ಕಿರುಸೇತುವೆ ಮೇಲ್ಬಾಗದಲ್ಲಿ ಸುಮಾರು 6 ಅಡಿಗಳಷ್ಟು ನೀರು ಹರಿಯುತ್ತಿದ್ದು, ರಸ್ತೆ ಸಂಚಾರ ಕಡಿತಗೊಂಡಿದೆ. ಬೇತ್ರಿ, ಕಾವೇರಿ ಹೊಳೆಯಲ್ಲಿ ಹಾಗೂ ಮುತ್ತಾರುಮುಡಿ ಕಿರುಹೊಳೆಯಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ಕೊಡಂಬೂರು ಸಮೀಪ ಹೊಳೆತೋಡುವಿನಲ್ಲಿ ನೀರಿನ ಮಟ್ಟ ಏರಿಕೆ ಉಂಟಾಗಿದ್ದು, ಮೂರ್ನಾಡು ಬಲಮುರಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.
ಮಂಗಳವಾರ ಬೆಳಿಗ್ಗೆಯಿಂದ ಹೆಚ್ಚಿದ ಮಳೆ ಸ್ವಲ್ಪ ಬಿಡುವು ನೀಡುತ್ತಾ, ಮತ್ತೆ ರಭಸದಿಂದ ಸುರಿಯುತ್ತಿದೆ. ಮಳೆಯಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಬವಣೆ ಪಡುವಂತಾಯಿತು.
ಕುಶಾಲನಗರ: ಕಳೆದ 2 ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆ ಕಂಡುಬಂದಿದೆ. ಪಟ್ಟಣ ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಮಳೆ ಕಾರಣ ಜನಜೀವನ ಬಹುತೇಕ ಅಸ್ತವ್ಯಸ್ಥಗೊಂಡಿತ್ತು. ಯಾವದೇ ರೀತಿಯ ಅನಾಹುತ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಹಾರಂಗಿ ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ ಅಧಿಕಗೊಂಡಿದ್ದು 9270 ಕ್ಯೂಸೆಕ್ ನೀರು ಒಳ ಹರಿಯುತ್ತಿದೆ. ಜಲಾಶಯದಲ್ಲಿ ಪ್ರಸಕ್ತ 4.81 ಟಿಎಂಸಿ ನೀರಿನ ಸಂಗ್ರಹವಿದೆ. ಜಲಾಶಯ ಭರ್ತಿಯಾಗಲು ಇನ್ನೂ 14 ಅಡಿಗಳಷ್ಟು ನೀರು ಸಂಗ್ರಹವಾಗಬೇಕು. ಬುಧವಾರ ವೇಳೆಗೆ ಅಣೆಕಟ್ಟೆಯಲ್ಲಿ 2845 ಅಡಿಗಳಷ್ಟು ಏರಿದೆ.
ಜಲಾನಯನ ಪ್ರದೇಶದಲ್ಲಿ ಒಂದು ಇಂಚು ಮಳೆಯಾದ ಬಗ್ಗೆ ಅಣೆಕಟ್ಟು ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೂಡಿಗೆ ವ್ಯಾಪ್ತಿಯಲ್ಲಿ ಮಳೆ
ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಮತ್ತು ಕಾವೇರಿ ನದಿ ತಟದ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕಾವೇರಿ ನದಿಗೆ ಹೆಚ್ಚು ನೀರು ಬರುತ್ತಿದ್ದು, ನೀರು ಹೆಚ್ಚಾದ ಹಿನ್ನೆಲೆಯಲ್ಲಿ ಕಾವೇರಿ ಮತ್ತು ಹಾರಂಗಿ ಜತೆಗೂಡುವ ಕೂಡಿಗೆಯ ಸಂಗಮ ಸ್ಥಳದಿಂದ ಹಾರಂಗಿ ನದಿಗೆ ಕಾವೇರಿ ನೀರು ಹಿಂತಳ್ಳುವಿಕೆಯಿಂದ ಕೂಡಿಗೆಯ ಸೇತುವೆಯ ಸಮೀಪ ನದಿಯು ತುಂಬಿದ ಛಾಯೆ ಕಾಣುತ್ತಿದೆ.
