ವೀರಾಜಪೇಟೆ, ಜು. 18: ವೀರಾಜಪೇಟೆ - ಸಿದ್ದಾಪುರ ರಸ್ತೆಯ ಮೇಲಿನ ಮಲೆತಿರಿಕೆ ಬೆಟ್ಟದ ಕೆಳ ಭಾಗದಲ್ಲಿ ಮಸೀದಿಗೆ ಸೇರಿದ ಜಾಗದಲ್ಲಿ ಮಸೀದಿ ನಿರ್ಮಾಣಕ್ಕೆ ಅನುಮತಿ ನೀಡಲು ಪಟ್ಟಣ ಪಂಚಾಯಿತಿಯ ಸರ್ವ ಸದಸ್ಯರು ಸಮ್ಮತಿಸಿದರು. ಜಾಗದ ದಾಖಲೆಗಳನ್ನು ಸರಿಪಡಿಸಿಕೊಂಡ ನಂತರ ಮುಂದಿನ ಕ್ರಮ ಕೈಗೊಳ್ಳಲು ಸಭೆ ತೀರ್ಮಾನಿಸಿತು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ ಜೀವನ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆ ಆರಂಭವಾಗುತ್ತಿದ್ದಂತೆ ಮಾಜಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಮಲೆತಿರಿಕೆ ಬೆಟ್ಟದ ಮಸೀದಿಗೆ ಸೇರಿದ ಆಯ್ದ ಭಾಗದಲ್ಲಿ ಮಸೀದಿ ನಿರ್ಮಿಸಲು ಉದ್ದೇಶಿತ ಜಾಗವು ಸ್ಮಶಾನ ಜಾಗವಾಗಿದೆ. ಜಾಗದ ಸರ್ವೆ ಸಂಖ್ಯೆಯಲ್ಲಿ ಕೂಡ ಗೊಂದಲವಿದೆ. ಗೊಂದಲ ನಿವಾರಣೆ ಆಗುವವರೆಗೆ ಮಸೀದಿ ನಿರ್ಮಾಣಕ್ಕೆ ಅನುಮತಿ ನೀಡುವದು ಬೇಡ ಎಂದು ಸಭೆಗೆ ತಿಳಿಸಿದಾಗ ಮಧ್ಯ ಪ್ರವೇಶಿಸಿದ ಹಿರಿಯ ಸದಸ್ಯ ಮೊೈನುದ್ದೀನ್ ಮಾತನಾಡಿಮ

(ಮೊದಲ ಪುಟದಿಂದ) ಕಳೆದ 25 ವರ್ಷಗಳಿಂದ 1.80 ಜಾಗ ಮಸೀದಿಯ ಸ್ವಾಧೀನದಲ್ಲಿದ್ದು, ಕಂದಾಯ ಪಾವತಿಸಲಾಗುತ್ತಿದೆ. ಕಳೆದ 21 ವರ್ಷದಿಂದ ಇತರರಿಗೆ ಯಾವದೇ ಶಾಂತಿ ಭಂಗ ಆಗದಂತೆ ಮಸೀದಿ ಕಾರ್ಯ ನಿರ್ವಹಿಸುತ್ತಿದೆ. ನಿಮ್ಮ ನಾಯಕತ್ವದಲ್ಲಿ ಸಮಸ್ಯೆ ಇತ್ಯರ್ಥಪಡಿಸಿ ಎಂದು ಅಧ್ಯಕ್ಷರಿಗೆ ತಿಳಿಸಿದರು. ಅಧ್ಯಕ್ಷರು ಸ್ಥಳದಲ್ಲಿದ್ದ ಟೌನ್ ಪ್ಲಾನಿಂಗ್ ಅಭಿಯಂತರ ಸಂಜೀವ್ ಅವರೊಂದಿಗೆ ಮಾಹಿತಿ ಪಡೆದಾಗ ದಾಖಲಾತಿಯಲ್ಲಿ ಸ್ಮಶಾನ ಎಂದು ನಮೂದಿಸಲಾಗಿದೆ. ಮಸೀದಿ ಕಟ್ಟಡ ನಿರ್ಮಾಣ ಮಾಡಬೇಕಾದರೆ ಉದ್ದೇಶ ಬದಲಿಸಬೇಕಾಗುತ್ತದೆ. ಈ ಹಿಂದ ಟೌನ್ ಪ್ಲಾನಿಂಗ್‍ನಿಂದ ಮಸೀದಿಗೆ ಅನುಮತಿ ನೀಡಿರುವದನ್ನು ಮೊೈನುದ್ದೀನ್ ಅವರು ಅಧ್ಯಕ್ಷರ ಗಮನಕ್ಕೆ ತಂದರು.

