ಮಡಿಕೇರಿ, ಜು. 20: ಕಳೆದ ರಾತ್ರಿಯಿಡೀ ವರುಣನ ಆರ್ಭಟ ದೊಂದಿಗೆ ವಾಯುವಿನ ನರ್ತನ ದಿಂದ ಜಿಲ್ಲೆಯಾದ್ಯಂತ 60ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕಚ್ಚಿದ್ದು, ಅಲ್ಲಲ್ಲಿ ಮರ ಬಿದ್ದು ಹಲವೆಡೆ ಮನೆಗಳಿಗೆ ಹಾನಿಯಾದ ಕುರಿತು ಮಾಹಿತಿ ಲಭಿಸಿದೆ.ಜಿಲ್ಲಾ ಕೇಂದ್ರ ಮಡಿಕೇರಿಯ ಅರಣ್ಯ ಭವನ ಬಳಿ ವಿದ್ಯುತ್ ