ಸೋಮವಾರಪೇಟೆ, ಜು.18 : ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗೆ ನೀಡಿದ್ದ ಭರವಸೆಗಳ ಪೈಕಿ ಶೇ 95ರಷ್ಟನ್ನು ಈಡೇರಿಸಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಬೇಕಿದೆ ಎಂದು ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ದ್ದಾಗ ಕಾಶ್ಮೀರದಲ್ಲಿ ಒಂದೇ ಒಂದು ಹತ್ಯೆಯಾಗಿರಲಿಲ್ಲ. ಬಿಜೆಪಿ ಬಂದ 3 ವರ್ಷದಲ್ಲಿ 33 ಹತ್ಯೆಗಳು ನಡೆದಿವೆ. ರಾಷ್ಟ್ರಾದ್ಯಂತ ಗೋ ಹತ್ಯೆ ವಿಚಾರದಲ್ಲಿ ಹತ್ಯೆಗಳಾಗುತ್ತಿವೆ. ಯಾವ ಆಹಾರ ಸೇವಿಸಬೇಕು ಎಂಬದು ನಮ್ಮ ಹಕ್ಕು. ಇದನ್ನು ಆರ್‍ಎಸ್‍ಎಸ್ ನಿರ್ಧರಿಸ ಬಾರದು ಎಂದು ವಿಷ್ಣುನಾಥನ್ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಬೂತ್ ಕಮಿಟಿ ಪೇಪರ್ ಅಥವಾ ಫೇಕ್ ಕಮಿಟಿ ಆಗಬಾರದು. ಯುವ ಹಾಗೂ ಮಹಿಳಾ ಕಾಂಗ್ರೆಸ್ಸಿಗರನ್ನು ಒಳಗೊಂಡಂತೆ ತಾ. 30ರೊಳಗೆ ಪ್ರತಿ ಬೂತ್‍ನಲ್ಲೂ ಕಮಿಟಿ ರಚಿಸಬೇಕು. ಪ್ರತಿ ತಿಂಗಳು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆ ನಡೆಸಬೇಕು. ಕೇಂದ್ರ ಸರ್ಕಾರದ ದುರಾಡಳಿತ ಮತ್ತು ರಾಜ್ಯ ಸರ್ಕಾರದ ಜನಪರ ಆಡಳಿತದ ಬಗ್ಗೆ ಪ್ರತಿಯೋರ್ವ ಮತದಾರರಿಗೂ ಮನವರಿಕೆ ಮಾಡಿಕೊಡಬೇಕು. ಈ ಮೂರೂ ಕೆಲಸಗಳನ್ನು ಕಾರ್ಯ ಕರ್ತರು ಮಾಡಿದ್ದೇ ಆದಲ್ಲಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನ ಎರಡೂ

(ಮೊದಲ ಪುಟದಿಂದ) ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಿ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಮೂಲತಃ ಕೇರಳದವರಾದ ವಿಷ್ಣುನಾಥನ್ ಅವರು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಂದ ಕರ್ನಾಟಕಕ್ಕೆ ನೇಮಿಸಲ್ಪಟ್ಟಿದ್ದು, ಇಂದಿನ ಸಭೆಯಲ್ಲಿ ಇಂಗ್ಲೀಷ್‍ನಲ್ಲಿಯೇ ಭಾಷಣ ಮಾಡಿದರು. ಕೆಲ ಕಾರ್ಯಕರ್ತರು ‘ಕನ್ನಡ ಕನ್ನಡ’ ಎಂದು ಕೂಗಿದಾಗ ಬೂತ್ ಕಮಿಟಿ, ಬ್ಲಾಕ್ ಸಭೆ, ಪಕ್ಷದ ಕಾರ್ಯಕ್ರಮಗಳ ಮನವರಿಕೆ ವಿಚಾರಗಳನ್ನು ಕನ್ನಡದಲ್ಲಿಯೇ ವಿವರಿಸಿ ಕಾರ್ಯಕರ್ತರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದು ವಿಶೇಷವಾಗಿತ್ತು. ವಿಷ್ಣುನಾಥನ್ ಅವರು ಇಂಗ್ಲೀಷ್‍ನಲ್ಲಿ ಮಾತು ಆರಂಭಿಸಿ ನಡುವೆ ಕನ್ನಡದಲ್ಲಿ ವಿವರಣೆ ನೀಡಿ ಕೊನೆಯಲ್ಲಿ ಮಲೆಯಾಳಂ ಭಾಷೆಯಲ್ಲಿ ಮಾತು ಮುಗಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್ ಸಂಘಟಿಸಲಾಗುವದು. ಮುಂದಿನ ದಿನಗಳಲ್ಲಿ ಗಡಿಭಾಗ ಕುಟ್ಟದಿಂದ ಕೊಡ್ಲಿಪೇಟೆವರೆಗೆ ಪಾದಯಾತ್ರೆ ನಡೆಸಿ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗುವದು. ಆ ಮೂಲಕ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸಿ ವಿಧಾನ ಸಭೆಗೆ ಕಳುಹಿಸಲಾಗುವದು ಎಂದು ಭರವಸೆ ವ್ಯಕ್ತಪಡಿಸಿದರು.

ಸಭೆಯ ಅಧ್ಯಕ್ಷತೆಯನ್ನು ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ವಹಿಸಿದ್ದರು. ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಕಾಂಗ್ರೆಸ್ ಮುಖಂಡರುಗಳಾದ ಚಂದ್ರಮೌಳಿ, ಅರುಣ್‍ಮಾಚಯ್ಯ, ಎಸ್.ಪಿ. ದಿನೇಶ್, ಕೆ.ಎಂ. ಇಬ್ರಾಹಿಂ, ನಾಪಂಡ ಮುತ್ತಪ್ಪ, ವಿ.ಪಿ. ಶಶಿಧರ್ ಅವರುಗಳು ಮಾತನಾಡಿದರು.

ವೇದಿಕೆಯಲ್ಲಿ ಜಿ.ಪಂ. ಸದಸ್ಯರಾದ ಕುಮುದಾ ಧರ್ಮಪ್ಪ, ಸುನೀತಾ, ಲತೀಫ್, ಬಾನಂಡ ಪ್ರತ್ಯು, ಟಿ.ಪಿ. ಹಮೀದ್, ಪಕ್ಷದ ಮುಖಂಡರುಗಳಾದ ಸರ ಚಂಗಪ್ಪ, ಕೆ.ಪಿ. ಚಂದ್ರಕಲಾ, ಪುಷ್ಪಲತಾ, ಮಂಜುನಾಥ್, ಯಾಕೂಬ್, ಲತೀಫ್, ರೆಹಮಾನ್, ಎಸ್.ಎಂ. ಚಂಗಪ್ಪ, ನಂದಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್, ಲಾರೆನ್ಸ್, ಸತೀಶ್, ಚೇತನ್, ಇಂದ್ರೇಶ್, ನಟೇಶ್‍ಗೌಡ, ಹೆಚ್.ಸಿ. ನಾಗೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.