ಮಡಿಕೇರಿ, ಜು. 21: ಕೊಡಗು ಜಿಲ್ಲೆ ಕ್ರೀಡೆಗೆ ಹೆಸರುವಾಸಿಯಾಗಿದ್ದು, ದೇಶದ ಭೂಪಟದಲ್ಲಿ ವಿಶೇಷವಾಗಿ ಗುರುತಿ ಸಲ್ಪಟ್ಟಿದೆ. ಪುಟ್ಟ ಕೊಡಗು ಕ್ರೀಡಾಜಿಲ್ಲೆ ಎಂದೇ ಪರಿಗಣಿಸಲ್ಪಟ್ಟಿದ್ದು, ಇಲ್ಲಿ ಕೇವಲ ಹಾಕಿ ಆಟಗಾರರು ಮಾತ್ರ ರೂಪುಗೊಂಡಿಲ್ಲ. ಎಲ್ಲಾ ರೀತಿಯ ಕ್ರೀಡೆಗಳಲ್ಲೂ ಕೊಡಗಿನ ಕ್ರೀಡಾ ಪಟುಗಳು ಸಾಧನೆ ತೋರಿರುವದು, ತೋರುತ್ತಿರುವದು ವಿಶೇಷ. ಇಲ್ಲಿನ ಕ್ರೀಡಾಸಕ್ತರಿಗೆ ಅಗತ್ಯ ಉತ್ತೇಜನ, ಮಾರ್ಗದರ್ಶನ ನೀಡಿದಲ್ಲಿ ದೇಶಕ್ಕೆ ಇನ್ನಷ್ಟು ಕ್ರೀಡಾಪಟುಗಳು ಕೊಡುಗೆಯಾಗಲಿದ್ದಾರೆ. ಈ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ದೇಶದ ಖ್ಯಾತ ಟೆನ್ನಿಸ್‍ತಾರೆ ಕೊಡಗಿನ ಹೆಮ್ಮೆಯ ಕ್ರೀಡಾಪಟು ಮಚ್ಚಂಡ ರೋಹನ್ ಬೋಪಣ್ಣ ಅನಿಸಿಕೆ ವ್ಯಕ್ತಪಡಿಸಿದರು.

ಇತ್ತೀಚೆಗಷ್ಟೆ ಪ್ರತಿಷ್ಠಿತ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಮಿಶ್ರ ಡಬಲ್ಸ್‍ನಲ್ಲಿ ವೃತ್ತಿ ಜೀವನದಲ್ಲಿ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳಿಸಿ ದೇಶಕ್ಕೆ ಕೀರ್ತಿ ತಂದಿರುವ ರೋಹನ್ ಬೋಪಣ್ಣ ಈ ಸಾಧನೆ ಮಾಡಿ ಒಂದೂವರೆ ತಿಂಗಳ ಬಳಿಕ ತವರು ಜಿಲ್ಲೆಗೆ ಆಗಮಿಸಿದ್ದರು. ಗ್ರ್ಯಾಂಡ್ ಸ್ಲಾಮ್ ಸಾಧನೆ ಮಾಡಿದ ಭಾರತದ ಟೆನ್ನಿಸ್ ಆಟಗಾರರಾದ ಮಹೇಶ್ ಭೂಪತಿ, ಲಿಯಾಂಡರ್ ಪೇಸ್ ಹಾಗೂ ಸಾನಿಯಾ ಮಿರ್ಜಾ ಅವರ ನಂತರ ರೋಹನ್ ಬೋಪಣ್ಣ ದೇಶದ ನಾಲ್ಕನೇ ಆಟಗಾರರಾಗಿದ್ದು, ಮಾದಾಪುರದ ತಮ್ಮ ನಿವಾಸಕ್ಕೆ ಪತ್ನಿ ಸುಪ್ರಿಯಾಳೊಂದಿಗೆ ಭೇಟಿ ನೀಡಿ ತಂದೆ ಬೋಪಣ್ಣ ಹಾಗೂ ತಾಯಿ ಮಲ್ಲಿಕಾ ಅವರೊಂದಿಗೆ ವಿರಮಿಸಿ ಮರಳಿದ್ದಾರೆ.

‘ಶಕ್ತಿ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರೋಹನ್ ತಮ್ಮ ವೃತ್ತಿ ಜೀವನದ ಹಾದಿ ಹಾಗೂ ಮುಂದಿನ ಕನಸಿನ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಕ್ರೀಡಾಕ್ಷೇತ್ರಕ್ಕೆ ಬರುವವರು ನಿರ್ದಿಷ್ಟ ಗುರಿ ಹೊಂದಿರಬೇಕು. ಕಠಿಣ ಪರಿಶ್ರಮದೊಂದಿಗೆ ನಿರಂತರವಾಗಿ ತರಬೇತಿ ಪಡೆಯಬೇಕು. ತಾನು ಆರಿಸಿಕೊಂಡ ಕ್ಷೇತ್ರದ ಮೇಲೆ ಸಂಪೂರ್ಣ ನಂಬಿಕೆ ಇಟ್ಟು ಇದಕ್ಕೆ ಮೊದಲ ಆದ್ಯತೆ ನೀಡಬೇಕು. ಉಳಿದೆಲ್ಲವೂ ನಂತರದ್ದು ಎಂದು ಅವರು ನುಡಿದರು.

ತಂದೆ - ತಾಯಿಯ ಆರಂಭದ ದಿನಗಳ ಸಹಕಾರ, ಉತ್ತೇಜನ ತಮ್ಮ ಸಾಧನೆಗೆ ಅಡಿಪಾಯವಾಗಿದೆ. ಚಿಕ್ಕಂದಿನಿಂದಲೇ ಇವರಿಂದ ತಮಗೆ ಟೆನ್ನಿಸ್ ಬಗ್ಗೆ ಆಸಕ್ತಿ ಮೂಡಿತು. ಸ್ಪೀಡನ್‍ನ ಆಟಗಾರ ಸ್ಟೀಫನ್ ಎಡ್ಬರ್ಗ್ ತಮಗೆ ಮಾದರಿಯ ಆಟಗಾರರಾಗಿದ್ದರು ಎಂದು ಸ್ಮರಿಸಿದ ರೋಹನ್ 2010ರಲ್ಲಿ ಪಾಕಿಸ್ತಾನದ ಜೋಡಿ ಖುರೈಶಿ ಅವರೊಂದಿಗೆ ಯುಎಸ್ ಓಪನ್‍ನ ಫೈನಲ್ ತಲಪಿದ್ದರೂ ಅಲ್ಲಿ ನಿರಾಶೆಯಾಯಿತು. ಯುಎಸ್‍ನ ಬ್ರಯಾನ್ ಬ್ರದರ್ಸ್ ಜೋಡಿಯೊಂದಿಗೆ ತಾವು ಪರಾಭವಗೊಳ್ಳಬೇಕಾಯಿತು. ಇದೀಗ ಏಳು ವರ್ಷಗಳ ಅಂತರದ ಬಳಿಕ ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯ ಸಾಧನೆ ಮಾಡಿರುವದು ಸಂತಸ ತಂದಿದೆ.

(ಮೊದಲ ಪುಟದಿಂದ) ತಮ್ಮ ಜತೆಗಾರ್ತಿ ಕೆನಡಾದ ಗ್ಯಾಬ್ರಿಯಾಲಾ ದಬ್ರೋಸ್ಕಿ ಅವರೊಂದಿಗೆ ಇದು ಸಾಧ್ಯವಾಯಿತು. ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗಳಿಸಿದ ಕೆನಡಾದ ಪ್ರಥಮ ಮಹಿಳಾ ಆಟಗಾರ್ತಿಯಾಗಿಯೂ ಇವರು ಹೊರಹೊಮ್ಮಿದ್ದಾರೆ. ತಮ್ಮ 15 ವರ್ಷ ವೃತ್ತಿ ಜೀವನದಲ್ಲಿ ತಮಗೂ ಇದು ಚೊಚ್ಚಲ ಪ್ರಶಸ್ತಿಯಾಗಿದೆ ಎಂದರು.

ಟೆನ್ನಿಸ್‍ಗೆ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ

ಟೆನ್ನಿಸ್‍ಗೆ ದೇಶದಲ್ಲಿ ಪ್ರಸ್ತುತ ಸಿಗುತ್ತಿರುವ ಪ್ರೋತ್ಸಾಹ ಏನೇನೂ ಸಾಲದು. ಫೆಡರೇಷನ್‍ನಿಂದ ಅಗತ್ಯ ಸಹಕಾರದ ಅಗತ್ಯತೆ ಇದೆ. ಪ್ರಸ್ತುತ ಎಲ್ಲಾ ರೀತಿಯ ಖರ್ಚು ವೆಚ್ಚಗಳನ್ನು ತಾವೇ ಭರಿಸಬೇಕಾದ ಪರಿಸ್ಥಿತಿಯಿದೆ ಎಂದು ರೋಹನ್ ವ್ಯವಸ್ಥೆಯ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

ಯುಎಸ್ ಓಪನ್ ಮುಂದಿನ ಗುರಿ

ಗ್ರ್ಯಾಂಡ್‍ಸ್ಲಾಮ್ ಪ್ರಶಸ್ತಿ ಗಳಿಸಿದ ಬಳಿಕ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದ್ದು, ಸತತ ಅಭ್ಯಾಸ ನಡೆಸುತ್ತಿರುವದಾಗಿ ಹೇಳಿದ ರೋಹನ್ ಸೆಪ್ಟೆಂಬರ್ 3ನೇ ವಾರದಲ್ಲಿ ಯುಎಸ್ ಓಪನ್ ಟೂರ್ನಿ ನಡೆಯಲಿದ್ದು, ಇದು ತಮ್ಮ ಮುಂದಿನ ಗುರಿಯಾಗಿದೆ. ಇದರಲ್ಲಿ ತಾವು ಉರುಗ್ವೆಯ ಪ್ಯಾಬ್ಲೋ ಕ್ಯೂವಾಸ್ ಅವರೊಂದಿಗೆ ಆಡಲಿರುವದಾಗಿ ತಿಳಿಸಿದರು. ಇದರ ನಡುವೆ ವಾಷಿಂಗ್ಟನ್ ಎಟಿಪಿ ಟೂರ್ನ್‍ಮೆಂಟ್, ಭಾರತ ಹಾಗೂ ಕೆನಡಾ ನಡುವೆ ಡೇವಿಸ್ ಕಪ್ ಪಂದ್ಯಾವಳಿಯೂ ಎದುರಾಗಲಿದೆ. ಇದರಲ್ಲಿ ಸಾಧನೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವದಾಗಿ ಹೇಳಿದರು.