ಕುಶಾಲನಗರ, ಜು. 18: ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಉತ್ತಮ ಶಿಕ್ಷಣ ಪಡೆಯಲು ಕಠಿಣ ಪರಿಶ್ರಮದ ಅಗತ್ಯವಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಹೇಳಿದರು.
ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ 2016-17ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದು ಸಾಧನೆಗೈದ ಕೂಡಿಗೆ ಸರಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರು ಹಾಗೂ ಶಿಕ್ಷಕರಿಗೆ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಸಾಧಿಸಲು ಛಲ ಅಗತ್ಯ. ಯಾವುದೇ ವಿಚಾರದಲ್ಲೂ ಕೀಳರಿಮೆ ತೋರದೆ ತಮ್ಮಲ್ಲಿನ ಪ್ರತಿಭೆಗಳನ್ನು ಬಳಸಿಕೊಂಡು ಜೀವನದಲ್ಲಿ ಯಶಸ್ಸು ಗಳಿಸಲು ಶ್ರಮವಹಿಸಬೇಕಿದೆ. ದೊಡ್ಡ ಮಟ್ಟದ ಕನಸುಗಳನ್ನು ಕಾಣುವ ಮೂಲಕ ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ ಎಂದರು.
ಸಾಮಾಜಿಕ ಕಳಕಳಿ ಹೊಂದುವ ಮೂಲಕ ದೇಶಕ್ಕಾಗಿ ಸೇವೆ ಸಲ್ಲಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಮಾದಕ ವ್ಯಸನಗಳು, ಸಾಮಾಜಿಕ ಜಾಲತಾಣಗಳ ದಾಸರಾಗದೆ ನಿರಂತರ ಅಧ್ಯಯನ ಹಾಗೂ ಓದುವ ಹವ್ಯಾಸ ಬೆಳೆಸಿಕೊಳ್ಳುವ ಮೂಲಕ ಸದಾ ಕ್ರಿಯಾಶೀಲರಾಗಿರುವಂತೆ ಅವರು ಕರೆ ನೀಡಿದರು. ಶೈಕ್ಷಣಿಕ ಹಂತದಲ್ಲಿ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಶ್ರಮವಹಿಸಿದ ಶಿಕ್ಷಕರ ಸೇವೆಯನ್ನು ಮರೆಯದೆ ಸದಾ ಋಣಿಯಾಗಿರಬೇಕಿದೆ ಎಂದು ಕಿವಿ ಮಾತು ಹೇಳಿದರು.
ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದ ಉಪನ್ಯಾಸಕ ಟಿ.ವಿ. ಕಿಶೋರ್, ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನು ಮುಟ್ಟುವಲ್ಲಿ ಗುರುಗಳ ಪಾತ್ರ ಅತ್ಯಂತ ಮಹತ್ತರದ್ದಾಗಿದೆ. ಜೀವನದಲ್ಲಿ ನಿರ್ದಿಷ್ಟ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಸದಾ ಭಕ್ತಿಭಾವದಿಂದ ನಡೆಯುವ ಮೂಲಕ ಸದಾ ಪ್ರಶ್ನಿಸುವ ಹಾಗೂ ಆಲಿಸುವ ಗುಣಗಳನ್ನು ಬೆಳೆಸಿಕೊಂಡು ಆತ್ಮವಿಶ್ವಾಸದಿಂದ ಮುನ್ನಡೆದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.
ಸಮಾಜ ಸೇವಕ ಟಿ.ಎಲ್. ವಾಸುದೇವ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ ಮಾತನಾಡಿದರು.
ಮಡಿಕೇರಿ ಸರಕಾರಿ ಆಸ್ಪತ್ರೆ ವೈದ್ಯ ಡಾ. ದೇವದಾಸ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೂಡಿಗೆ ಪಿಯು ಕಾಲೇಜಿನ ಪ್ರಾಂಶುಪಾಲರು ಹಾಗೂ 9 ಮಂದಿ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೊಡಗು ವೈದ್ಯಕೀಯ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಸತೀಶ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್, ಉದ್ಯಮಿ ದಾಮೋದರ್, ಸಮಿತಿಯ ಪ್ರಮುಖರಾದ ಎನ್. ವೀರಭದ್ರಯ್ಯ, ಎಚ್.ಎ. ರವಿ, ಎಚ್.ಎಲ್ .ಕುಮಾರ್, ಎಚ್. ದಾಮೋದರ್, ದೀಪಕ್ ಮತ್ತಿತರರು ಇದ್ದರು.