ವೀರಾಜಪೇಟೆ, ಜು. 18: ಯಾವದೇ ಸಮಾಜ ಮುಂದುವರಿದಿದೆಯೆಂದೆನಿಸಬೇಕಾದರೆ ಸಮಾಜದ ಸದಸ್ಯರುಗಳು ಮೌಲ್ಯಯುತ ಶಿಕ್ಷಣವನ್ನು ಹೊಂದಿದವರಾಗಿರಬೇಕು ಎಂದು ರಾಜ್ಯ ವಿಧಾನ ಸಭೆಯ ಮಾಜಿ ಅಧ್ಯಕ್ಷ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ವೀರಾಜಪೇಟೆಯ ಮಹಿಳಾ ಸಮಾಜದ ಸಭಾಂಗಣದಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್ ಏರ್ಪಡಿಸಿದ್ದ ವಾರ್ಷಿಕ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ್ದರು.ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸಂಘ ಸಂಸ್ಥೆಗಳು ಜನಾಂಗವನ್ನು ಒಗ್ಗೂಡಿಸುವ ಕೆಲಸ ಮಾಡಬೇಕು. ಜನಾಂಗಗಳು ತಮ್ಮ ಧಾರ್ಮಿಕ ಮತ್ತು ಸಾಂಸ್ಕøತಿಕ ಅಸ್ತಿತ್ವವನ್ನು ಉಳಿಸಿಕೊಂಡೇ ಸಹೋದರ ಸಮುದಾಯಗಳೊಂದಿಗೆ ಬೆರೆಯಬೇಕು. ಶಿಕ್ಷಣದ ಮೂಲಕ ಮೌಲ್ಯಯುತ ಸಮಾಜ ನಿರ್ಮಿಸಲು ಮುಸ್ಲಿಂ ಸಮುದಾಯ ಮುಂದಾಗಬೇಕು. ಮೂಲ ವಿಶ್ವಾಸಗಳಿಗೆ ಧಕ್ಕೆ ಬಾರದಂತೆ ನೂತನ ಆವಿಷ್ಕಾರಗಳಿಗೆ ಹೊಂದಿಕೊಳ್ಳುವದು ಅಗತ್ಯವಾಗಿದೆ. ಮೂಢನಂಬಿಕೆ, ಕಂದಾಚಾರಗಳಿಂದಾಗಿ ಮಹಿಳೆಯರು ಶಿಕ್ಷಣದಿಂದ ವಂಚಿತರಾಗದಂತೆ ಸಮುದಾಯ ನಾಯಕತ್ವ ಎಚ್ಚರವಹಿಸಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹೆಚ್. ಕಾಂತರಾಜು ಮಾತನಾಡಿ ಸಾಮಾಜಿಕ ಜೀವನದಲ್ಲಿ ಪ್ರತಿಯೊಬ್ಬನ ಬದುಕು ವಿದ್ಯೆಯಿಂದ ಮಾತ್ರ ಸಾದ್ಯವಾಗುತ್ತದೆ. ವಿದ್ಯೆಯ ಅರಿವು ಇಲ್ಲದೆ ಇರುವ ವ್ಯಕ್ತಿಯು ಶೂನ್ಯ ಸಂಪಾದನೆ ಮಾಡಿದಂತೆ. ಲಿಂಗ ಅಸಮಾನತೆಯನ್ನು ಹೋಗಲಾಡಿಸಿ ಹೆಣ್ಣು ಮಕ್ಕಳಿಗೆ ಶಿಕ್ಷಣದಲ್ಲಿ ಪ್ರೋತ್ಸಾಹ ನೀಡಬೇಕು ಹೆಣ್ಣು ಮಕ್ಕಳಿಗೆ ಪರಿಪೂರ್ಣ ಶಿಕ್ಷಣ ನೀಡುವದರ ಜೊತೆಗೆ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಪ್ರತಿಯೊಬ್ಬ ಪೋಷಕರಲ್ಲಿ ಜಾಗೃತವಾದರೆ ಶಿಕ್ಷಿತ ವರ್ಗ ನಿರ್ಮಾಣವಾಗುತ್ತದೆ. ಸಹಾಯ ಮತ್ತು ಸಂಬಂಧಗಳ ಋಣಗಳನ್ನು ತೀರಿಸುವ ಗುಣಗಳು ನಮ್ಮಲಿದ್ದಲ್ಲಿ ಸಮಾಜದಲ್ಲಿ ಸ್ಥಾನ ಮಾನಗಳು ದೊರಕುತ್ತದೆ ನಾವುಗಳು ಹಿಂದುಳಿದವರು ಎಂದು ಭಾವಿಸದೇ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಅರ್ಥೀಕವಾಗಿ ಮುಂದುವರೆದಲ್ಲಿ ಹಿಂದುಳಿದ ಎಂಬ ಪದವು ನೀರ್ನಾಮವಾಗುತ್ತದೆ.
