ಮಡಿಕೇರಿ, ಜು. 19: ಇಂದಿನಿಂದ ಆರಂಭಗೊಂಡಿರುವ ಪುಷ್ಯ ಮಳೆಯು ಮೊದಲನೆಯ ದಿನವೇ ಭಾರೀ ಆರ್ಭಟದೊಂದಿಗೆ; ತಲಕಾವೇರಿ ವ್ಯಾಪ್ತಿಯಲ್ಲಿ ಹಿಂದಿನ 48 ಗಂಟೆಗಳಲ್ಲಿ 18 ಇಂಚು ದಾಖಲೆಯ ಮಳೆಯಾದ ಪರಿಣಾಮ ಭಾಗಮಂಡಲ ಕ್ಷೇತ್ರ ಸಂಪೂರ್ಣ ಜಲಾವೃತಗೊಂಡಿದೆ. ಇಂದು ಮುಂಜಾನೆ ವೇಳೆಗೆ ಭಾಗಮಂಡಲ-ಅಯ್ಯಂಗೇರಿ ಮಾರ್ಗದ ಸಂಪರ್ಕ ಕಡಿತಗೊಂಡು ರಸ್ತೆಯ ಮೇಲೆ 4 ಜೆಸಿಬಿ ಬಳಸಿ ರಸ್ತೆ ಸಂಚಾರ ಸುಗಮಗೊಳಿಸಲಾಯಿತು.ಜಿಲ್ಲಾ ಕೇಂದ್ರ ಮಡಿಕೇರಿಯ ಸುದರ್ಶನ ವೃತ್ತದ ಬಳಿ ಭಾರೀ ಗಾತ್ರದ ಬಳಂಜಿ ಮರ ಬುಡ ಸಮೇತ ನೆಲಕಚ್ಚಿದ್ದು, ವಿದ್ಯುತ್ ತಂತಿಗಳು ರಸ್ತೆಗಳಲ್ಲಿ ತುಂಡಾಗಿ ಹರಡಿಕೊಂಡಿದ್ದ ದೃಶ್ಯ ಎದುರಾದರೂ, ಯಾವದೇ ಪ್ರಾಣಾಪಾಯ ಸಂಭವಿಸಿಲ್ಲ. ಸಿದ್ದಾಪುರ, ಮಡಿಕೇರಿ, ಮಂಗಳಾದೇವಿ ನಗರ, ರಾಣಿಪೇಟೆಯ ಅಂಬೇಡ್ಕರ್ ಬಡಾವಣೆಯಲ್ಲಿ ಬರೆಕುಸಿತದಿಂದ ಸಮಸ್ಯೆ ಎದುರಾದರೂ ಯಾರಿಗೂ ಅಪಾಯ ಉಂಟಾಗಿಲ್ಲ.
ಮೂರು ಗಂಟೆ ಕಾರ್ಯಾಚರಣೆ
ಸುದರ್ಶನ ವೃತ್ತ ಬಳಿ ಜಿಲ್ಲಾಧಿಕಾರಿ ನಿವಾಸದ ಮಾರ್ಗದಲ್ಲಿ ಧರೆಗುರುಳಿದ ಭಾರೀ ಗಾತ್ರದ ಬಳಂಜಿ ಮರವನ್ನು ಅಗ್ನಿಶಾಮಕ ದಳದ ಅಧಿಕಾರಿ ಪಿ. ಚಂದನ್ ನೇತೃತ್ವದಲ್ಲಿ ಸತತ ಮೂರು ಗಂಟೆಗಳ ಕಾರ್ಯಾಚರಣೆ ಮೂಲಕ ತೆರವುಗೊಳಿಸಲಾಯಿತು. ಅಗ್ನಿ ಶಾಮಕ ಸಿಬ್ಬಂದಿಗಳಾದ ಕೆ.ಟಿ. ಸತೀಶ್, ಜಯಪ್ರಕಾಶ್, ಯತೀಶ್, ಬರ್ಮಪ್ಪ, ಸಂತೋಷ್, ಪರ್ಹನ್, ನಾರಾಯಣ ಹಾಗೂ ನಗರಸಭೆಯ ಓಬಳಿ ಮತ್ತು ಟ್ರ್ಯಾಕ್ಟರ್ ಚಾಲಕ ಈರಪ್ಪ ಪಾಲ್ಗೊಂಡಿದ್ದರು.
