*ಗೋಣಿಕೊಪ್ಪಲು, ಜು. 19: ಸುವರ್ಣ ಗಡ್ಡೆ ಸಾಂಬಾರು ತಿಂದು ಅಸ್ವಸ್ಥರಾದ ಹುದಿಕೇರಿ ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರಗಳನ್ನು ನೀಡಬೇಕೆಂಬ ನಿಯಮವಿದೆ. ತಾಜಾ ತರಕಾರಿಗಳನ್ನು ನೀಡಬೇಕೆಂದು ಸೂಚಿಸಲಾಗಿದ್ದರೂ, ಸುವರ್ಣಗಡ್ಡೆಯನ್ನು ಸಾಂಬಾರಿಗೆ ಬಳಸಿದ್ದೇಕೆ ಎಂದು ನಿಲಯದ ಮೇಲ್ವಿಚಾರಕಿ ಶಾಂತ ಅವರಲ್ಲಿ ಪ್ರಶ್ನಿಸಿ, ಮುಂದೆ ಈ ರೀತಿ ಘಟನೆ ನಡೆಯದಂತೆ ಮುಂಜಾಗೃತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ವಿದ್ಯಾರ್ಥಿನಿಯರಿಗೆ ಸ್ನಾನ ಮಾಡಲು ಬಿಸಿ ನೀರು ಸಮಸ್ಯೆ ಎದುರಾಗಿದೆ. ಈ ಹಿಂದೆಯೇ ಗೀಸರ್ ಅಳವಡಿಸಿರುವ ಬಗ್ಗೆ ಮಾಹಿತಿ ನೀಡಿದರೂ ಗೀಸರ್ ಅಳವಡಿಕೆಯಾಗಿಲ್ಲ. ಈ ಬಗ್ಗೆ ಸಂಬಂದಪಟ್ಟ ಅಧಿಕಾರಿಯಲ್ಲಿ ಪ್ರಶ್ನಿಸಿದ ಅವರು, 24 ಗಂಟೆಯೊಳಗೆ ಗೀಸರ್ ಅಳವಡಿಕೆಯಾಗದಿದ್ದರೆ, ಶಿಸ್ತು ಕ್ರಮ ಕೈಗೊಳ್ಳುವದಾಗಿ ಎಚ್ಚರಿಸಿದರು.

ವಿದ್ಯಾರ್ಥಿಗಳ ಭದ್ರತೆಗೆ ಸಿ.ಸಿ. ಟಿ.ವಿ. ಅಳವಡಿಕೆಗೆ ಸೂಚಿಸಿದರೂ, ಯಾವದೇ ಕ್ರಮ ಕೈಗೊಂಡಿಲ್ಲ. 7 ದಿನದ ಒಳಗೆ ಸಿ.ಸಿ. ಟಿ.ವಿ. ಅಳವಡಿಕೆಗೆ ಮುಂದಾಗಬೇಕು ಮತ್ತು ವಿದ್ಯಾರ್ಥಿನಿಯರ ಕೊಠಡಿಗಳಲ್ಲಿನ ಸೊಳ್ಳೆ ಪರದೆಗಳನ್ನು, ದಾಸ್ತಾನು ಕೊಠಡಿಯಲ್ಲಿನ ಹಳೆಯ ಪದಾರ್ಥಗಳನ್ನು ಬದಲಾಯಿಸಿ ಗುಣಮಟ್ಟದ ಆಹಾರ ಪದಾರ್ಥವನ್ನು ಬಳಸಿಕೊಳ್ಳುವಂತೆ ಮೇಲ್ವಿಚಾರಕಿಗೆ ಸೂಚಿಸಿದರು. ವಿದ್ಯಾರ್ಥಿಗಳ ಊಟದ ತಟ್ಟೆಗಳನ್ನು ಸಾಬೂನಿನಿಂದ ತೊಳೆದು ಶುದ್ದವಾಗಿಟ್ಟುಕೊಳ್ಳುವಂತೆ, ವಾರಕೊಮ್ಮೆ ವಿದ್ಯಾರ್ಥಿನಿಯರ ಬೆಡ್‍ಶೀಟ್‍ಗಳನ್ನು ಬಿಸಿಲಿನಲ್ಲಿ ಒಣಗಿಸಬೇಕು ಎಂದು ತಿಳಿಸಿದರು. ನಿಲಯದಲ್ಲಿ ಹಲವು ದೋಷಗಳು ಕಂಡು ಬಂದಿದೆ. ಈ ಬಗ್ಗೆ 15 ದಿನದೊಳಗೆ ಸಮಸ್ಯೆ ಬಗೆಹರಿಸಿ, ಮಾಹಿತಿ ನೀಡುವಂತೆ ತಾಲೂಕು ಅಧಿಕಾರಿ ಜಾಲಿ ಅವರಿಗೆ ದೂರವಾಣಿ ಮೂಲಕ ತಿಳಿಸಿದರು. ಕ್ರಮಕ್ಕೆ ಮುಂದಾಗದಿದ್ದರೆ, ಶಿಸ್ತು ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರು. ಆಹಾರದ ಗುಣಮಟ್ಟವನ್ನು ಪರೀಕ್ಷಿಸಲು ವಿದ್ಯಾರ್ಥಿನಿಯರಿಗೆ ತಯಾರಿಸಿದ ಬೆಳಗ್ಗಿನ ಉಪಹಾರದ ದೋಸೆ ಹಾಗೂ ಕಾಫಿಯನ್ನು ಸೇವಿಸಿದ ನ್ಯಾಯ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ. ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ಸಮಾಜ ಸೇವಕ ದೀಪಕ್ ಮತ್ತಷ್ಟು ಶುಚಿ ರುಚಿಯಾಗಿ ಆಹಾರ ತಯಾರಿಸುವಂತೆ ಅಡುಗೆಯವರಿಗೆ ತಿಳಿಸಿದರು.

ಭೇಟಿ ಸಂದರ್ಭ ಹುದಿಕೇರಿ ಗ್ರಾ.ಪಂ. ಅಧ್ಯಕ್ಷೆ ಮತ್ರಂಡ ರೇಖಾ ಪೊನ್ನಪ್ಪ, ಜಿ.ಪಂ. ಸದಸ್ಯೆ ಶ್ರೀಜಾ ಸಾಜಿ, ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್, ಹುದಿಕೇರಿ ಗ್ರಾ.ಪಂ. ಸದಸ್ಯ ಚಂಗುಲಂಡ ಸೂರಜ್ ಹಾಜರಿದ್ದರು.