ಮಡಿಕೇರಿ, ಜು.19: ಇತ್ತೀಚೆಗೆ ಕಾಡಾನೆಗಳು ವಿದ್ಯುತ್ ತಂತಿಗೆ ಸಿಲುಕಿ ಸಾವನ್ನಪ್ಪುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಅರಣ್ಯ ಮತ್ತು ವಿದ್ಯುತ್ ಇಲಾಖೆ ವತಿಯಿಂದ ಜಂಟಿ ಸರ್ವೆ ಕಾರ್ಯ ಆರಂಭವಾಗಿದೆ ಎಂದು ಜಿಲ್ಲೆಯ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಸೋಮಶೇಖರ್ ತಿಳಿಸಿದ್ದಾರೆ.

ಸೆಸ್ಕ್ ವಿಭಾಗೀಯ ಕಚೇರಿ ಸಭಾಂಗಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಹಳೇ ವಿದ್ಯುತ್ ಕಂಬ ಬದಲಿಸುವದು, ವಿದ್ಯುತ್ ಕಂಬಗಳ ಅಂತರ ಕಡಿಮೆ ಮಾಡುವದು ಮತ್ತು ಕಂಬ ಎತ್ತರಕ್ಕೆ ಏರಿಸುವದು ಮತ್ತಿತರ ಕಾರ್ಯಗಳು ನಡೆದಿವೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆ ಶುರುವಾಗಿದೆ ಎಂದು ಹೇಳಿದರು.

ಹೊಸ ಬೆಳಕು ಯೋಜನೆಯಡಿ ಸರ್ಕಾರದಿಂದ ಎಲ್‍ಇಡಿ ಬಲ್ಬ್ ಮತ್ತು ಟ್ಯೂಬ್ ವಿತರಿಸಲಾಗುತ್ತಿದ್ದು, ನಗರಸಭೆ ಹಿಂಭಾಗದಲ್ಲಿರುವ ಸೆಸ್ಕ್ ಉಪ ವಿಭಾಗ ಕಚೇರಿಯಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ನಾನಾ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ ಎಂಬ ಸಾರ್ವಜನಿಕರ ದೂರಿಗೆ ಮಾಹಿತಿ ನೀಡಿದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕೊಡಗು ಮತ್ತು ಚಾಮರಾಜನಗರ ವೃತ್ತದ ಅಧೀಕ್ಷಕ ಎಂಜಿನಿಯರ್ ರಾಮಚಂದ್ರ ಅವರು ವಿದ್ಯುತ್ ಪೂರೈಕೆಯಲ್ಲಿ ಯಾವದೇ ಸಮಸ್ಯೆಯಿಲ್ಲ. ಬಿರುಗಾಳಿ, ಮಳೆಗೆ ಅಲ್ಲಲ್ಲಿ ವಿದ್ಯುತ್ ಮಾರ್ಗದಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ವಿವರಿಸಿದರು.

ಕೊಡಗು ಜಿಲ್ಲೆ ಬೆಟ್ಟಗುಡ್ಡ ಪ್ರದೇಶವಾಗಿರುವದರಿಂದ ವಿದ್ಯುತ್ ಮಾರ್ಗಗಳ ಬಗ್ಗೆ ಸದಾ ಎಚ್ಚರಿಕೆ ವಹಿಸಬೇಕು. ಗ್ರಾಹಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸೆಸ್ಕ್ ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಕಾರ್ಯನಿರ್ವಾಹಕ ಎಂಜಿನಿಯರ್ ತಾರಾ ಅವರು ಸಾರ್ವಜನಿಕರ ಕುಂದುಕೊರತೆ ಮತ್ತಿತರ ಸಂಬಂಧ ಹಲವು ಮಾಹಿತಿ ಪಡೆದರು. ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‍ಗಳಾದ ದೊಡ್ಡಮನಿ, ದೇವಯ್ಯ, ನಾಗರಾಜು, ದಿನೇಶ್, ಸಹಾಯಕ ಹಾಗೂ ಕಿರಿಯ ಎಂಜಿನಿಯರ್‍ಗಳು ಇತರರು ಇದ್ದರು.