ಸೋಮವಾರಪೇಟೆ, ಜು. 20: ಗ್ರಾಮೀಣ ಪ್ರದೇಶಕ್ಕೆ ಸ್ಥಿರ ದೂರವಾಣಿ ಸೇವೆಯನ್ನು ನೀಡಲು ನಿರಾಕರಿಸಿದ ದೂರಸಂಪರ್ಕ ಇಲಾಖೆಗೆ ಜಿಲ್ಲಾ ಗ್ರಾಹಕರ ವೇದಿಕೆ ದಂಡ ವಿಧಿಸಿ ತೀರ್ಪು ನೀಡಿದೆ.
ಶಾಂತಳ್ಳಿ ಹೋಬಳಿಯ ಕುಂದಳ್ಳಿ ಗ್ರಾಮದ ನಿವಾಸಿ ಕೆ.ಟಿ. ನಂದೀಶ ಎಂಬವರು ಸ್ಥಿರ ದೂರವಾಣಿ ಮರುಸಂಪರ್ಕ ನೀಡಲು ನಿರಾಕರಿಸಿದ ಇಲಾಖೆ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ನ್ಯಾಯ ಕೋರಿ ಅರ್ಜಿ ಸಲ್ಲಿಸಿದ್ದರು.
ನಂದೀಶ್ ಅವರು 1985ರಲ್ಲಿ ಟೆಲಿಕಾಂ ಇಲಾಖೆಯಿಂದ ಸ್ಥಿರದೂರವಾಣಿ ಸಂಪರ್ಕ ಪಡೆದುಕೊಂಡಿದ್ದರು. 2014ರಲ್ಲಿ ಲೋಕೋಪಯೋಗಿ ಇಲಾಖೆ ಯವರು ರಸ್ತೆ ಅಗಲೀಕರಣ ಕಾಮಗಾರಿ ನಡೆಸಿದ ಸಂದರ್ಭ ಕೇಬಲ್‍ಗಳು ಜಖಂಗೊಂಡಿದ್ದರಿಂದ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ರಸ್ತೆ ಕಾಮಗಾರಿ ಮುಗಿದ ನಂತರ ತಮಗೆ ಮರುಸಂಪರ್ಕ ಕಲ್ಪಿಸುವಂತೆ ಕೋರಿ ನಂದೀಶ್ ದೂರಸಂಪರ್ಕ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ತಿರಸ್ಕರಿಸಿದ ಇಲಾಖೆಯ ಅಧಿಕಾರಿಗಳು ಮರು ಸಂಪರ್ಕ ನೀಡಲು ಹೆಚ್ಚಿನ ವೆಚ್ಚವಾಗುತ್ತದೆ, ಅಲ್ಲದೇ ಇಡೀ ಊರಿನವರಿಗೆಲ್ಲಾ ದೂರವಾಣಿ ಸಂಪರ್ಕ ಕಡಿತಗೊಳಿಸಲಾಗಿದ್ದು, ಫಿರ್ಯಾದುದಾರರೊಬ್ಬರಿಗೆ ಮಾತ್ರ ಮರುಸಂಪರ್ಕ ನೀಡಲು ಸಾಧ್ಯವಾಗುವದಿಲ್ಲ ಎಂದು ಸಮಜಾಯಿಷಿಕೆ ನೀಡಿ ಸಂಪರ್ಕ ಕಲ್ಪಿಸಲು ನಿರಾಕರಿಸಿತ್ತು.
ಈ ಹಿನ್ನೆಲೆ ನಂದೀಶರವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಮೊರೆ ಹೋಗಿದ್ದರು. ಅಲ್ಲದೇ ತಾವೇ ಖುದ್ದಾಗಿ ವಾದ ಮಂಡಿಸಿದ್ದರು.
ವೇದಿಕೆಯ ಅಧ್ಯಕ್ಷ ವಿ.ಎ. ಪಾಟೀಲ ಹಾಗೂ ಸದಸ್ಯರುಗಳಾದ ಕೆ.ಡಿ.ಪಾರ್ವತಿ, ಎಂ.ಎಸ್. ಲತಾ ಅವರುಗಳು ಫಿರ್ಯಾದುದಾರರಾದ ನಂದೀಶ್ ಅವರ ವಾದವನ್ನು ಕೂಲಂಕಷವಾಗಿ ಆಲಿಸಿ, ದೂರಸಂಪರ್ಕ ಇಲಾಖೆಯು ಜನಪರ ಆಡಳಿತ ಇಲಾಖೆ ಯಾಗಿರುವದರಿಂದ ಗ್ರಾಹಕರಿಗೆ ಸೇವೆ ಒದಗಿಸುವದು ಆದ್ಯ ಕರ್ತವ್ಯವಾಗಿದೆ.
ಅಲ್ಲದೇ ಲೋಕೋಪಯೋಗಿ ಇಲಾಖೆ ಮಾಡಿದ ತಪ್ಪಿಗೆ ಗ್ರಾಹಕರ ಮೇಲೆ ಬರೆ ಎಳೆಯುವದು ಸರಿಯಲ್ಲ ಎಂದು ನಿರ್ಧರಿಸಿದೆ.
ಮರುಸಂಪರ್ಕ ನೀಡಲು ನಿರಾಕರಿಸಿದ ಜಿಲ್ಲಾ ದೂರಸಂಪರ್ಕ ಇಲಾಖೆಯು ರೂ. 3 ಸಾವಿರ ಪರಿಹಾರವಾಗಿಯೂ ಹಾಗೂ ರೂ. 2 ಸಾವಿರ ವ್ಯಾಜ್ಯದ ಖರ್ಚನ್ನು ಫಿರ್ಯಾದುದಾರರಿಗೆ ನೀಡಬೇಕು. ಅಲ್ಲದೇ ಗ್ರಾಹಕರಿಗೆ ಸ್ಥಿರ ದೂರವಾಣಿ ಮರುಸಂಪರ್ಕ ನೀಡುವಂತೆ ಆದೇಶಿಸಿ ತೀರ್ಪು ನೀಡಿದ್ದಾರೆ.
ಸದ್ರಿ ಆದೇಶವನ್ನು ಉಲ್ಲಂಘಿಸಿದರೆ ಗ್ರಾಹಕ ಸಂರಕ್ಷಣಾ ಕಾಯ್ದೆ ಕಲಂ 27ರ ಅನ್ವಯ ಜೈಲು ಶಿಕ್ಷೆಗೆ ಒಳಪಡಿಸಲಾಗುವದು ಎಂದು ಆದೇಶದಲ್ಲಿ ಎಚ್ಚರಿಸಿದೆ.