ಮಡಿಕೇರಿ, ಜು. 18: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ರಾಜಪರಂಪರೆಯ ಆಳ್ವಿಕೆಗೆ ಸಾಕ್ಷಿ ಹೇಳಲಿರುವ ಅರಮನೆಯು (ಕೋಟೆ) ನಿತ್ಯ ಒಂದಿಷ್ಟು ಮಾಡು ಹೆಂಚುಗಳು ಕಳಚಿ ಬೀಳುವದರೊಂದಿಗೆ, ಪ್ರಸಕ್ತ ಮಳೆಯಿಂದ ಅಲ್ಲಲ್ಲಿ ಸೋರುತ್ತಾ, ತೀರಾ ಶಿಥಿಲಗೊಳ್ಳುತ್ತಿದೆ.ಈ ಕೋಟೆ ಆವರಣಕ್ಕೆ ಹೊಂದಿ ಕೊಂಡಿರುವ ಐತಿಹಾಸಿಕ ಅರಮನೆ ಯಿಂದ ಈಗಾಗಲೇ ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರ ಗೊಂಡು, ಆ ಬೆನ್ನಲ್ಲೇ ಅನೇಕ ಕಚೇರಿಗಳು ನೂತನ ಜಿಲ್ಲಾಡಳಿತ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಮುಖ್ಯವಾಗಿ ಕೊಡಗಿನ ಇಬ್ಬರು ಶಾಸಕರು ಹಾಗೂ ಇಬ್ಬರು ಮೇಲ್ಮನೆ ಸದಸ್ಯರ ಕಚೇರಿಗಳೊಂದಿಗೆ, ಕೊಡಗು ಜಿಲ್ಲಾ ಪಂಚಾಯಿತಿ ಆಡಳಿತ ಮತ್ತು ಲೋಕೋಪಯೋಗಿ ಕಚೇರಿ ಸೇರಿದಂತೆ ಜಿ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಗಳು ಪ್ರತ್ಯೇಕ ಕೊಠಡಿಗಳಲ್ಲಿ ಕಾರ್ಯೋನ್ಮು ಖರಾಗಿದ್ದಾರೆ.
ಈ ನಡುವೆ ಅರಮನೆಯಲ್ಲಿರುವ ಹಳೆಯ ವಿಧಾನ ಸಭಾಂಗಣ ಪ್ರವೇಶ ದ್ವಾರದಲ್ಲೇ ಮಾಡು ಶಿಥಿಲಗೊಂಡು ಸೋರುತ್ತಿದ್ದು, ಛಾವಣಿ ಉದುರುತ್ತಿದೆ. ವಿಶಾಲ ಸಭಾಂಗಣದ ಅಲ್ಲಲ್ಲಿ ನೀರು ಮಾಡುವಿನಿಂದ ಜಿನುಗುತ್ತಿರುವ ಸನ್ನಿವೇಶ ಗೋಚರಿಸಿದೆ. ಈಗಾಗಲೇ ಮಾಡುವಿನ ನೂರಾರು ಹೆಂಚುಗಳು ನೆಲಕಚ್ಚಿದ್ದು, ಗಾಳಿ - ಮಳೆ ತೀವ್ರ ಗೊಂಡರೆ ಮತ್ತಷ್ಟು ಹಾನಿ ಸಂಭವಿಸಲಿದೆ. ಕೊಡಗಿನ ರಾಜ ಪರಂಪರೆಯ ಆಳ್ವಿಕೆಗೆ ಸಾಕ್ಷಿ ಯಾಗಿರುವ ಈ ಐತಿಹಾಸಿಕ ಕೋಟೆಗೆ ಕಾಯಕಲ್ಪ ನೀಡಲು ಯಾರೊಬ್ಬರೂ ಇಲ್ಲಿ ಕಾಳಜಿ ವಹಿಸಿಲ್ಲ. ಈ ಬಗ್ಗೆ ಜಿಲ್ಲಾಡಳಿತದಿಂದ ಕೇಳಿದರೆ, ಅದು ಪ್ರಾಚ್ಯವಸ್ತು ಇಲಾಖೆ ವಶದಲ್ಲಿರುವ ದರಿಂದ ದುರಸ್ತಿ ಗೊಳಿಸುವದು
(ಮೊದಲ ಪುಟದಿಂದ) ಸಾಧ್ಯವಾಗದು ಎನ್ನುವ ಮಾಹಿತಿ ಲಭ್ಯವಾಗಿದೆ.
