರಸದೌತಣದ 5ನೇ ವರ್ಷದ ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟಕ್ಕೆ ಮತ್ತೆ ಪೊನ್ನಂಪೇಟೆ ಜೆ.ಸಿ.ಐ. ನಿಸರ್ಗ ಸಿದ್ಧವಾಗಿದೆ.

ತಾ. 30 ರಂದು ಬಿಟ್ಟಂಗಾಲ ಕುಪ್ಪಂಡ ಮೇಜರ್ ಜನರಲ್ ನಂಜಪ್ಪ ಅವರ ಗದ್ದೆಯಲ್ಲಿ ಕ್ರೀಡಾಕೂಟ ನಡೆಯಲಿದೆ. ರಾಜ್ಯ ಮಟ್ಟದ ಈ ಸ್ಪರ್ಧೆಯಲ್ಲಿ ಮಹಿಳೆ ಯರಿಗೆ ಹಾಗೂ ಪುರುಷರಿಗೆ ಹಗ್ಗ ಜಗ್ಗಾಟ, ಕೆಸರು ಗದ್ದೆ ಓಟ, ಪುರುಷರಿಗೆ ಫುಟ್‍ಬಾಲ್ ಸ್ಪರ್ಧೆ ಏರ್ಪಡಿಸಿದೆ ಎಂದು ಜೆ.ಸಿ.ಐ. ನಿಸರ್ಗದ ಅಧ್ಯಕ್ಷ ಆಪಟ್ಟಿರ ಟಾಟು ಮೊಣ್ಣಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಬಾರಿ ಸಬ್ ಜೂನಿಯರ್, ಜೂನಿಯರ್ ಎಂಬ ವಿಭಾಗದಲ್ಲಿ ಓಟ, ಸೀನಿಯರ್ ವಿಭಾಗಕ್ಕೆ ಓಟ ಮಹಿಳೆಯರಿಗೆ ಹಾಗೂ ಪುರುಷರಿಗೆ ಹಗ್ಗಜಗ್ಗಾಟ ನಡೆಯಲಿದ್ದು, ಕೇವಲ 48 ತಂಡಗಳಿಗೆ ಆದ್ಯತೆ ನೀಡಲಾಗುತ್ತದೆ. ಮೊದಲು ನೋಂದಾಯಿಸಿಕೊಂಡ ತಂಡಕ್ಕೆ ಅವಕಾಶವಿದೆ. ತಾ. 28 ರೊಳಗೆ ತಂಡಗಳು ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಹಿಂದಿನ ಕಾಲದಲ್ಲಿ ನಾಟಿ ಕೆಲಸ ಮುಗಿಸಿ ಅದೇ ನಾಟಿಯನ್ನು ತುಳಿಯದೆ ಓಡುವದು ಆಯಾಯ ಗ್ರಾಮಕ್ಕೆ ಮೀಸಲಾಗಿತ್ತಾದರೂ, ಕ್ರಮೇಣ ಕೆಸರು ಗದ್ದೆ ಕ್ರೀಡಾಕೂಟ ವಾಗಿ ಮಾರ್ಪಟ್ಟು, ಇದರಲ್ಲಿ ಇತರ ಕ್ರೀಡೆಯನ್ನು ಬಳಸಿಕೊಳ್ಳಲಾಯಿತು. ಮೊದಮೊದಲು ಮನರಂಜನೆಗೆ ಆರಂಭಗೊಂಡು ಇಂದು ವಿಶ್ವದ ಗಮನ ಸೆಳೆಯುತ್ತಿದೆ. ಈ ಕ್ರೀಡಾಕೂಟವನ್ನು ಉಳಿಸಿ ಬೆಳೆಸುವದು ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಜೆ.ಸಿ.ಐ. ನಿಸರ್ಗ ತಂಡ ಕಾರ್ಯಪ್ರವೃತ್ತರಾಗಿದ್ದು, 5ನೇ ವರ್ಷದ ಕ್ರೀಡಾಕೂಟ ನಡೆಸಲು ಸಿದ್ದತೆ ನಡೆದಿದೆ ಎಂದು ಹೇಳಿದರು.

ಕ್ರೀಡಾಕೂಟದಲ್ಲಿ ಭಾಗವಹಿಸುವ ತಂಡಗಳು ಹೆಚ್ಚಿನ ಮಾಹಿತಿಗಾಗಿ ಯೋಜನಾ ನಿರ್ದೇಶಕ ಕುಪ್ಪಂಡ ದಿಲನ್ ಬೋಪಣ್ಣ 9481883738 ಹಾಗೂ ಕಾರ್ಯದರ್ಶಿ ಸತೀಶ್ ಸಿಂಗಿ 9945265383 ಇವರನ್ನು ಸಂಪರ್ಕಿಸುವಂತೆ ಅವರು ತಿಳಿಸಿದರು.