ಮಡಿಕೇರಿ, ಜು. 18: ಮಡಿಕೇರಿ ತಾಲೂಕಿನಲ್ಲಿ 18 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಮಳೆ ಕೊರತೆ ಹಿನ್ನೆಲೆಯಲ್ಲಿ ಪ್ರಕರಣ ಪತ್ತೆಯಾಗಿದೆ. ಇದೀಗ ಮಳೆಯು ಆರಂಭಗೊಂಡಿರುವದರಿಂದ ಡೆಂಗ್ಯೂ ನಿಯಂತ್ರಣಕ್ಕೆ ಬಂದಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಪಾರ್ವತಿ ಸಭೆಯ ಗಮನಕ್ಕೆ ತಂದರು.ಮಡಿಕೇರಿ ತಾ.ಪಂ. ಕೆಡಿಪಿ ಸಭೆ ತಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ತೆಕ್ಕಡೆ ಶೋಭಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭ ಆರೋಗ್ಯಾಧಿ ಕಾರಿಗಳು ಮಾಹಿತಿ ನೀಡಿದರು.

ಮಡಿಕೇರಿ ತಾಲೂಕಿನ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ತೀವ್ರ ಎದುರಾಗಿದ್ದು, ಆಸ್ಪತ್ರೆಗಳಿಗೆ ಬರುವ ರೋಗಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ನೇಮಕಕ್ಕೆ ಕ್ರಮಕೈಗೊಳ್ಳಬೇಕಾಗಿದೆ ಎಂದರು.

ತಾ.ಪಂ. ಉಪಾಧ್ಯಕ್ಷೆ ಬೊಳಿಯಾಡಿರ ಸಂತು ಸುಬ್ರಮಣಿ ವಿಷಯ ಪ್ರಸ್ತಾಪಿಸಿ, ನಾಪೋಕ್ಲು ಆಸ್ಪತ್ರೆಯಲ್ಲಿ ಹಲವು ಸಮಯಗಳಿಂದ ವೈದ್ಯರ ಕೊರತೆ ಎದುರಾಗಿದೆ. ಆಸ್ಪತ್ರೆಯಲ್ಲಿರುವ ಮಹಿಳಾ ವೈದ್ಯರೊಬ್ಬರು ಆಸ್ಪತ್ರೆಗೆ ಬರುವ ರೋಗಿಗಳೆಲ್ಲರನ್ನು ತಪಾಸಣೆ ಮಾಡಿ ಔಷಧಿ ನೀಡುವ ಅನಿವಾರ್ಯತೆ ಯಿದೆ. ಆಸ್ಪತ್ರೆಯಲ್ಲಿ ವೈದ್ಯರನ್ನು ನೇಮಕಗೊಳಿಸುವಂತೆ ಆಗ್ರಹಿಸಿ ನಾಪೋಕ್ಲು ಹೋಬಳಿ ವ್ಯಾಪ್ತಿಯ ಸಾರ್ವಜನಿಕರು ನಿನ್ನೆ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಇದೇ ಸಂದರ್ಭ ಆಸ್ಪತ್ರೆಯಲ್ಲಿ 200ಕ್ಕೂ ಅಧಿಕ ಮಂದಿ

(ಮೊದಲ ಪುಟದಿಂದ) ರೋಗಿಗಳು ಇದ್ದರು ಎಂದು ಸಭೆಯ ಗಮನಕ್ಕೆ ತಂದ ಉಪಾಧ್ಯಕ್ಷರು, ಆಸ್ಪತ್ರೆಗೆ ಶೀಘ್ರ ತಜ್ಞ ವೈದ್ಯರುಗಳನ್ನು ನೇಮಕಗೊಳಿಸಲು ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಈ ಸಂದರ್ಭ ತಾಲೂಕು ಆರೋಗ್ಯಾಧಿಕಾರಿ ಡಾ. ಪಾರ್ವತಿ ಮಾತನಾಡಿ, ತಜ್ಞ ವೈದ್ಯರ ನೇಮಕಕ್ಕೆ ಆನ್‍ಲೈನ್ ಬಿಡ್ಡಿಂಗ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯಲ್ಲಿ ಸುಮಾರು 70 ಅರ್ಜಿಗಳು ಸಲ್ಲಿಕೆಯಾಗಿವೆ. ಮುಂದಿನ ಒಂದು ವಾರದಲ್ಲಿ ಸಮಸ್ಯೆ ಪರಿಹಾರವಾಗ ಬಹುದು ಎಂದು ಹೇಳಿದರು. ರೋಗಿಗಳು ಆಸ್ಪತ್ರೆಗೆ ಬಂದಾಗ ವೈದ್ಯರು ಹಾಗೂ ಸಿಬ್ಬಂದಿಗಳು ಸೌಜನ್ಯದಿಂದ ವರ್ತಿಸುವಂತೆ ಸಂತು ಸುಬ್ರಮಣಿ ಸಲಹೆ ನೀಡಿದರು.

ದೇವಸ್ತೂರು ಶಾಲೆ ಶಿಥಿಲಾವಸ್ಥೆ ಯಲ್ಲಿದ್ದು, ಪಕ್ಕದಲ್ಲೇ ಅಂಗನವಾಡಿ ಕೇಂದ್ರವಿದೆ. ಶಿಥಿಲಾವಸ್ಥೆಯ ಕಟ್ಟಡ ತೆರವುಗೊಳಿಸಲು 1 ವರ್ಷದಿಂದ ಆಗ್ರಹಿಸುತ್ತಿದ್ದರೂ, ಇದುವರೆಗೆ ಕ್ರಮಕೈಗೊಂಡಿಲ್ಲ. ಮುಂದಿನೆರಡು ದಿನದಲ್ಲಿ ಕ್ರಮಕೈಗೊಂಡು ಮಾಹಿತಿ ನೀಡುವಂತೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಯ್ ತಮ್ಮಯ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಆರ್.ಎಸ್. ಚೆಟ್ಟಳ್ಳಿ ಹಾಗೂ ಅಭ್ಯತ್‍ಮಂಗಲ ಶಾಲೆಗಳು ಶೈಕ್ಷಣಿಕವಾಗಿ ಮಡಿಕೇರಿ ತಾಲೂಕಿಗೆ ಸೇರಿದ್ದರೂ ಆಡಳಿತಾತ್ಮಕವಾಗಿ ಸೋಮವಾರಪೇಟೆ ತಾಲೂಕಿಗೆ ಸೇರುತ್ತದೆ. ಎರಡೂ ಶಾಲೆಯ ಮೇಲ್ಛಾವಣಿ ದುರಸ್ತಿಪಡಿಸಲು ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ನೆಲಸಮಗೊಳಿಸಲು ಪತ್ರವ್ಯವಹಾರ ಮಾಡಲಾಗಿದೆ. ಅಲ್ಲದೆ ಕೊಯನಾಡು ಶಾಲೆಯ ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ನೆಲಸಮ ಮಾಡಲು ಉಪನಿರ್ದೇಶಕರಿಂದ ಆಡಳಿತಾತ್ಮಕ ಅನುಮೋದನೆ ದೊರಕಿದ್ದು, ನಿಯಮಾನುಸಾರ ಕ್ರಮಕೈಗೊಳ್ಳಲು ಮುಖ್ಯ ಶಿಕ್ಷಕರಿಗೆ ಪತ್ರ ಬರೆಯಲಾಗಿದೆ.

ದೇವಸ್ತೂರು ಹಾಗೂ ಕುಂಜಿಲ ಕಕ್ಕಬೆ ಶಾಲೆಯ ಕಟ್ಟಡ ನೆಲಸಮ ಮಾಡಲು ಅಂದಾಜು ಪಟ್ಟಿಗಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಪತ್ರ ಬರೆಯ ಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಾಹಿತಿ ನೀಡಿದರು.

ಶಾಲೆ ಸೇರ್ಪಡೆಗೆ ಮಕ್ಕಳ ವಯಸ್ಸನ್ನು 5 ವರ್ಷ 10 ತಿಂಗಳಿಗೆ ನಿಗದಿಪಡಿಸಿರುವದರಿಂದ ಈ ವರ್ಷ ತಾಲೂಕಿನಲ್ಲಿ 1200 ಮಕ್ಕಳ ಕೊರತೆ ಎದುರಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಭೆಯ ಗಮನಕ್ಕೆ ತಂದರು.

ಕೃಷಿ ಇಲಾಖೆಯಿಂದ ಪ್ರೋತ್ಸಾಹಧನ

ಖರ್ಚನ್ನು ಕಡಿಮೆಗೊಳಿಸಿ ಉತ್ಪಾದಕತೆಯನ್ನು ಹೆಚ್ಚಿಸುವ ಮತ್ತು ಕೂಲಿಯಾಳುಗಳ ಸಮಸ್ಯೆ ನೀಗಿಸಿ ಸಮಯಕ್ಕೆ ಸರಿಯಾಗಿ ಬಿತ್ತನೆ, ನಾಟಿ ಕಾರ್ಯಕೈಗೊಳ್ಳಲು ಯಾಂತ್ರೀಕೃತ ನಾಟಿ ಪದ್ಧತಿ ಅನಿವಾರ್ಯವಾಗಿದ್ದು, ನಾಟಿ ಯಂತ್ರದ ಮೂಲಕ ಭತ್ತದ ನಾಟಿ ಮಾಡುವ ರೈತರಿಗೆ ಹೆಕ್ಟೇರಿಗೆ ರೂ. 4000 (ಪ್ರತಿ ಎಕರೆಗೆ 1600) ಕೃಷಿ ಇಲಾಖೆಯ ಮುಖಾಂತರ ಪ್ರೋತ್ಸಾಹಧನ ನೀಡಲಾಗುತ್ತದೆ. ಅರ್ಹ ರೈತರು ಪಡೆದುಕೊಳ್ಳಬಹುದು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಗಿರೀಶ್ ಸಭೆಯ ಗಮನಕ್ಕೆ ತಂದರು.

ಈ ಸಂದರ್ಭ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ವಿವಿಧ ಮಾಹಿತಿಯನ್ನು ನೀಡಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸ್ವಾಗತಿಸಿ, ವಂದಿಸಿದರು.