ಮಡಿಕೇರಿ, ಜು. 21: ಸಣ್ಣ ಹೊಳೆ., ಕಿರಿದಾದ ಸೇತುವೆ., ಸೇತುವೆ ಕೆಳಭಾಗದಲ್ಲೊಂದು ರಸ್ತೆ., ರಸ್ತೆ ಮೇಲೆ ನೀರು., ನಡೆಯುತ್ತಿದ್ದ ತಾಯಿ - ಮಗ ಇದ್ದಕ್ಕಿದ್ದಂತೆ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋದರು., ಸದ್ಯ ಮರದ ರೆಂಬೆಯೊಂದರ ಆಶ್ರಯದಿಂದ ಪಾರಾದರು., ಯುವಕರ ತಂಡದ ಕಾರ್ಯಕ್ಷಮತೆ, ಪ್ರಯತ್ನದಿಂದ ಬದುಕುಳಿದರು..!ಇದು ಯಾವದೋ ಸಿನಿಮಾದಲ್ಲಿ ಬರುವ ದೃಶ್ಯಾವಳಿಯಲ್ಲ ನೈಜ ಘಟನೆ, ಮಾದಾಪುರ ಬಳಿ ನಿನ್ನೆ ನಡೆದ ಸನ್ನಿವೇಶವಿದು. ಮಡಿಕೇರಿಯಿಂದ ವಕೀಲ ಪಿ.ಎಂ. ಸಚಿನ್, ಡಿ. ಹೆಚ್. ಲೋಕೇಶ್, ಡಿ.ಹೆಚ್. ಕಾರ್ತಿಕ್, ತಂಬುಕುತ್ತಿರ ವಿಠಲ, ತಂಬಕುತ್ತಿರ ಸತೀಶ್ ಅವರುಗಳು ಜೀಪಿನಲ್ಲಿ ಸೂರ್ಲಬ್ಬಿಗೆ ತೆರಳಿ ಅಲ್ಲಿಂದ ನಂದಿಮೊಟ್ಟೆ ಮಾರ್ಗವಾಗಿ ಸಾವಿನ ಮನೆಯೊಂದಕ್ಕೆ ತೆರಳುತ್ತಿದ್ದರು.

ನಂದಿಮೊಟ್ಟೆ ಧಾರಾಕಾರ ಮಳೆ ಸುರಿಯುತ್ತಿದ್ದುದರಿಂದ ನಂದಿಮೊಟ್ಟೆ ಬಳಿ ಇರುವ ಸೇತುವೆ ಮೇಲಿಂದ ರಸ್ತೆಯ ಮೇಲೆಲ್ಲ ನೀರು ಹರಿಯುತ್ತಿತ್ತು. ಇವರ ಜೀಪ್ ಸೇತುವೆ ಬಳಿ ತಲಪುತ್ತಿದ್ದಂತೆ ಇದ್ದಕ್ಕಿದ್ದಂತೆ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿತು. ಇದರಿಂದಾಗಿ ಜೀಪು ಅಲ್ಲಿಯೇ ಸ್ಥಗಿತಗೊಳ್ಳುವಂತಾಯಿತು.

ಕೊಚ್ಚಿ ಹೋದರು

ನೋಡ ನೋಡುತ್ತಿದ್ದಂತೆ ಸೇತುವೆ ಬಳಿಯೇ ಇರುವ ಪಾದಚಾರಿ ರಸ್ತೆ ಮೇಲೆ ನೀರು ಹರಿಯತೊಡಗಿತು. ಸೇತುವೆ

(ಮೊದಲ ಪುಟದಿಂದ) ಮೇಲಿಂದ ಬಂದ ಕಾರ್ಮಿಕ ಮಹಿಳೆ ಹಾಗೂ ಆತನ ಮಗ ಪಕ್ಕದ ಪಾದಚಾರಿ ರಸ್ತೆ ಮೂಲಕ ಸಾಗತೊಡಗಿದರು. ನೀರಿನ ಹರಿವು ಹೆಚ್ಚಾಗುತ್ತಿದ್ದುದರಿಂದ ಈ ಯುವಕರ ತಂಡ ರಸ್ತೆಯಲ್ಲಿ ಹೋಗದಂತೆ ಕೂಗಿ ಹೇಳಿದ್ದಾರೆ. ಆದರೆ, ಗಾಳಿ - ಮಳೆಗೆ ಅವರ ಮಾತು ಕೇಳಿಸದೆ ರಸ್ತೆಯಲ್ಲಿ ನಾಲ್ಕು ಹೆಜ್ಜೆಯಿಟ್ಟಿದ್ದೆ ತಡ ಒಮ್ಮೆಲೆ ನೀರು ಏರಿಕೆಯಾಗಿ ಇಬ್ಬರನ್ನು ಸೆಳೆದೊಯ್ದಿದೆ. ಕೆಳಭಾಗ ಇಳಿಜಾರು ಪ್ರದೇಶವಾದ್ದರಿಂದ ಅನತಿ ದೂರ ಇಬ್ಬರು ಕೊಚ್ಚಿ ಹೋಗಿದ್ದಾರೆ. ಇತ್ತ ನೀರಿನ ರಭಸ ಕೂಡ ಹೆಚ್ಚಾಗುತ್ತಿದ್ದುದರಿಂದ ಈ ಯುವಕರಿಗೂ ಏನೂ ಮಾಡಲು ತೋಚದೆ ಬೊಬ್ಬೆ ಹೊಡೆದಿದ್ದಾರೆ.

ಅದೃಷ್ಟ ಬದುಕಿಸಿತು

ಅದೃಷ್ಟವಶಾತ್ ಸ್ವಲ್ಪ ದೂರದಲ್ಲೇ ಮರದ ಕೊಂಬೆಯೊಂದು ಅಡ್ಡ ಸಿಕ್ಕಿದ್ದರಿಂದ ಅದರ ಸಹಾಯದಿಂದ ತಾಯಿ-ಮಗ ಸನಿಹದಲ್ಲೇ ಇದ್ದ ಮರದ ಬುಡವನ್ನೇರಿ ಕುಳಿತಿದ್ದಾರೆ. ಆದರೇ ಅಲ್ಲಿಂದ ಅತ್ತಿಂದಿತ್ತ ಕದಲಲೂ ಕೂಡ ಅವರಿಗೆ ಸಾಧ್ಯವಾಗುತ್ತಿಲ್ಲ. ಸುತ್ತಲೂ ನೀರು ರಭಸವಾಗಿ ಹರಿಯುತ್ತಿದೆ. ಏನು ಮಾಡುವದೆಂದು ತೋಚದ ಯುವಕರು ಪರದಾಡುತ್ತಿರುವಾಗಲೇ ಅದೇ ಮಾರ್ಗದಲ್ಲಿ ರಫೀಕ್ ಎಂಬ ಅಸ್ಸಾಮಿ ಕಾರ್ಮಿಕ ಹಾಗೂ ಇನ್ನಿಬ್ಬರು ಬಂದಿದ್ದಾರೆ. ಅವರೊಂದಿಗೆ ಹಿಂದಿ ಭಾಷೆಯಲ್ಲಿ ಮಾತನಾಡಿ, ವಿಚಾರ ತಿಳಿಸಿ ಹಗ್ಗ ತರಲು ಹೇಳಿದ್ದಾರೆ.

ಹಗ್ಗ ತಂದ ಬಳಿಕ ರಸ್ತೆಯಿಂದ ತಾಯಿ- ಮಗ ಇದ್ದಲ್ಲಿಗೆ ಹಗ್ಗ ಎಸೆದು ಇನ್ನೊಂದು ತುದಿಯನ್ನು ಮರಕ್ಕೆ ಕಟ್ಟಿ ಹಗ್ಗದ ಸಹಾಯದಿಂದ ಭೋರ್ಗರೆಯುತ್ತಿದ್ದ ನೀರಿನಲ್ಲೇ ತಾಯಿ - ಮಗನನ್ನು ದಡಕ್ಕೆ ಎಳೆ ತಂದು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಧ್ಯಾಹ್ನ 1 ಗಂಟೆಯಿಂದ ಮೂರುವರೆ ಗಂಟೆವರೆಗೆ ಸುಮಾರು ಎರಡೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ತಾಯಿ - ಮಗನನ್ನು ರಕ್ಷಿಸಿದ ಈ ಯುವಕರ ತಂಡ ಮಾದರಿಯಾಗಿದೆ.

ರಕ್ಷಿಸಿದ ಕೆಲವೇ ಕ್ಷಣದಲ್ಲಿ ತಾಯಿ - ಮಗ ಕುಳಿತಿದ್ದ ಜಾಗ ಕೂಡ ನೀರಿನಲ್ಲಿ ಕೊಚ್ಚಿ ಹೋಗಿದೆ. ಒಂದು ವೇಳೆ ರಸ್ತೆಗೆ ಅಡ್ಡಲಾಗಿ ಮರ ಬೀಳದೆ ಹೋಗದಿದ್ದರೆ ಈ ಯುವಕರು ಅಲ್ಲಿಂದ ಮುಂದೆ ಸಾಗಿ ಬಿಡುತ್ತಿದ್ದರು. ತಾಯಿ - ಮಗ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರು. ಭಗವಂತ ಮರದ ರೂಪದಲ್ಲಿ ಬಂದು ಯುವಕರ ಮೂಲಕ ಅಮ್ಮ - ಮಗನನ್ನು ಕಾಪಾಡಿರಬಹುದೇನೋ..!?

ಸೂರ್ಲಬ್ಬಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಿಂದಾಗಿ ನಂದಿಮೊಟ್ಟೆ ಬಳಿ ಸೇತುವೆ ಸನಿಹದ ಕಾಫಿ ತೋಟಗಳು ಕೂಡ ಮುಳುಗಡೆಯಾಗಿದ್ದವು.

- ಕುಡೆಕಲ್ ಸಂತೋಷ್