ಕೃಷಿ ಚಟುವಟಿಕೆ ಚುರುಕು
ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿನಿಂದ ಸಮರ್ಪಕವಾಗಿ ಮಳೆ ಬಾರದೆ, ಸಮೀಪದಲ್ಲೇ ಇರುವ ಹಾರಂಗಿ ಅಣೆಕಟ್ಟೆಯು ತುಂಬುವ ಮುನ್ಸೂಚನೆ ಇಲ್ಲದ ಕಾರಣ ಈ ವ್ಯಾಪ್ತಿಯ ರೈತರು ಒಂದು ತಿಂಗಳು ತಡವಾಗಿ ಭತ್ತದ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.
ಕಳೆದೆರಡು ದಿನಗಳಿಂದ ಈ ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಹಾರಂಗಿ ಅಣೆಕಟ್ಟೆಯು ಭರ್ತಿಯಾಗಲು ಇನ್ನು 20 ಅಡಿಗಳು ಇರುವದರಿಂದ, ನೀರನ್ನು ನಾಲೆಗಳ ಮೂಲಕ ಹರಿಬಿಡಬಹುದೆಂಬ ನಂಬಿಕೆಯಲ್ಲಿ ಈ ವ್ಯಾಪ್ತಿಯ ರೈತರು ಈಗಾಗಲೇ ಸಹಕಾರ ಸಂಘಗಳಿಂದ, ಕೃಷಿ ಇಲಾಖೆಯಿಂದ ಬಿತ್ತನೆ ಬೀಜಗಳನ್ನು ಕೊಂಡೊಯ್ದು ಬಿತ್ತನೆ ಮಾಡುತ್ತಿದ್ದಾರೆ.
ಈಗಾಗಲೇ ಇಲಾಖೆಯವರು ಉಪನಾಲೆಗಳ ದುರಸ್ತಿ ಕಾರ್ಯ ಕೈಗೊಂಡಿರುವದರಿಂದ ರೈತರುಗಳಿಗೆ ಹಾರಂಗಿ ಅಣೆಕಟ್ಟೆಯಿಂದ ನೀರಿನ ಸಾಮಥ್ರ್ಯವನ್ನು ನೋಡಿಕೊಂಡು ನಂತರ ನಾಲೆಗಳಿಗೆ ನೀರು ಹರಿಸಬೇಕು ಎಂದು ಈ ವ್ಯಾಪ್ತಿಯ ರೈತರು ಆಗ್ರಹಿಸಿದ್ದಾರೆ. ಸಂಬಂಧಪಟ್ಟ ನೀರಾವರಿ ಇಲಾಖೆ ಹಾಗೂ ಹಾರಂಗಿ ಅಣೆಕಟ್ಟೆಯ ಕಾರ್ಯಪಾಲಕ ಅಭಿಯಂತರರು ಮೊದಲಿನಿಂದ ನಡೆದುಕೊಂಡು ಬಂದಂತೆ ಹಾರಂಗಿಯಲ್ಲೇ ನಾಲೆಗಳಿಗೆ ನೀರು ಬಿಡುವ ಬಗ್ಗೆ ಸಭೆಗಳನ್ನು ನಡೆಸಿ, ರೈತರ ಸಮಸ್ಯೆಗಳನ್ನು ಆಲಿಸುವದರ ಮೂಲಕ ಸಮಸ್ಯೆಗೆ ಸ್ಪಂದಿಸಬೇಕೆಂದು ಆಗ್ರಹಿಸಿದ್ದಾರೆ.
