ಮಡಿಕೇರಿ, ಜು. 21: ಕೊಡಗು ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಉಂಟಾಗಿದ್ದ ಅತಿವೃಷ್ಟಿಯ ಆತಂಕ ಮರೆಯಾದಂತಾಗಿದೆ. ಆರಂಭದ ಎರಡು ದಿನಗಳು ಅಬ್ಬರಿಸಿದ್ದ ಪುಷ್ಯ ಮಳೆ ತನ್ನ ಪ್ರತಾಪವನ್ನು ಕಡಿಮೆ ಮಾಡಿದ್ದು, ಸಹಜತೆಯ ವಾತಾವರಣ ಕಂಡು ಬರುತ್ತಿದೆ. ತಾ. 17ರಿಂದ 19ರವರೆಗೆ ಬಹುತೇಕ ಇಡೀ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿತ್ತು. ನಿನ್ನೆ ಅಪರಾಹ್ನದಿಂದ ಮಳೆ ಇಳಿಮುಖಗೊಂಡಿದ್ದು, ಅಲ್ಲಲ್ಲಿ ಸಾಧಾರಣ ರೀತಿಯಲ್ಲಿ ಮಳೆಯಾಗುತ್ತಿದೆ. ಭಾಗಮಂಡಲ ಸೇರಿದಂತೆ ಹಲವೆಡೆ ರಸ್ತೆಯಲ್ಲಿ ನಿಂತಿದ್ದ ನೀರು ಕಡಿಮೆಯಾಗಿದ್ದು, ಇಂದು ಎಲ್ಲ್ಲ ಸಂಪರ್ಕಕ್ಕೆ ಅಡಚಣೆಯಾಗಿರುವ ಕುರಿತು ವರದಿಯಾಗಿಲ್ಲ. ಮಳೆ ಕಡಿಮೆಯಾಗಿದ್ದರೂ ಜಲಾವೃತಗೊಂಡಿದ್ದ ಹಲವು ಪ್ರದೇಶಗಳಲ್ಲಿ ನೀರಿನ ಪ್ರಮಾಣ ಹಾಗೇ ಇದ್ದು ನಿಧಾನಗತಿಯಲ್ಲಿ ಇಳಿಮುಖಗೊಳ್ಳುತ್ತಿದೆ.

ಜಿಲ್ಲೆಯ ಮಳೆ ವಿವರ

ಕೊಡಗು ಜಿಲ್ಲೆಯ ಇಂದಿನ ಸರಾಸರಿ ಮಳೆ 0.76 ಇಂಚು, ಕಳೆದ ವರ್ಷ ಇದೇ ದಿನ 0.63 ಇಂಚು, ಜನವರಿಯಿಂದ ಇಲ್ಲಿಯವರೆಗಿನ ಮಳೆ 44.69 ಇಂಚು, ಕಳೆದ ವರ್ಷ ಇದೇ ಅವಧಿಯಲ್ಲಿ 42.68 ಇಂಚು ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 0.82 ಇಂಚು, ಕಳೆದ ವರ್ಷ ಇದೇ ದಿನ 63.59 ಇಂಚು, ಜನವರಿಯಿಂದ ಇಲ್ಲಿಯವರೆಗಿನ ಮಳೆ 39.40 ಇಂಚು, ಕಳೆದ ವರ್ಷ ಇದೇ ಅವಧಿಯಲ್ಲಿ 31.49 ಇಂಚು ಮಳೆಯಾಗಿತ್ತು.

ವೀರಾಜಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 0.87 ಇಂಚು, ಕಳೆದ ವರ್ಷ ಇದೇ ದಿನ 0.46 ಇಂಚು, ಜನವರಿಯಿಂದ ಇಲ್ಲಿಯವರೆಗಿನ ಮಳೆ 39.40 ಇಂಚು, ಕಳೆದ ವರ್ಷ ಇದೇ ಅವಧಿಯಲ್ಲಿ 31.49 ಇಂಚು ಮಳೆಯಾಗಿತ್ತು.

ಸೋಮವಾರಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 0.66 ಇಂಚು, ಕಳೆದ ವರ್ಷ ಇದೇ ದಿನ 0.46 ಇಂಚು, ಜನವರಿಯಿಂದ ಇಲ್ಲಿಯವರೆಗಿನ ಮಳೆ 33.74 ಇಂಚು, ಕಳೆದ ವರ್ಷ ಇದೇ ಅವಧಿಯಲ್ಲಿ 32.97 ಇಂಚು ಮಳೆಯಾಗಿತ್ತು.

ಹಾರಂಗಿ ಜಲಾಶಯದ ನೀರಿನ ಮಟ್ಟ

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2852.89 ಅಡಿಗಳು, ಕಳೆದ ವರ್ಷ ಇದೇ ದಿನ 2857.99 ಅಡಿ ಇತ್ತು. ಹಾರಂಗಿಯಲ್ಲಿ ಬಿದ್ದ ಮಳೆ 0.04 ಇಂಚು, ಕಳೆದ ವರ್ಷ ಇದೇ ದಿನ 0.29 ಇಂಚು ಮಳೆಯಾಗಿತ್ತು. ಇಂದಿನ ನೀರಿನ ಒಳ ಹರಿವು 8137 ಕ್ಯೂಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 3542 ಕ್ಯೂಸೆಕ್ ಇತ್ತು.

ವೀರಾಜಪೇಟೆ : ವೀರಾಜಪೇಟೆ ಬಳಿಯ ಆರ್ಜಿ ಗ್ರಾಮದ ಹೆದ್ದಾರಿ ಬದಿಯ ಕೃಷಿ ಭೂಮಿಯಲ್ಲಿ ವಿದ್ಯಾ ಸಂಸ್ಥೆ, ವಾಣಿಜ್ಯ ಕಟ್ಟಡಗಳ ನಿರ್ಮಾಣದಿಂದ ಭಾರಿ ಮಳೆಯಲ್ಲಿ ಕೃಷಿ ಭೂಮಿಯಿಂದ ತೋಡಿಗೆ ನೀರು ಹರಿಯದೆ ಅಡಚಣೆ ಉಂಟಾಗುತ್ತಿದೆ. ಇದರಿಂದಾಗಿ ಬುಧವಾರ ದಿನ ರಾತ್ರಿ ಬಿದ್ದ ಭಾರೀ ಮಳೆಗೆ ಆರ್ಜಿ ಗ್ರಾಮದ ಹೆದ್ದಾರಿ ರಸ್ತೆಯಲ್ಲಿ ರಸ್ತೆ ಮೇಲೆ ನೀರು ಹರಿದು ಕೆಲವು ಗಂಟೆಗಳ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತ ಉಂಟಾಯಿತು.

ವೀರಾಜಪೇಟೆ : ವೀರಾಜಪೇಟೆ ವಿಭಾಗಕ್ಕೆ ನಿನ್ನೆ ಬೆಳಗಿನಿಂದ ಇಂದು ಬೆಳಗಿನ ತನಕ 6.2ಮಿ.ಮೀ ಮಳೆ ಸುರಿದಿದೆ. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಪೆರುಂಬಾಡಿಯಲ್ಲಿ ಆರ.ಸಿ.ಸಿ. ಮನೆಯ ಒತ್ತಾಗಿದ್ದ ಬರೆ ಕುಸಿದಿದೆ. ಕೆದಮುಳ್ಳೂರು. ಕಡಂಗ, ಕದನೂರು, ಹೆಗ್ಗಳ, ಆರ್ಜಿ, ಪಾಲಂಗಾಲ,ಬಿಟ್ಟಂಗಾಲ ಸೇರಿದಂತೆ ಗದ್ದೆಗಳಲ್ಲಿ ಜಲಾವೃತವಾಗಿದ್ದು ನೀರಿನ ಮಟ್ಟ ಇಳಿಯುವವರೆಗೂ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗುವಂತಿಲ್ಲ. ಭಾರೀ ಮಳೆಯಿಂದ ಜಖಂಗೊಂಡ ಸ್ಥಳಕ್ಕೆ ಇಂದು ತಾಲೂಕು ಕಚೇರಿಯ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಂಚಾರಕ್ಕೆ ಅಡಚಣೆ