ನಾಮಕರಣ ಸದಸ್ಯ ರಂಜಿ ಪೂಣಚ್ಚ ಮಾತನಾಡಿ, ಮಸೀದಿ ನಿರ್ಮಾಣಕ್ಕೆ ಅನುಮತಿ ನೀಡುವದಕ್ಕೆ ನಮ್ಮ ಅಭ್ಯಂತರವಿಲ್ಲ. ಕಳೆದ ಮಾಸಿಕ ಸಭೆಯಲ್ಲಿಯೇ ಅನುಮತಿ ನೀಡಲಾಗಿದೆ. ಆದರೆ ಮೂಲ ದಾಖಲಾತಿಯಲ್ಲಿ ಸರ್ವೆ ಸಂಖ್ಯೆ ಚೆÀಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಪಟ್ಟಣಕ್ಕೆ ಬಂದಾಗ ಸರ್ವೆ ಸಂಖ್ಯೆ ಬದಲಾಗಿದೆ. ಪಂಚಾಯಿತಿ ದಾಖಲಾತಿಯಲ್ಲಿ ಮೂಲ ಸರ್ವೆ ಸಂಖ್ಯೆ ಇಲ್ಲ. ಅದನ್ನು ಸರಿಪಡಿಸಿ ಅನುಮತಿ ಕೊಡಿ ಎಂದು ಸಭೆಗೆ ತಿಳಿಸಿದರು.

ಅಧ್ಯಕ್ಷ ಇ.ಸಿ ಜೀವನ್, ಕಡತಗಳನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದಾಗ ಪುನ: ಮಧ್ಯಪ್ರವೇಶಿಸಿದ ಸದಸ್ಯ ಮೊೈನುದ್ದೀನ್ ನಮಗೆ ಯಾವದೇ ಜಾತಿ, ಮತ, ಬೇಧವಿಲ್ಲ, ಎಲ್ಲವನ್ನೂ ಏಕೆ ಜಿಲ್ಲಾಧಿಕಾರಿಗಳಿಗೆ ಕಳುಹಿಸುತ್ತೀರಾ, ನೀವು ನಮ್ಮ ನಾಯಕರು, ಇಲ್ಲಿಯೇ ಸಮಸ್ಯೆ ಇತ್ಯರ್ಥ ಮಾಡಿ ಎಂದು ಹೇಳಿದಾಗ ಅಧ್ಯಕ್ಷರು 20 ದಿನಗಳ ಕಾಲಾವಕಾಶ ಪಡೆದುಕೊಂಡು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಯನ್ನು ಇತ್ಯರ್ಥಗೊಳಿಸಿ ಅನುಮತಿ ನೀಡುವ ಭರವಸೆ ನೀಡಿದರು.

ನಾಮಕರಣ ಸದಸ್ಯ ಡಿ.ಪಿ ರಾಜೇಶ್ ಮಾತನಾಡಿ, ಮಸೀದಿ ಕಟ್ಟುವ ಸಂಬಂಧದಲ್ಲಿ ಮೊದಲು ಟೌನ್ ಪ್ಲಾನಿಂಗ್ ಅನುಮತಿ ನೀಡಿ ಈಗ ಅನುಮತಿಯನ್ನು ಹಿಂದಕ್ಕೆ ಪಡೆಯುತ್ತಿರುವದು ಕ್ರಮವಲ್ಲ ಎಂದು ಹೇಳಿ ಸಭೆಯಲ್ಲಿ ಹಾಜರಿದ್ದ ಪ್ಲಾನಿಂಗ್ ಇಂಜಿನಿಯರ್ ಸಂಜೀವ್ ಅವರನ್ನು ತರಾಟೆಗೆ ತೆಗೆದುಕೊಂಡರು. ಹಳೆ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡ ಕಟ್ಟಲು ಕಟ್ಟಡದ ನಿರ್ಮಾಣಕ್ಕೆ ಅನುಮತಿ ಪಡೆಯಬೇಕಾದರೆ 50ವರ್ಷಗಳ ಹಿಂದಿನ ಕಟ್ಟಡದ ಭೂ ಪರಿವರ್ತನೆಯನ್ನು ಕೇಳುತ್ತಿದ್ದಾರೆ ಇದು ಸಾಧ್ಯವಿಲ್ಲ. ಇದರಿಂದ ಹೊಸ ಕಟ್ಟಡಕ್ಕೆ ಅನುಮತಿಯನ್ನು ಮೂರು ತಿಂಗಳಿಂದ ಸ್ಥಗಿತಗೊಳಿಸಲಾಗಿದೆ. ಸರ್ಕಾರದ ಈ ಹೊಸ ಸುತ್ತೋಲೆಯನ್ನು ತಿರಸ್ಕಾರ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದಾಗ ವಿಸ್ತøತ ಚರ್ಚೆ ನಡೆದು ಸರ್ವ ಸದಸ್ಯರು ವೀರಾಜಪೇಟೆ ಪಟ್ಟಣಕ್ಕೆ ಇನ್ನು ಮುಂದೆ ಟೌನ್ ಪ್ಲಾನಿಂಗ್ ಅವಶ್ಯಕತೆ ಇಲ್ಲ, ಇದರಿಂದ ಪಟ್ಟಣ ಪಂಚಾಯಿತಿಯ ಆದಾಯ ಸೋರಿಕೆ ಅಧಿಕ ಎಂದು ನಿರ್ಣಯ ಅಂಗೀಕರಿಸಿದರು.

