ಸೋಮವಾರಪೇಟೆ, ಜು.19: ಹಚ್ಚಹಸಿರಿನ ವನಸಿರಿ, ಆಹ್ಲಾದಕರ ವಾತಾವರಣ, ಸುಂದರ ಪ್ರಕೃತಿಯ ಸೌಂದರ್ಯ ಹೊಂದಿರುವ ಅರಣ್ಯದಂಚಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಕೊಳೆತು ನಾರುವ ಕೋಳಿ ತ್ಯಾಜ್ಯ, ಖಾಲಿ ಬಾಟಲಿಗಳು, ಮೂಟೆಗಳಲ್ಲಿ ತುಂಬಿಸಿ ಎಸೆಯಲ್ಪಟ್ಟ ಕಸದಿಂದಾಗಿ ಇಡೀ ಪರಿಸರ ಗಬ್ಬೆದ್ದು ನಾರುತ್ತಿದೆ. ತಮ್ಮ ಮನೆ, ಅಂಗಡಿಗಳ ಕಸವನ್ನು ಅರಣ್ಯದ ಅಂಚಿಗೆ ತಂದು ಸುರಿಯುತ್ತಿರುವ ದುರುಳರಿಂದಾಗಿ ಅರಣ್ಯ ಪ್ರದೇಶ ಪ್ಲಾಸ್ಟಿಕ್‍ಮಯವಾಗುತ್ತಿದೆ.

ಸೋಮವಾರಪೇಟೆ ನಗರದಿಂದ ಅಬ್ಬೂರುಕಟ್ಟೆ ಮಾರ್ಗವಾಗಿ ಬಾಣಾವರಕ್ಕೆ ತೆರಳುವ ಮಾರ್ಗದಲ್ಲಿ ರುವ ಮಡಿಕೇರಿ ವಿಭಾಗಕ್ಕೆ ಸೇರಿದ ಶನಿವಾರಸಂತೆ ವಲಯದ ಮಾಲಂಬಿ ಮೀಸಲು ಅರಣ್ಯ ಪ್ರದೇಶದ ಎರಡೂ ಬದಿ ಇಂತಹ ತ್ಯಾಜ್ಯಗಳು ತುಂಬಿ ತುಳುಕುತ್ತಿವೆ.

ಅಬ್ಬೂರುಕಟ್ಟೆಯಿಂದ ಗೋಣಿಮರೂರು ಗ್ರಾಮದವರೆಗಿನ ಅರಣ್ಯ ಪ್ರದೇಶದ ಸುಮಾರು 1 ರಿಂದ 2 ಕಿ.ಮೀ. ಅಂತರದಲ್ಲಿ ಕೋಳಿ ತ್ಯಾಜ್ಯ, ಹಳೆಯ ಬಟ್ಟೆ, ಗಾಜಿನ ಬಾಟಲ್, ಪ್ಲಾಸ್ಟಿಕ್ ಬಾಟಲ್, ಪಾದರಕ್ಷೆ, ಉಪಯೋಗಕ್ಕಿಲ್ಲದ ವಸ್ತುಗಳನ್ನು ದೊಡ್ಡ ದೊಡ್ಡ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ರಸ್ತೆಯ ಬದಿಯಲ್ಲಿ ಎಸೆಯಲಾಗುತ್ತಿದೆ.

ಕೊಳೆತು ನಾರುವ ವಸ್ತುಗಳನ್ನು ಇಲ್ಲಿ ಹಾಕುತ್ತಿರುವದರಿಂದ ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದ್ದರೆ, ಚೀಲಗಳಲ್ಲಿರುವ ತ್ಯಾಜ್ಯಗಳನ್ನು ಬೀದಿ ನಾಯಿಗಳು ಎಳೆದಾಡುತ್ತಿರುತ್ತವೆ. ಅರಣ್ಯ ಪ್ರದೇಶದ ಎರಡೂ ಬದಿಗಳಲ್ಲಿ ತ್ಯಾಜ್ಯಗಳ ರಾಶಿಯೇ ಕಂಡುಬರುತ್ತಿದೆ. ಮದುವೆ ಮನೆಯಲ್ಲಿ ಬಳಸಲ್ಪಡುವ, ಪ್ಲಾಸ್ಟಿಕ್ ತಟ್ಟೆ, ಲೋಟ, ಪಾದರಕ್ಷೆ ಸೇರಿದಂತೆ ನೂರಾರು ಸಂಖ್ಯೆಯ ಬಾಟಲ್‍ಗಳನ್ನು ಇಲ್ಲಿಗೆ ತಂದು ಎಸೆಯಲಾಗುತ್ತಿದೆ.

ಇಂತಹ ವಸ್ತುಗಳನ್ನು ದುರುಳರು ವಾಹನಗಳಲ್ಲಿ ತಂದು ಈ ಪ್ರದೇಶದಲ್ಲಿ ಬಿಸಾಕುತ್ತಿದ್ದಾರೆ. ಕೋಳಿ ಅಂಗಡಿಯ ತ್ಯಾಜ್ಯಗಳನ್ನು ಸುರಿಯುತ್ತಿರುವ ಕೊಳಕು ಮನಸ್ಥಿತಿಯವರಿಂದ ಅರಣ್ಯ ಪ್ರದೇಶದ ವಾತಾವರಣವೂ ಕೆಡುತ್ತಿದೆ. ಇದೀಗ ದೇಶಾದ್ಯಂತ ಸ್ವಚ್ಛ ಭಾರತ್ ಅಭಿಯಾನದ ಬಗ್ಗೆ ಪುಂಖಾನುಪುಂಖ ಭಾಷಣಗಳು ಮೊಳಗುತ್ತಲೇ ಇವೆ. ಆದರೆ ತಮ್ಮ ಮನೆ-ಅಂಗಡಿಯ ತ್ಯಾಜ್ಯವನ್ನು ಅರಣ್ಯದಲ್ಲಿ ಸುರಿಯುವ ಮೂಲಕ ಕೆಟ್ಟ ಮನಸ್ಥಿತಿಯವರು ಸ್ವಚ್ಛಭಾರತ್ ಅಭಿಯಾನದ ಮಾನ ಕಳೆಯುತ್ತಿದ್ದಾರೆ.

ಇನ್ನಾದರೂ ಇಂತಹ ಕೊಳಕು ಮನಸ್ಸಿನವರು ಬದಲಾಗಲಿ. ತಮ್ಮ ಅಂಗಡಿ-ಮನೆಯ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಿ. ಸುಂದರ ಅರಣ್ಯ ಪ್ರದೇಶವನ್ನು ಕಸದ ತೊಟ್ಟಿಯನ್ನಾಗಿ ಮಾರ್ಪಡಿಸದಿರಲಿ.