ಕೈಕೊಟ್ಟ ವಿದ್ಯುತ್
ಗಾಳಿಬೀಡು, ಸಂಪಿಗೆಕಟ್ಟೆ, ಅಬ್ಬಿಫಾಲ್ಸ್ ಮಾರ್ಗದಲ್ಲಿ ಇಂದಿನ ಗಾಳಿ ಮಳೆಯಿಂದಾಗಿ 8 ವಿದ್ಯುತ್ ಕಂಬಗಳು ಹಾನಿಗೊಂಡು ಜಿಲ್ಲಾ ಕೇಂದ್ರದಲ್ಲೂ, ವಿದ್ಯುತ್ ಸಂಪರ್ಕ ಕಡಿತಗೊಂಡು ಕುಂಡಾಮೇಸ್ತ್ರಿ ಜಲ ಸಂಗ್ರಹಗಾರದಿಂದ ನೀರು ಸರಬರಾಜಿಗೆ ಅಡಚಣೆಯಾಗಿದೆ. ಈ ವೇಳೆಯಲ್ಲಿ ಚೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಸಂಪತ್ ನೇತೃತ್ವದಲ್ಲಿ ಐವರು ನೂತನ ಸಿಬ್ಬಂದಿ ಸಹಿತ ಇತರ 22 ಮಂದಿಯ ತಂಡ ಸಮರೋಪಾದಯಲ್ಲಿ ದುರಸ್ತಿ ಕೆಲಸದಲ್ಲಿ ತೊಡಗಿದ್ದಾರೆ.
ಮಾವಿನ ಮರ ಬುಡಮೇಲು
ಮಾದಾಪುರ ಶ್ರೀ ಗಣಪತಿ ದೇವಾಲಯದ ಬಳಿ ಭಾರೀ ಗಾತ್ರದ ಮಾವಿನ ಮರವೊಂದು ರಸ್ತೆಗೆ ಅಡ್ಡಲಾಗಿ ನೆಲಕಚ್ಚಿದ ಪರಿಣಾಮ, ಮಾದಾಪುರ-ಸೋಮವಾರಪೇಟೆ ಮಾರ್ಗದಲ್ಲಿ ಸುಮಾರು ಒಂದೂವರೆ ಗಂಟೆ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಮರ
ಪುಷ್ಪಗಿರಿಯಲ್ಲಿ ದಾಖಲೆಯ ಮಳೆ
ಕಳೆದ ನಾಲ್ಕೈದು ದಿನಗಳಿಂದ ಬಿರುಸಿನ ಮಳೆಯಾಗುತ್ತಿದೆ. ಪುಷ್ಪಗಿರಿ ವ್ಯಾಪ್ತಿಯಲ್ಲಿ ದಾಖಲೆಯ ಮಳೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 20 ಇಂಚಿಗೂ ಅಧಿಕ ಮಳೆ ಸುರಿದಿದೆ.
ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಹೆಚ್ಚುತ್ತಿದೆ. ಇದರೊಂದಿಗೆ ಸಣ್ಣಪುಟ್ಟ ನದಿ ತೊರೆ, ಹೊಳೆಗಳಲ್ಲೂ ನೀರಿನ ಮಟ್ಟ ಅಧಿಕಗೊಳ್ಳುತ್ತಿದೆ. ಕುಡಿಗಾಣ ಗ್ರಾಮದಲ್ಲಿನ ಹೊಳೆಯಲ್ಲಿ ಒಮ್ಮಿಂದೊಮ್ಮೆಲೆ ನೀರಿನ ಹರಿವು ಹೆಚ್ಚಾಗಿದ್ದು, ಹೊಳೆಪಾತ್ರದ ಗದ್ದೆಗಳಿಗೆ ನೀರು ನುಗ್ಗಿದೆ. ಪರಿಣಾಮ ಗದ್ದೆ ಪ್ರದೇಶ ಸಂಪೂರ್ಣವಾಗಿ ಜಲಾವೃತವಾಗಿದ್ದು, ಗದ್ದೆಗಳಲ್ಲಿ ಸಸಿಮಡಿ ತಯಾರಿ, ಪೈರು ಕೀಳುವದು, ನಾಟಿ ಕಾರ್ಯದಲ್ಲಿ ನಿರತರಾಗಿದ್ದ ರೈತರು ಗದ್ದೆ ಕೆಲಸವನ್ನು ಅರ್ಧಕ್ಕೆ ಬಿಟ್ಟು ಮನೆ ಸೇರಿದ್ದಾರೆ.