ಮಾಜಿ ಅಧ್ಯಕ್ಷೆ ಎಂ.ಕೆ. ದೇಚಮ್ಮ ಮಾತನಾಡಿ ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ತಾಲೂಕು ಮೈದಾನದಲ್ಲಿರುವ ಶೌಚಾಲಯಕ್ಕೆ ಬೀಗ ಹಾಕಿದ್ದಾರೆ, ಪಟ್ಟಣದ ಆಯ್ದ ಸ್ಥಳಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿ ಸ್ವಚ್ಚತೆ ಕಾಪಾಡಬೇಕು ಎಂದು ಸಭೆಗೆ ತಿಳಿಸಿದಾಗ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವದಾಗಿ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಭರವಸೆ ನೀಡಿದ್ದು, ತಾಲೂಕು ಮೈದಾನದ ಶೌಚಾಲಯದ ಬೀಗವನ್ನು ತೆರೆದು ಇಂದಿನಿಂದಲೇ ಸಾರ್ವಜನಿಕ ಉಪಯೋಗಕ್ಕೆ ನೀಡಲಾಗುವದು ಎಂದರು.

ಪಟ್ಟಣ ಪಂಚಾಯಿತಿ ಮಳಿಗೆಗಳ ಹರಾಜಿನಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಸಚಿನ್ ಕುಟ್ಟಯ್ಯ ಸಭೆಗೆ ತಿಳಿಸಿದಾಗ ಇದಕ್ಕೂ ಆಕ್ಷೇಪಿಸಿದ ನಾಮಕರಣ ಸದಸ್ಯ ಮಹಮ್ಮದ್ ರಾಫಿ ಮಳಿಗೆಗಳ ಹರಾಜಿನಲ್ಲಿ ಮುಕ್ತವಾಗಿ ಯಾರೂ ಬೇಕಾದರೂ ಪಡೆಯಬಹುದು. ಇದನ್ನು ಯಾರು ನಿರ್ಬಂಧಿಸುವಂತಿಲ್ಲ,

ಷರತ್ತು, ನಿಯಮಗಳನ್ನು ಪಾಲಿಸುವದು ಮಾತ್ರ ಮುಖ್ಯ ಎಂದು ಅಧ್ಯಕ್ಷರಿಗೆ ತಿಳಿಸಿದರು.

ಸದಸ್ಯ ಎಸ್.ಎಚ್. ಮತೀನ್ ಮಾತನಾಡಿ, ಪ್ಲಂಬರ್ ಕಾರ್ಮಿಕರಿಗೆ ಕಾನೂನು ಬದ್ಧವಾಗಿ ಪರವಾನಗಿ ನೀಡಿದರೂ ಅವರು ಪಟ್ಟಣ ಪಂಚಾಯಿತಿ ಅಧೀನ ಹಾಗೂ ನಿಯಂತ್ರಣದಲ್ಲಿರಬೇಕು. ಖಾಸಗಿಯವರಿಗೆ ನ್ಯಾಯಸಮ್ಮತವಾದÀ ದರವನ್ನು ವಿಧಿಸುವದನ್ನು ಅಧಿಕಾರಿಗಳು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಪಟ್ಟಣದಲ್ಲಿ ಸಂತೆ ಸುಂಕ ಎತ್ತಾವಳಿಯಲ್ಲಿ ಗುತ್ತಿಗೆದಾರರು ಸಾರ್ವಜನಿಕರಿಂದ ದುಬಾರಿ ಹಣ ವಸೂಲಿ ಮಾಡಿ ಹಗಲು ದರೋಡೆ ನಡೆಸುತ್ತಿದ್ದಾರೆ ಎಂದು ರಂಜಿ ಪೂಣಚ್ಚ ಸಭೆಗೆ ತಿಳಿಸಿದಾಗ ಈಗಾಗಲೆ ಗುತ್ತಿಗೆದಾರರಿಗೆ ನೋಟೀಸ್ ನೀಡಿ ಮುಂದಿನ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು. ಉಳಿದಂತೆ ಮೂಲ ಸೌಕರ್ಯಗಳ ಬಗ್ಗೆ ಚರ್ಚೆ ನಡೆಯಿತು. ಇದೇ ಸಂದರ್ಭ ಉಪಾಧ್ಯಕ್ಷ ತಸ್ಲೀಂ ಅಕ್ತರ್, ಕಾವiಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ರಚನ್ ಮೇದಪ್ಪ, ಅಭಿಯಂತರ ಎನ್.ಪಿ. ಹೇಮ್‍ಕುಮಾರ್ 16 ಮಂದಿ ಸದಸ್ಯರುಗಳು ಉಪಸ್ಥಿತರಿದ್ದರು.