ಕುಶಾಲನಗರ, ಜು. 19: ಅಕ್ರಮವಾಗಿ ತೇಗದ ಮರದ ನಾಟಾ ಸಾಗಿಸುತ್ತಿದ್ದ ವಾಹನವನ್ನು ಮಾಲು ಸಹಿತ ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಮಂಗಳವಾರ ರಾತ್ರಿ ಗುಡ್ಡೆಹೊಸೂರಿನಿಂದ ಕುಶಾಲನಗರದೆಡೆಗೆ ಇನ್ನೋವಾ ಕಾರಿನಲ್ಲಿ (ಕೆಎ.03.ಎಂಜಿ.4333) ಅಕ್ರಮವಾಗಿ ಮರ ಸಾಗಾಟವಾಗುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಧಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ತಾವರೆಕೆರೆ ಬಳಿಯ ಮರದ ಮಿಲ್ ಒಂದರ ಬಳಿ ವಾಹನವನ್ನು ಅಡ್ಡಗಟ್ಟಿದ್ದಾರೆ. ಈ ಸಂದರ್ಭ ಆರೋಪಿ ಚಾಲಕ ಓಡಿ ತಲೆಮರೆಸಿಕೊಂಡಿದ್ದು, 50 ಸಾವಿರ ರೂ ಮೌಲ್ಯದ ತೇಗದ ಮರದ ನಾಟ ಹಾಗೂ ಅಂದಾಜು ರೂ. 5 ಲಕ್ಷ ಮೌಲ್ಯದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅರಣ್ಯ ಉಪ ವಲಯಾಧಿಕಾರಿ ಶಿವರಾಂ ಮಾಹಿತಿ ನೀಡಿದ್ದಾರೆ. ವಶಪಡಿಸಿಕೊಂಡ ಕಾರು ಸ್ಥಳೀಯ ನಿವಾಸಿ ಸುಮೇರ್ ಎಂಬಾತನಿಗೆ ಸೇರಿದ್ದು ಎಂದು ಅವರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಅರಣ್ಯ ಉಪ ವಲಯಾಧಿಕಾರಿಗಳಾದ ರಂಜನ್, ಸಿಬ್ಬಂದಿಗಳಾದ ಮಂಜೇಗೌಡ, ಪೂಣಚ್ಚ, ತಿಮ್ಮಯ್ಯ, ಕುಶಾಲಪ್ಪ, ಚಾಲಕ ಸತೀಶ್ ಪಾಲ್ಗೊಂಡಿದ್ದರು.