ಗದ್ದೆಗಳಿಗೆ ನೀರು ನುಗ್ಗಿದ್ದರಿಂದ ಸಸಿಮಡಿ ಸಂಪೂರ್ಣವಾಗಿ ಹೊಳೆ ಪಾಲಾಗಿದೆ. ಕಳೆದ 20 ದಿನಗಳಿಂದ ಪಟ್ಟಿದ್ದ ಶ್ರಮ ವ್ಯರ್ಥವಾಗಿದೆ. ಮುಂದಿನ ನಾಟಿ ಕಾರ್ಯಕ್ಕೆ ಬೇರೆಯವರಿಂದ ಸಸಿಮಡಿ ಖರೀದಿ ಮಾಡುವ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಕುಡಿಗಾಣ ಗ್ರಾಮದ ಕೃಷಿಕ ಎಂ.ಟಿ. ದಿನೇಶ್ ವರುಣನಾರ್ಭಟದ ಸ್ಥಿತಿಯನ್ನು ಪತ್ರಿಕೆಗೆ ವಿವರಿಸಿದ್ದಾರೆ.
ಉಳಿದಂತೆ ಶಾಂತಳ್ಳಿ, ಸೋಮವಾರಪೇಟೆ ಹೋಬಳಿ, ಶನಿವಾರಸಂತೆ, ಕೊಡ್ಲಿಪೇಟೆ ಭಾಗದಲ್ಲಿ ದಿನದ 24 ಗಂಟೆಯೂ ಮಳೆ ಸುರಿಯುತ್ತಿದೆ. ಕಳೆದೆರಡು ದಿನಗಳಿಂದ ವರುಣನೊಂದಿಗೆ ವಾಯು ಆರ್ಭಟವೂ ಹೆಚ್ಚಾಗಿದ್ದು, ಕೆಲವೆಡೆ ರಸ್ತೆ, ಮನೆಗಳ ಮೇಲೆ ಮರಗಳು ಉರುಳಿ ಬಿದ್ದಿರುವ ಬಗ್ಗೆಯೂ ವರದಿಯಾಗಿದೆ.
ನಿರಂತರ ಮಳೆಗೆ ಗ್ರಾಮೀಣ ಪ್ರದೇಶದ ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ. ಸಣ್ಣಪುಟ್ಟ ಗುಂಡಿಗಳು ಇದೀಗ ಬೃಹತ್ ಗಾತ್ರ ಪಡೆದುಕೊಂಡಿದ್ದು, ವಾಹನ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ. ಮಳೆಯೊಂದಿಗೆ ಭಾರೀ ಗಾಳಿ ಬೀಸುತ್ತಿರುವ ಹಿನ್ನೆಲೆ ಕಾಫಿ ತೋಟಗಳಲ್ಲಿ ಮರಗಳು ಧರಾಶಾಹಿಯಾಗುತ್ತಿದ್ದು, ಬಹುತೇಕ ಕಾಫಿ ತೋಟಗಳ ಕಾರ್ಮಿಕರಿಗೆ ರಜೆ ನೀಡಲಾಗಿದೆ. ಗ್ರಾಮೀಣ ಭಾಗದ ರೈತರು ಬಿಡುವಿಲ್ಲದಂತೆ ಗದ್ದೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಉಳುಮೆ, ನಾಟಿ ಕಾರ್ಯ ಭರದಿಂದ ಸಾಗುತ್ತಿದೆ.