ಡಾ. ಬಿ.ಅರ್ ಅಂಬೇಡ್ಕರ್ ಅವರು ರಚಿಸಿದ ಭಾರತ ಸಂವಿಧಾನವು ಎಲ್ಲಾ ಸಮುದಾಯಗಳಿಗೆ ಶಾಸನಾತ್ಮಕವಾಗಿ ಮುಂದುವರಿಯಲು ಕಾನೂನುನನ್ನು ರಚಿಸಿದೆ. ಶೋಷಿತ ವರ್ಗ ಹಿಂದುಳಿದ ವರ್ಗದ ಸಮುದಾಯದವರು ಭಾರತದ ಸಂವಿಧಾನದ ಬಗ್ಗೆ ಅರಿವನ್ನು ಪಡೆದುಕೊಂಡಲ್ಲಿ ಸುಶಿಕ್ಷೀತವಾದ ಸಮಾಜವು ನಿರ್ಮಾಣವಾಗುದರಲ್ಲಿ ಸಂದೇಹವಿಲ್ಲ ಕೊಡಗು ಜಿಲ್ಲೆ ಭೌಗೋಳಿಕವಾಗಿ ಬೆಟ್ಟ ಗುಡ್ಡಗಳಿಂದ ಕೂಡಿದ ನಾಡು ಇಲ್ಲಿ ವಿದ್ಯುತ್ ಅಭಾವ, ವಿದ್ಯಾರ್ಥಿಗಳಿಗೆ ಹತ್ತಿರದಲ್ಲಿ ಶಾಲೆಗಳಿಲ್ಲ ವಿದ್ಯಾರ್ಥಿಗಳಿಗೆ ವಾಹನ ಸೌಲಭ್ಯವಿಲ್ಲವಾದರೂ ಸಮುದಾಯದ ಹೆಣ್ಣು ಮಕ್ಕಳು ಪರೀಕ್ಷೆಯಲ್ಲಿ ಉನ್ನತವಾದ ಅಂಕಗಳನ್ನು ಗಳಿಸುವದರ ಮೂಲಕ ಸಮುದಾಯಕ್ಕೆ ಮಹತ್ವವನ್ನು ನೀಡಿದ್ದಾರೆ ಎಂದು ಪ್ರಶಂಸನಿಯ ಮಾತುಗಳನ್ನಾಡಿದರು. ಪೊಳಂಗೋಟಂಡ ಸಮೀಜ್ ತಂಙಳ್ ದಿಕ್ಸೂಚಿ ಭಾಷಣ ಮಾಡಿದರು.
ಅಸೋಸಿಯೇಷನ್ ಅಧ್ಯಕ್ಷ ಡಿ.ಹೆಚ್.ಸೂಫಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯು ನಡೆದು ಬಂದ ದಾರಿ ಬಗ್ಗೆ ವಿವರವಾಗಿ ತಿಳಿಸಿದರು. ಸ್ಥಾಪಕ ಅಧ್ಯಕ್ಷ ಕುವೆಯಂಡ ವೈ.ಹಂಝತುಲ್ಲಾ ಸಾಂಪ್ರದಾಯಿಕ ದಫ್ ಬಾರಿಸುವದರ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ಸಿ.ಪಿ.ಎಂ.ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಾ||.ಐ.ಆರ್.ದುರ್ಗಾ ಪ್ರಸಾದ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ.ಅಬ್ದುಸ್ಸಲಾಂ ವೇದಿಕೆಯಲ್ಲಿದ್ದರು. ಉಪಾಧ್ಯಕ್ಷ ಡಾ||.ಜೆ.ಎ.ಕುಂಞಅಬ್ದುಲ್ಲಾ ಸ್ವಾಗತಿಸಿದರು. ಕಾರ್ಯದರ್ಶಿ ಇಸ್ಮಾಯಿಲ್ ಕಾರ್ಯಕ್ರಮ ನಿರೂಪಿಸಿದರು.