ಮಡಿಕೇರಿ, ಜು. 18: ಬೆಂಗಳೂರಿನ ಭಾರತ್ ಎಲೆಕ್ಟ್ರಿಕಲ್ ಲಿಮಿಟೆಡ್ (ಬಿ.ಇ.ಎಲ್.) ಸಂಸ್ಥೆಯಿಂದ ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಕಟ್ಟಡವೊಂದು ನಿರ್ಮಾಣಗೊಳ್ಳುತ್ತಿದೆ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವರಾಜ್ ಅವರ ಪ್ರಯತ್ನದಿಂದ ಈ ಕೆಲಸ ಮುಂದುವರಿದಿದೆ. ಸರಕಾರಿ ಪ್ರಾಥಮಿಕ ಶಾಲೆಗೆ ಕಟ್ಟಡಗಳ ಕೊರತೆಯನ್ನು ಮನಗಂಡಿದ್ದ ಅಧಿಕಾರಿ ಬಸವರಾಜ್ ಅವರು, ಬೆಂಗಳೂರಿನ ಬಿ.ಇ.ಎಲ್. ಸಂಸ್ಥೆ ಮುಖ್ಯಸ್ಥರನ್ನು ಸಂಪರ್ಕಿಸಿ ಸರಕಾರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ರೂ. 2 ಕೋಟಿ ಹಣ ಕಲ್ಪಿಸುವಲ್ಲಿ ಸಫಲರಾಗಿದ್ದಾರೆ.
ಈ ಮೂಲಕ ನಗರದಲ್ಲಿ ತೀರಾ ಶಿಥಿಲಗೊಂಡಿದ್ದ ಸರಕಾರಿ ಶಾಲಾ ಕಟ್ಟಡ ತೆರವುಗೊಳಿಸಿ, ಪುಟಾಣಿ ಮಕ್ಕಳು ಹಾಗೂ ಶಿಕ್ಷಕರಿಗೆ ಮೂಲಭೂತ ಸೌಲಭ್ಯದೊಂದಿಗೆ ಸುಸಜ್ಜಿತ 12 ಕೊಠಡಿಗಳನ್ನು ನಿರ್ಮಿಸಲಾಗುತ್ತಿದ್ದು, ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ಮತ್ತು ಅಡುಗೆಕೋಣೆ ಇತ್ಯಾದಿ ರೂಪುಗೊಳ್ಳುತ್ತಿದೆ.
ಇನ್ನೊಂದೆಡೆ ರೂ. 1.40 ಕೋಟಿ ವೆಚ್ಚದ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಕಾಮಗಾರಿಯು ಸಂಬಂಧಿಸಿದ ಇಲಾಖೆಯಿಂದ ಸರಕಾರಿ ಅನುದಾನದೊಂದಿಗೆ ನಿರ್ಮಾಣಗೊಳ್ಳ ತೊಡಗಿದೆ. ಈ ಹಂತದಲ್ಲೇ ಅಧಿಕಾರಿ ಬಸವರಾಜ್ ಅವರನ್ನು ಬೆಂಗಳೂರಿಗೆ ವರ್ಗಾಯಿಸಿ ಸರಕಾರ ಆದೇಶಿಸಿದ್ದು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳಲ್ಲಿ ಬೇಸರ ಮೂಡಿಸಿದೆ.