ಕೂಡಿಗೆ, ಜು. 18: ಜಿ.ಪಂ. ಮತ್ತು ರಾಜ್ಯ ಸರ್ಕಾರಗಳಿಂದ ಹಣ ಬಿಡುಗಡೆಯಾಗಿದ್ದು, ನೂತನ ಕಟ್ಟಡ ಮತ್ತು ಉತ್ತಮ ಸೌಕರ್ಯಗಳನ್ನು ಹೊಂದಿದ್ದರೂ ಸಿಬ್ಬಂದಿಗಳಿಲ್ಲದೆ ಕೂಡಿಗೆಯಲ್ಲಿರುವ ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ ನಲುಗುತ್ತಿದೆ.
ಕೊಡಗು ಸರ್ಕಾರ ಇದ್ದ ಸಂದರ್ಭದಲ್ಲಿ ಸ್ಥಾಪನೆಯಾಗಿದ್ದ ಕೂಡಿಗೆ ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರದ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ವಹಿಸಿಕೊಂಡಿತ್ತು. ವರ್ಷ ಕಳೆದಂತೆ ಈ ಕೇಂದ್ರದಿಂದ ಕೋಳಿ ಮೊಟ್ಟೆಗಳ ಉತ್ಪಾದನೆ ಹೆಚ್ಚಾಗಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತ್ತು.
ಕೋಳಿ ಸಾಕಾಣಿಕೆಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ರೈತರು ಕೋಳಿ ಸಾಕಣಿಕೆಯಲ್ಲಿ ತೊಡಗುವಂತೆ ಈ ಕೇಂದ್ರದಲ್ಲಿ ವರ್ಷಂಪ್ರತಿ 20 ಸಾವಿರಕ್ಕೂ ಹೆಚ್ಚು ಕೋಳಿ ಮರಿಗಳನ್ನು ರೈತರಿಗೆ ವಿತರಣೆ ಮಾಡಲಾಗುತ್ತಿದೆ. ಇದರ ಜೊತೆಯಲ್ಲಿ ತಾಯಿ ಕೋಳಿಗಳ ಅಭಿವೃದ್ಧಿಗಾಗಿ ಹವಾನಿಯಂತ್ರಿತ ಮತ್ತು ಆಧುನಿಕ ಯಂತ್ರಗಳುಳ್ಳ ಕಟ್ಟಡಗಳು ನಿರ್ಮಾಣ ಮಾಡಲಾಗಿದೆ. ಜಿ.ಪಂ. ಅನುದಾನದಲ್ಲಿ ಇವುಗಳಿಗೆ ಆಹಾರದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಸರ್ಕಾರದ ನಿಯಮಾನುಸಾರ ಜಿಲ್ಲೆಯ ರೈತರುಗಳಿಗೆ ಜಿ.ಪಂ. ಆದೇಶದನ್ವಯ ರೈತರುಗಳಿಗೆ ಕೋಳಿ ಸಾಕಾಣಿಕೆಗೆ ವಿವಿಧ ತರಬೇತಿಗಳನ್ನು ನೀಡಲು ಕಟ್ಟಡಗಳ ವ್ಯವಸ್ಥೆಯು ಇದೆ. ಆದರೆ, ಈ ಕೇಂದ್ರಕ್ಕೆ ಸಂಬಂಧಪಡುವ ಸಿಬ್ಬಂದಿಗಳನ್ನು ನೇಮಕ ಮಾಡಿದಲ್ಲಿ ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ ರೈತರಿಗೆ ಸಹಕಾರಿಯಾಗಲಿದೆ. ಇದರತ್ತ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪ್ರಯತ್ನಿಸಬೇಕಾಗಿ ಸ್ಥಳೀಯರು ಆಗ್ರಹಿಸಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ.