ಮಡಿಕೇರಿ, ಜು. 20: ಬೇಟೋಳಿ ಗ್ರಾ.ಪಂ. ಕಟ್ಟಡವೊಂದರಲ್ಲಿ ನಿಯಮ ಬಾಹಿರವಾಗಿ ಮದ್ಯ ಮಾರಾಟ ನಡೆಸುತ್ತಿದ್ದ ಪ್ರಕರಣವೊಂದರ ಸಂಬಂಧ, ವಿವಿಧ ಇಲಾಖೆಗಳ ಅಧಿಕಾರಿಗಳ ಸಹಿತ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದಾರೆ. ಆ ಮೇರೆಗೆ ನ್ಯಾಯಾಲಯವು ಆಗಸ್ಟ್ 2 ರಂದು ಆರೋಪ ಪಟ್ಟಿಯಲ್ಲಿರುವ 11 ಮಂದಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಇಂದು ನೋಟೀಸ್ ಜಾರಿಗೊಳಿಸಿದೆ.

ಮೇಲಿನ ಪ್ರಕರಣ ಸಂಬಂಧ, 2007ನೇ ಇಸವಿಯಿಂದ ಬೇಟೋಳಿ ಗ್ರಾ.ಪಂ. ಕಟ್ಟಡದಲ್ಲಿ ನಿಯಮ ಬಾಹಿರ ಮದ್ಯ ಮಾರಾಟ ಕುರಿತು ತಾ. 11.5.2012 ರಂದು ವೀರಾಜಪೇಟೆ ಆರ್ಜಿ ಗ್ರಾಮದ ವಿ.ಟಿ. ಮದನ್ ಎಂಬವರು ಜಿಲ್ಲಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ನ್ಯಾಯಾಲಯವು ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶಿಸಿತ್ತು.

ನ್ಯಾಯಾಲಯದ ನಿರ್ದೇಶನದಲ್ಲಿ ಲೋಕಾಯುಕ್ತ ಪೊಲೀಸರು ಮೇಲಿನ ಪ್ರಕರಣ

(ಮೊದಲ ಪುಟದಿಂದ) ಸಂಬಂಧ ತನಿಖೆ ನಡೆಸಿ, ಬೇಟೋಳಿ ಗ್ರಾ.ಪಂ.ನಲ್ಲಿ ಆ ದಿನಗಳಲ್ಲಿ ಆಡಳಿತಾಧಿಕಾರಿಯಾಗಿದ್ದ ಪಶು ವೈದ್ಯರಾದ ಕೆ.ಪಿ. ಅಯ್ಯಪ್ಪ, ಗ್ರಾ.ಪಂ. ಪಿಡಿಓ ಆಗಿದ್ದ ಕೆ.ಸಿ. ಅಪ್ಪಣ್ಣ, ಅಬಕಾರಿ ನಿರೀಕ್ಷಕ ಸಿ. ಲಕ್ಷ್ಮೀಶ್, ಅಬಕಾರಿ ಉಪ ಆಯುಕ್ತರುಗಳಾದ ಸಿ.ಎಲ್. ಜಯರಾಂ ಹಾಗೂ ಹೆಚ್.ಎಲ್. ಆನಂದ್, ಅರಣ್ಯ ಇಲಾಖೆ ಅಧಿಕಾರಿಗಳಾದ ನರಸಿಂಹ ಶೆಟ್ಟಿ, ಚಂದ್ರಶೇಖರಯ್ಯ, ಮೋಟಪ್ಪ, ಹಿಂದಿನ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಚಂದ್ರೇಗೌಡ ಸೇರಿದಂತೆ ರಾಜಕೀಯ ಮುಖಂಡ ಎಂ.ಪಿ. ಸುಜಾ ಕುಶಾಲಪ್ಪ ಮತ್ತು ಪಿ.ಬಿ. ಚಂಗಪ್ಪ ಎಂಬವರ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದೆ.

ಈ ಪ್ರಕರಣದಲ್ಲಿ ಸುಜಾ ಕುಶಾಲಪ್ಪ, ಬೇಟೋಳಿ ಗ್ರಾ.ಪಂ. ಕಟ್ಟಡವನ್ನು ಬಾಡಿಗೆಗೆ ಹೊಂದಿಕೊಂಡು, ಪಿ.ಬಿ. ಚಂಗಪ್ಪ ಎಂಬವರಿಗೆ ಒಡಂಬಡಿಕೆಯಲ್ಲಿ ಮದ್ಯ ಮಾರಾಟಕ್ಕೆ ನೀಡಿರುವದಾಗಿ ಆರೋಪಿಸಲಾಗಿದೆ.

ಸಂಬಂಧಿಸಿದ ಕಟ್ಟಡದಿಂದ ಅನತಿ ದೂರದಲ್ಲಿ ಶಿಕ್ಷಣ ಸಂಸ್ಥೆ, ಪ್ರಾರ್ಥನಾ ಮಂದಿರ, ಅರಣ್ಯ ವಸತಿ ಗೃಹಗಳ ಸಹಿತ ಈ ಪ್ರದೇಶ ಮಾಕುಟ್ಟ ಅರಣ್ಯ ವನ್ಯಧಾಮ ವ್ಯಾಪ್ತಿಯಲ್ಲಿ ಇರುವದರಿಂದ, ಅಲ್ಲಿ ಮದ್ಯ ಮಾರಾಟ ಕಾನೂನು ಬಾಹಿರವೆಂದು ಉಲ್ಲೇಖಿಸಲಾಗಿದೆ. ಇದರೊಂದಿಗೆ ಮೇಲ್ಕಾಣಿಸಿದ ಅಧಿಕಾರಿಗಳು ಕರ್ತವ್ಯದಲ್ಲಿ ದುರುಪಯೋಗ ದೊಂದಿಗೆ ಅಕ್ರಮಕ್ಕೆ ಅವಕಾಶ ಕಲ್ಪಿಸಿ, ಆಮಿಷಕ್ಕೆ ಒಳಗಾಗಿರುವದಾಗಿ ಗುರುತರ ಆರೋಪ ಎದುರಿಸುವಂತಾಗಿದೆ.

ಲೋಕಾಯುಕ್ತ ತನಿಖಾ ವರದಿಯಲ್ಲಿ ಉಲ್ಲೇಖಿಸಿರುವಂತೆ ಅಪರಾಧ ಸಂಖ್ಯೆ 13(1) ಅನ್ವಯ ಅಧಿಕಾರಿಗಳಿಂದ ಹೊಣೆಗಾರಿಕೆ ಲೋಪ, ಸಂಖ್ಯೆ 27ರ ಪ್ರಕಾರ ವನ್ಯಜೀವಿ ಅರಣ್ಯ ಕಾಯ್ದೆ ಉಲ್ಲಂಘನೆ ನಿಯಮ 32ರ ಪ್ರಕಾರ ಪರಿಸರ ಮಾಲಿನ್ಯ ಇತ್ಯಾದಿ ದೂಷಣೆಗೆ ಒಳಗಾಗಿದ್ದಾರೆ.

ಈ ಪ್ರಕರಣ ಸಂಬಂಧ ಸುದೀರ್ಘ ತನಿಖೆ ನಡೆಸಿರುವ ಲೋಕಾಯುಕ್ತ ಪೊಲೀಸರು 12.6.2017ರಂದು ವೀರಾಜಪೇಟೆಯ ಜಿಲ್ಲಾ ಹೆಚ್ಚುವರಿ ನ್ಯಾಯಾಲಯಕ್ಕೆ 478 ಪುಟಗಳ ಅಂತಿಮ ವರದಿ ಸಲ್ಲಿಸಿದ್ದಾರೆ. ದೋಷಾರೋಪ ಎದುರಿಸುತ್ತಿರುವ ಹೆಚ್ಚಿನ ಅಧಿಕಾರಿಗಳು ಈಗಾಗಲೇ ನಿವೃತ್ತ್ತಿಗೊಂಡಿದ್ದು, ಕೆಲವರಷ್ಟೇ ಕರ್ತವ್ಯದಲ್ಲಿರುವದಾಗಿ ತಿಳಿದುಬಂದಿದೆ.