ಕರಡಿಗೋಡು ಮನೆ ಕುಸಿತ
ಧಾರಾಕಾರ ಮಳೆಯಿಂದಾಗಿ ಸಿದ್ದಾಪುರದ ಕರಡಿಗೋಡು ನದಿದಡದ ನಿವಾಸಿ ರುಕ್ಮಿಣಿ ಎಂಬವರ ಮನೆಯ ಹಿಂಭಾಗದಲ್ಲಿ ದಡ ಕುಸಿದ ಪರಿಣಾಮ ಅಡುಗೆ ಕೋಣೆ ಕುಸಿದು ಬಿದ್ದಿದೆ. ಸದಾ ಸುದ್ದಿಗೆ ಗ್ರಾಸವಾಗುತ್ತಿರುವ ಕರಡಿಗೋಡುವಿನಲ್ಲಿ ಕಾವೇರಿ ನದಿಯ ನೀರು ಏರಿಕೆಯಾಗಿದ್ದು, ಈ ಹಿಂದಿನ ಮಳೆಗಾಲದಲ್ಲಿ ನೀರಿನ ಹೊಡೆತಕ್ಕೆ ಸಿಲುಕಿ ನದಿ ದಡದ ಬಿದಿರುಗಳು ಬುಡ ಸಮೇತ ಕಿತ್ತುಹೋಗಿರುವ ಹಿನ್ನೆಲೆಯಲ್ಲಿ ನದಿ ದಡದ ಮನೆಗಳ ಆಧಾರಕ್ಕೆ ಧಕ್ಕೆಯಾಗಿದೆ.
ಸಾಕಷ್ಟು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದಲ್ಲದೇ ವರ್ಷಂಪ್ರತಿ ನದಿ ದಡ ಪ್ರವಾಹ ಸಂದರ್ಭ ಕುಸಿಯುತ್ತಿರುವದರಿಂದ ನದಿ ಅಗಲವಾಗುತ್ತಿದ್ದು, ದಡದ ನಿವಾಸಿಗಳು ಮಳೆಗಾಲದಲ್ಲಿ ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡೇ ದಿನದೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನದಿದಡದಲ್ಲಿ ಅಪಾಯವಿರುವ ಮನೆಗಳಿಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಶಾಶ್ವತ ಸೂರು ಒದಗಿಸಿಕೊಡುವಂತೆ ನಿವಾಸಿಗಳು ಹಲವಾರು ಬಾರಿ ಒತ್ತಾಯಿಸಿದ್ದರೂ ಯಾವದೇ ಯೋಜನೆ ರೂಪಿಸದೇ ನಿರ್ಲಕ್ಷ್ಯವಹಿಸಲಾಗುತದೆಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಕೇವಲ ವರ್ಷಂಪ್ರತಿ ಗಂಜಿ ಕೇಂದ್ರ ಪ್ರಾರಂಭಿಸಿ ಕೈತೊಳೆದುಕೊಳ್ಳುತ್ತಿರುವ ಜಿಲ್ಲಾಡಳಿತ ಇನ್ನಾದರೂ ಶಾಶ್ವತ ಸೂರು ಒದಗಿಸಿ ಮುಂದೆ ಆಗುವ ಅನಾಹುತ ತಪ್ಪಿಸಲಿ ಎಂದು ನದಿ ದಡದ ನಿವಾಸಿಗಳು ಆಗ್ರಹಪಡಿಸಿದ್ದಾರೆ. ಕರಡಿಗೋಡು ಗ್ರಾಮದಲ್ಲಿ ಹೋಬಳಿಯ ಕಂದಾಯ ಪರಿವೀಕ್ಷಕ ಅನಿಲ್ ಹಾಗೂ ಗ್ರಾಮಲೆಕ್ಕಿಗ ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು.
ಸೋಮವಾರಪೇಟೆ
ತಡೆಗೋಡೆ ಕುಸಿತ: ಭಾರೀ ಗಾಳಿ ಮಳೆಗೆ ತಡೆಗೋಡೆಯೊಂದು ಕುಸಿದುಬಿದ್ದ ಪರಿಣಾಮ ವಾಸದ ಮನೆ ಜಖಂಗೊಂಡಿರುವ ಘಟನೆ ಗರಗಂದೂರು ಬಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.
ಗರಗಂದೂರು ಗ್ರಾಮದ ಅಫ್ಸತ್ ಎಂಬವರಿಗೆ ಸೇರಿದ ವಾಸದ ಮನೆಯ ಗೋಡೆಯ ಪಕ್ಕದಲ್ಲೇ ನಿರ್ಮಿಸಿದ್ದ ತಡೆಗೋಡೆ ಕುಸಿದು ಬಿದ್ದಿದ್ದು, ಮೂರು ಕೊಠಡಿಗಳು ಸಂಪೂರ್ಣ ಜಖಂಗೊಂಡಿವೆ. ಘಟನೆ ಸಂದರ್ಭ ಮನೆಯೊಳಗೆ ಯಾರೂ ಇಲ್ಲದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.
ಸ್ಥಳಕ್ಕೆ ಗ್ರಾಮ ಲೆಕ್ಕಿಗ ನಾಗೇಶ್‍ರಾವ್, ಗ್ರಾಮ ಪಂಚಾಯತ್ ಸದಸ್ಯ ಗೌತಮ್ ಶಿವಪ್ಪ ಸೇರಿದಂತೆ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಐಗೂರಿನ ಚೋರನ ಹೊಳೆ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ಪಾತ್ರದ ಮನೆಗಳಿಗೆ ನೀರು ನುಗ್ಗುತ್ತಿದೆ. ಚೋರನ ಹೊಳೆ ದಡದಲ್ಲಿರುವ ಮಣಿ ಎಂಬವರ ಮನೆಯ ಮುಂಭಾಗ ಜಲಾವೃತಗೊಂಡಿದೆ.
ಶಾಂತಳ್ಳಿಯಲ್ಲಿ ಮನೆ ಜಖಂ
ಶಾಂತಳ್ಳಿಯ ಬಸವನಕಟ್ಟೆ ನಿವಾಸಿ ಪುಟ್ಟಸ್ವಾಮಿ ಎಂಬವರಿಗೆ ಸೇರಿದ ವಾಸದ ಮನೆಯ ಮೇಲೆ ಪಕ್ಕದಲ್ಲಿಯೇ ಇದ್ದ ಬೃಹತ್ ಹಲಸಿನ ಮರ ಉರುಳಿಬಿದ್ದಿದೆ. ಸಂಪೂರ್ಣವಾಗಿ ಮನೆಯ ಮೇಲೆ ಮರ ಬಿದ್ದಿದ್ದು, ಮನೆಮಂದಿ ಹೊರಭಾಗದಲ್ಲಿ ಇದ್ದುದರಿಂದ ಯಾವದೇ ಪ್ರಾಣ ಹಾನಿ ಸಂಭವಿಸಿಲ್ಲ.
ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗ ನಾಗೇಂದ್ರ, ಗ್ರಾಮ ಸಹಾಯಕ ಸುರೇಶ್, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುಮಾರು 70 ಸಾವಿರಕ್ಕೂ ಅಧಿಕ ನಷ್ಟ ಸಂಭವಿಸಿರುವ ಬಗ್ಗೆ ವರದಿ ನೀಡಿದ್ದಾರೆ.
ಶನಿವಾರಸಂತೆ ನಾಟಿ ಕಾರ್ಯ
ಶನಿವಾರಸಂತೆ ವಿಭಾಗದಲ್ಲಿ ಉತ್ತಮ ಮಳೆಯಾಗಿದೆ. ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಎಲ್ಲೆಡೆ ಗದ್ದೆಗಳಲ್ಲಿ ನೀರಾಗಿದ್ದು, ರೈತರು ಉಳುತ್ತಿರುವ ಹಾಗೂ ನಾಟಿ ಮಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಜುಲೈ 2ನೇ ವಾರದಲ್ಲಿ ಮಳೆರಾಯ ಕೈಕೊಟ್ಟು ನಿರಾಶೆ ಮೂಡಿಸಿದ್ದರೂ, ಈ ವಾರದ ಮಳೆ ರೈತರಲ್ಲಿ ಹರ್ಷ ಮೂಡಿಸಿದೆ. ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಕೊಣಜಗೇರಿ, ಮಾದ್ರೆ, ಬಿಳಾಹ ಗ್ರಾಮಗಳ ಹಾಳು ಬಿದ್ದಿದ್ದ ಗದ್ದೆಗಳಲ್ಲೂ 6 ತಿಂಗಳ ಬೆಳೆಯಾದ ತುಂಗ ಭತ್ತದ ಸಸಿಮಡಿ ಬೆಳೆದು ನಿಂತಿದೆ. ಉಳುಮೆ ಕೆಲಸದೊಂದಿಗೆ ನಾಟಿಯು ಭರದಿಂದ ಸಾಗಿದೆ.
ದ.ಕೊಡಗಿನಲ್ಲಿ ಬಿರುಸುಗೊಂಡ ಮಳೆ
ಶ್ರೀಮಂಗಲ: ಕೊಡಗಿನ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಈ ವ್ಯಾಪ್ತಿಯ ನದಿ, ತೋಡುಗಳಲ್ಲಿ ಜೀವಕಳೆ ಕಂಡು ಬಂದಿದೆ.
ದ.ಕೊಡಗಿನ ಘಟ್ಟ ಪ್ರದೇಶದಲ್ಲಿ ಹುಟ್ಟಿ ಹರಿಯುವ ಪ್ರಮುಖ ನದಿಗಳಾದ ಲಕ್ಷ್ಮಣ ತೀರ್ಥ, ಕಕ್ಕಟ್ಟು ನದಿಗಳಲ್ಲಿ ನೀರಿನ ಮಟ್ಟ ಇದೇ ಮೊದಲ ಬಾರಿಗೆ ಪ್ರಸಕ್ತ ಮುಂಗಾರು ಅವಧಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಹರಿಯುತ್ತಿದೆ. ಶ್ರೀಮಂಗಲ ಸಮೀಪ ಬ್ರಹ್ಮಗಿರಿ ಬೆಟ್ಟದಲ್ಲಿ ಹುಟ್ಟಿ ಹರಿಯುವ ಲಕ್ಷ್ಮಣ ತೀರ್ಥ ನದಿಯ ನೀರಿನ ಮಟ್ಟ ಏರಿಕೆಯಾಗಿದೆ.
ಗ್ರಾಮೀಣ ಭಾಗಗಳಲ್ಲಿ ತೀವ್ರ ಮಳೆ, ಗಾಳಿಯಿಂದ ಅಲ್ಲಲ್ಲಿ ಸಣ್ಣಪುಟ್ಟ ಮರಗಳು ರಸ್ತೆ ಮೇಲೆ ಹಾಗೂ ವಿದ್ಯುತ್ ತಂತಿ, ಕಂಬಗಳ ಮೇಲೆ ಬಿದ್ದ ಪರಿಣಾಮ ಶ್ರೀಮಂಗಲ, ಬಿರುನಾಣಿ, ಹುದಿಕೇರಿ, ಟಿ.ಶೆಟ್ಟಿಗೇರಿ ವ್ಯಾಪ್ತಿಯ ಗ್ರಾಮೀಣ ಭಾಗಗಳಿಗೆ ಕಳೆದ 48 ಗಂಟೆಯಿಂದಲೂ ವಿದ್ಯುತ್ ಕಡಿತ ಉಂಟಾಗಿದೆ. ಗ್ರಾಮೀಣ ಭಾಗದ ನದಿ, ತೋಡುಗಳು ತುಂಬಿ ಹರಿಯುತ್ತಿರುವದರಿಂದ ಈ ಭಾಗದ ಕೆಲವು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ವ್ಯಾಪ್ತಿಯ ಗದ್ದೆಗಳಲ್ಲಿ ನೀರು ತುಂಬಿಕೊಂಡಿರುವ ಚಿತ್ರಣ ಕಂಡು ಬಂದಿದೆ.
ಬಾಳೆಲೆ: ಬಾಳೆಲೆ ವಿಭಾಗದಲ್ಲಿಯೂ ಉತ್ತಮ ಮಳೆಯಾಗುತ್ತಿದೆ. ಈ ವ್ಯಾಪ್ತಿಯಲ್ಲಿ ಲಕ್ಷ್ಮಣ ತೀರ್ಥ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ.