ಸೋಮವಾರಪೇಟೆ, ಜು. 20: ತಾಲೂಕು ಒಕ್ಕಲಿಗ ಯುವ ವೇದಿಕೆ ವತಿಯಿಂದ ತಾಲೂಕಿನ ಒಕ್ಕಲಿಗ ಜನಾಂಗ ಬಾಂಧವರಿಗೆ ತಾ. 29 ರಂದು ಸಮೀಪದ ಗೌಡಳ್ಳಿ ಗ್ರಾಮದಲ್ಲಿ 4ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ಬಿ.ಜೆ. ದೀಪಕ್ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕಲಿಗ ಜನಾಂಗ ಬಾಂಧವರಲ್ಲಿ ಪರಸ್ಪರ ಸಾಮರಸ್ಯ, ಕ್ರೀಡಾ ಮನೋಭಾವನೆ ಮೂಡಿಸುವದರೊಂದಿಗೆ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ದೃಷ್ಟಿಯಿಂದ 4ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸ ಲಾಗಿದೆ ಎಂದರು.

ಸುಳಿಮಳ್ತೆ ಗ್ರಾಮದ ದಿ. ಎಸ್.ಪಿ. ಪುಟ್ಟಸ್ವಾಮಿ ಮತ್ತು ಪಾರ್ವತಮ್ಮ ಸ್ಮರಣಾರ್ಥ ಗೌಡಳ್ಳಿ ಗ್ರಾಮದಲ್ಲಿರುವ ಗದ್ದೆಯಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ. ಒಕ್ಕಲಿಗ ಜನಾಂಗದ ಪುರುಷರಿಗೆ ವಾಲಿಬಾಲ್, ಹಗ್ಗಜಗ್ಗಾಟ, ಕೆಸರುಗದ್ದೆ ಓಟ, ಮಹಿಳೆಯರಿಗೆ ಥ್ರೋಬಾಲ್, ಹಗ್ಗಜಗ್ಗಾಟ, ಕೆಸರುಗದ್ದೆ ಓಟದೊಂದಿಗೆ ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರಿಗೂ ಇತರ ಮನೋರಂಜನಾ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದು ದೀಪಕ್ ಮಾಹಿತಿ ನೀಡಿದರು.

ಕ್ರೀಡಾಕೂಟದಲ್ಲಿ ಭಾಗವಹಿಸು ವವರು ತಾ. 27 ರೊಳಗೆ ಮೊ: 9448401922, 9448218525, 9480400707 ಸಂಖ್ಯೆಗಳನ್ನು ಸಂಪರ್ಕಿಸಿ ಹೆಸರು ನೋಂದಾವಣೆ ಮಾಡಿಕೊಳ್ಳಬಹುದು. ಕ್ರೀಡಾಕೂಟ ದಲ್ಲಿ ವಿಜೇತರಾದವರಿಗೆ ಆಕರ್ಷಕ ನಗದು ಹಾಗೂ ಟ್ರೋಫಿ ನೀಡಲಾಗುವದು ಎಂದರು.

ಕ್ರೀಡಾಕೂಟದ ಉದ್ಘಾಟನೆ ಅಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿದ್ದು, ಉದ್ಯಮಿ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ, ಅರುಣ್ ಕೊತ್ನಳ್ಳಿ, ಗಿರೀಶ್ ಮಲ್ಲಪ್ಪ ಅವರುಗಳು ಭಾಗವಹಿಸಲಿದ್ದಾರೆ.

ಕ್ರೀಡಾಕೂಟದಲ್ಲಿ ಒಕ್ಕಲಿಗ ಜನಾಂಗ ಬಾಂಧವರು ಪಾಲ್ಗೊಳ್ಳಬಹುದಾಗಿದೆ ಎಂದರು.

ಗೋಷ್ಠಿಯಲ್ಲಿ ಒಕ್ಕಲಿಗ ಯುವ ವೇದಿಕೆಯ ಉಪಾಧ್ಯಕ್ಷ ನತೀಶ್ ಮಂದಣ್ಣ, ಕಾರ್ಯದರ್ಶಿ ದಯಾನಂದ್, ಸಂಘಟನಾ ಕಾರ್ಯದರ್ಶಿ ಪ್ರಸ್ಸಿ, ನಿರ್ದೇಶಕರು ಗಳಾದ ಕಿಶೋರ್, ಅಶೋಕ್, ಪೃಥ್ವಿ ಅವರುಗಳು ಭಾಗವಹಿಸಿದ್ದರು.