ಮಡಿಕೇರಿ, ಜು. 19: ತಾ. 9 ರಂದು ದ. ಕೊಡಗು ದೈವಜ್ಞ ಬ್ರಾಹ್ಮಣರ ಸಂಘದ 36ನೇ ವಾರ್ಷಿಕ ಮಹಾಸಭೆ ಗೋಣಿಕೊಪ್ಪಲು ಶ್ರೀ ಉಮಾಮಹೇಶ್ವರಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಎಂ.ಜಿ. ಕಾಂತರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಮುಖ್ಯ ಅತಿಥಿಗಳಾಗಿ ಮಡಿಕೇರಿ ದೈವಜ್ಞ ಬ್ರಾಹ್ಮಣರ ಸಂಘದ ಮಾಜಿ ಉಪಾಧ್ಯಕ್ಷ, ತೆರಿಗೆ ಸಲಹೆಗಾರರೂ ಆದ ಲಯನ್ ಮಧುಕರ್ ಶೇಟ್ ಆಗಮಿಸಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೌಟುಂಬಿಕ ಜೀವನಕ್ಕೆ ಒತ್ತು ನೀಡಬೇಕು. ಸಾಮರಸ್ಯದಿಂದ ಕೂಡಿದ ಕೌಟುಂಬಿಕ ಜೀವನ ಸಾಮರಸ್ಯದಿಂದ ಕೂಡಿದ ಸಮಾಜವನ್ನು ನಿರ್ಮಿಸಲು ಅವಶ್ಯವಾಗಿದ್ದು, ಮನೆಯಲ್ಲಿ ಬೆಳೆಯುವ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸದ ಜೊತೆಗೆ ಉತ್ತಮ ಸಾಮಾಜಿಕ ಶಿಕ್ಷಣವನ್ನು ಕೊಡುವ ಅವಶ್ಯಕತೆ ಇದೆ. ಮಕ್ಕಳಲ್ಲಿ ಗುರುಹಿರಿಯರಲ್ಲಿ ಗೌರವಾದಾರ ಸಮಾಜದ ಬಗ್ಗೆ ಕಾಳಜಿ, ದೇಶದ ಬಗ್ಗೆ ಅಭಿಮಾನ, ಧರ್ಮದ ಬಗ್ಗೆ ಶ್ರದ್ಧೆ, ಒಡ ಹುಟ್ಟಿದವರಲ್ಲಿ ಆತ್ಮೀಯತೆಯಂತಹ ಗುಣಗಳನ್ನು ಬೆಳೆಸಿದ್ದೇ ಆದರೆ ಮಕ್ಕಳು ಸಮಾಜಕ್ಕೆ ಆಸ್ತಿಯಾಗುತ್ತಾರೆ ಎಂದು ಹೇಳಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಅಧ್ಯಕ್ಷ ಎಂ.ಜಿ. ಮೋಹನ್‍ರವರು ಸಂಘದ ಜಾಗದಲ್ಲಿ ಆದಷ್ಟು ಬೇಗ ಒಂದು ಸಭಾಭವನ ನಿರ್ಮಿಸಲಿದ್ದು, ಸದಸ್ಯರ ಸಹಕಾರವನ್ನು ಕೋರಿದರು.

ಇದೇ ಸಂದರ್ಭ ಮಧುಕರ್ ಶೇಟ್, ಮಡಿಕೇರಿ ಮಹಿಳಾ ಸಮಾಜದ ಮಾಜಿ ಅಧ್ಯಕ್ಷೆ ಹೇಮಾ ಈಶ್ವರ್ ಕುಮಾರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳಿಗೆ ಹಾಗೂ ಮಹಿಳೆಯರಿಗಾಗಿ ಸಂಗೀತ ಹಾಗೂ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು. 2016-17ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸೌಮ್ಯ ನಾಗೇಶ್ ಪ್ರಾರ್ಥಿಸಿದರೆ, ಎ.ವಿ. ವೆಂಕಟೇಶ್ ಸ್ವಾಗತಿಸಿದರು. ಲಯನ್ ವೆಂಕಟೇಶ್ ಹಾಗೂ ಸುಧಾ ರತ್ನಾಕರ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಎಸ್.ಎಸ್. ನಾಗರಾಜ್ ವರದಿ ಓದಿದರೆ, ಬಿ.ಎಂ. ಶ್ರೀಧರ್ 2016-17ನೇ ಸಾಲಿನ ಲೆಕ್ಕಾಚಾರ ಮಂಡಿಸಿದರು. ಸೌಮ್ಯ ನಾಗೇಶ್ ಹಾಗೂ ಎ.ವಿ. ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿ, ಎಂ.ಜಿ. ನಾರಾಯಣ್ ವಂದಿಸಿದರು.