ಅತ್ತ ಕರ್ನಾಟಕ ಪ್ರಾಚ್ಯ ವಸ್ತು ಇಲಾಖೆಯ ಮೈಸೂರು ಹಾಗೂ ಬೆಂಗಳೂರು ಕಚೇರಿಯನ್ನು ಸಂಪರ್ಕಿಸಿದರೆ, ಜಿಲ್ಲಾಡಳಿತದ ಕಡೆಗೆ ಬೆರಳು ತೋರುತ್ತಿವೆ. ಪ್ರಾಚ್ಯ ವಸ್ತು ಇಲಾಖೆಯ ಮೂಲಗಳ ಪ್ರಕಾರ ಯಾವಾಗ ಜಿಲ್ಲಾಡಳಿತದಿಂದ ಅರಮನೆಯನ್ನು ಬಿಟ್ಟುಕೊಟ್ಟರೂ, ದುರಸ್ತಿ ಕೈಗೊಳ್ಳಲು ಸಿದ್ಧವೆಂಬ ಉತ್ತರ ಸ್ಪಷ್ಟಗೊಂಡಿದೆ.
ಅಲ್ಲದೆ, ಕೋಟೆ ಆವರಣದ ನಿರ್ವಹಣೆಯನ್ನಷ್ಟೇ ಪ್ರಾಚ್ಯವಸ್ತು ಇಲಾಖೆ ನೋಡಿಕೊಳ್ಳುತ್ತಿದ್ದು, ಜಿಲ್ಲಾಡಳಿತದ ವಶದಲ್ಲಿರುವ ಅರಮನೆಯನ್ನು ಅಲ್ಲಿರುವ ಕಚೇರಿಗಳ ಸಹಿತ ಸ್ಥಳಾಂತರಗೊಳಿಸಿ ಬಿಟ್ಟುಕೊಟ್ಟ ಮರುದಿನದಿಂದ ಕೆಲಸ ಆರಂಭಿಸುವ ಆಶಯ ವ್ಯಕ್ತಗೊಂಡಿದೆ. ಆದರೆ, ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿ.ಪಂ. ಕಚೇರಿಗಳ ಸ್ಥಳಾಂತರಕ್ಕೆ ಇನ್ನೂ ಮೂರ್ನಾಲ್ಕು ವರ್ಷಗಳ ಕಾಲಾವಕಾಶ ಕೇಳಿರುವದಾಗಿ ಗೊತ್ತಾಗಿದೆ. ಅಷ್ಟು ಹೊತ್ತಿಗೆ ಕಾಯಕಲ್ಪ ಕಾಣದೆ ಈ ಕೋಟೆ ಉಳಿಯುವದೇ ಎಂದು ಕಾಲ ನಿರ್ಧರಿಸಬೇಕಷ್ಟೆ!
ಕಾರಣ ಈಗಾಗಲೇ ಅರಮನೆಯ ಅಷ್ಟ ದಿಕ್ಕುಗಳಲ್ಲಿ ಅಲ್ಲಲ್ಲಿ ಕುಸಿತದೊಂದಿಗೆ, ಕಟ್ಟಡದ ನಿರ್ವಹಣೆಯಿಲ್ಲದೆ ಗಿಡಗಂಟಿಗಳು ಬೆಳೆದು, ಮಳೆಯಲ್ಲಿ ಸೋರುವಿಕೆಯೊಂದಿಗೆ ಮೂಲ ಸ್ವರೂಪಕ್ಕೆ ಅಪಾಯದ ಮುನ್ಸೂಚನೆ ಕಂಡು ಬರುತ್ತಿದೆ. ಹೀಗಾಗಿ ಮುಂದಿನ ಪೀಳಿಗೆಗೆ ಈ ಅರಮನೆಯ ಮೂಲ ಸ್ವರೂಪ ನೋಡಲು ಅನುವಾಗುವಂತೆ ಕಾಪಾಡಿಕೊಳ್ಳುವತ್ತ ಕಾಳಜಿ ತೋರಬೇಕಿದೆ. - ಶ್ರೀ ಸುತ