ಕರಿಕೆ

ಇಲ್ಲಿಗೆ ಸಮೀಪದ ಚೆತ್ತುಕಾಯ ಬಳಿ ಭಾಗಮಂಡಲ ಮುಖ್ಯರಸ್ತೆಗೆ ಬೃಹತ್ ಗಾತ್ರದ ಮರವೊಂದು ಉರುಳಿಬಿದ್ದು, ಕೆಲವು ಗಂಟೆಗಳ ಕಾಲ ಅಂತರ್ರಾಜ್ಯ ಹೆದ್ದಾರಿ ಬಂದ್ ಆಗಿತ್ತು. ಗ್ರಾಮಸ್ಥರು ಮರ ತೆರವುಗೊಳಿಸಿದ ಬಳಿಕ ವಾಹನ ಸಂಚಾರ ಆರಂಭವಾಯಿತು.

ಭಾಗಮಂಡಲ

ಇಲ್ಲಿಗೆ ಸಮೀಪದ ತಾವೂರು ಗ್ರಾಮದ ಬಾರಿಕೆ ದೇವಯ್ಯ ಅವರ ಮನೆ ಸಮೀಪ ನಿರ್ಮಾಣ ಮಾಡಿದ್ದ ತಡೆಗೋಡೆ ಕುಸಿದು ಮನೆಗೆ ಹಾನಿಯಾಗಿದೆ.

ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ.

ನಾಪೋಕ್ಲು, ಗೋಣಿಕೊಪ್ಪಲು, ಶ್ರೀಮಂಗಲ, ಬಿರುನಾಣಿ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಕಳೆದೆರಡು ದಿನಗಳಲ್ಲಿ ಸುರಿದ ಮಳೆಯ ಪ್ರಮಾಣ ಕಡಿಮೆಯಾಗಿದೆ.

ಸೋಮವಾರಪೇಟೆ, ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ತುಂತುರು ಮಳೆಯಾಗಿದ್ದು, ಕಾವೇರಿ ನದಿಯಲ್ಲಿ ನೀರಿನ ಹರಿವು ಏರಿಕೆ ಕಂಡುಬಂದಿದೆ.

ಕೊಡಗು ಕೇರಳ ರಾಜ್ಯವನ್ನು ಸಂಪರ್ಕಿಸುವ ಪೆರುಂಬಾಡಿಯಲ್ಲಿ ಕೆರೆಯಿಂದ ರಸ್ತೆ ಪೂರ್ಣವಾಗಿ ಕುಸಿದಿರುವ ಸ್ಥಳಕ್ಕೆ ಇಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಗಡಿ ಭಾಗದ ನಿವಾಸಿಗಳಿಗೆ ತಾತ್ಕಾಲಿಕವಾಗಿ ವ್ಯವಸ್ಥೆ ಕಲ್ಪಿಸುವದರೊಂದಿಗೆ ಈ ರಸ್ತೆಯನ್ನು ದುರಸ್ತಿಪಡಿಸಿ ಶಾಶ್ವತ ಪರಿಹಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುವದು, ಈಗಾಗಲೇ ಉಸ್ತುವಾರಿ ಸಚಿವ ಸೀತಾರಾಂ ಅವರಿಗೂ ತಿಳಿಸಲಾಗಿದೆ ಎಂದರು.

ಮಾಧ್ಯಮದವರೊಂದಿಗೆ ಮಾತನಾಡಿದ ವೀಣಾ ಅಚ್ಚಯ್ಯ ಪೆರುಂಬಾಡಿ ರಸ್ತೆ ಕುಸಿದಿರುವದರಿಂದ ಕೊಡಗು ಕೇರಳದ ನೇರ ಸಂಪರ್ಕ ಕಡಿದು ಹೋಗಿದೆ. ಈ ರಸ್ತೆ ಕುಸಿತವನ್ನು ವೈಜ್ಞಾನಿಕವಾಗಿ ತಜ್ಞ ತಾಂತ್ರಿಕ ಸಲಹೆಗಾರರಿಂದ ಕಾಮಗಾರಿ ಕೈಗೊಳ್ಳಬೇಕಾಗಿದೆ. ಲೋಕೋಪಯೋಗಿ ಇಲಾಖೆಯೊಂದಿಗೆ ಉಸ್ತುವಾರಿ ಸಚಿವರು ಸಮಾಲೋಚನೆ ನಡೆಸಿ ಅಂತರರಾಜ್ಯ ರಸ್ತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವದು. ಕೆರೆಯ ನೀರಿನ ಒತ್ತಡದಿಂದ ದಿನದಿಂದ ದಿನಕ್ಕೆ ರಸ್ತೆ ಕುಸಿತ ಅಗ¯ವಾಗುತ್ತಿದ್ದು ರಸ್ತೆಯ ಎರಡು ಬದಿಗಳಲ್ಲಿ ಮಣ್ಣು ಕುಸಿಯುತ್ತಿದೆ. ಈ ರಸ್ತೆಯಲ್ಲಿ ಲಘು ವಾಹನಗಳು ಸಂಚರಿಸಲು ಇಲಾಖೆ ತಾತ್ಕಾಲಿಕ ವ್ಯವಸ್ಥೆ ಮಾಡಲಿದೆ ಎಂದು ಹೇಳಿದರು.

ಈ ಸಂದರ್ಭ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ಮಾತನಾಡಿ, ಲಘು ವಾಹನ ಸಂಚಾರದ ತಾತ್ಕಾಲಿಕ ವ್ಯವಸ್ಥೆಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗಿದೆ. ಸದ್ಯದಲ್ಲಿಯೇ ಅಧಿಕಾರಿಗಳು ವ್ಯವಸ್ಥೆ ಮಾಡುವದಾಗಿ ತಿಳಿಸಿದ್ದು ಈ ಸಂಬಂಧ ಉಸ್ತುವಾರಿ ಸಚಿವರನ್ನು ಸಂಪರ್ಕಿಸಲಾಗಿದೆ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ, ಡಿ.ಸಿ.ಧ್ರುವ, ಜಿ.ಜಿ.ಮೋಹನ್, ಎಂ.ಎಂ. ಶಶಿಧರನ್, ಪಿ.ಎ. ಹನೀಪ್, ಎಂ.ದಿಲ್ಲು, ಆರ್.ಎಂ.ಸಿ. ಸದಸ್ಯ ಮಾಳೇಟಿರ ಬೋಪಣ್ಣ, ದಿನೇಶ್ ಮತ್ತಿತರ ಕಾರ್ಯಕರ್ತರು ಹಾಜರಿದ್ದರು.

ಸಿದ್ದಾಪುರ: ಮಳೆ ಗಾಳಿಗೆ ಗುಹ್ಯ ಗ್ರಾಮದ ನರೇಂದ್ರ ನಾಯ್ಡು ಎಂಬವರಿಗೆ ಸೇರಿದ ತೋಟದ ಮನೆಯ ಮೇಲೆ ಸಮೀಪದ ತೋಟದ ಬೃಹದಾಕಾರದ ಮರವೊಂದು ಬಿದ್ದು ಅಪಾರ ಹಾನಿ ಉಂಟಾಗಿದೆ.

-ಡಿ.ಎಂ.ಆರ್., ವಾಸು, ಸುನಿಲ್, ದಿನೇಶ್, ಹರೀಶ್ ಮಾದಪ್ಪ, ನಾಗರಾಜಶೆಟ್ಟಿ, ವಿಜಯ್, ಸುಧೀರ್, ಸಿಂಚು.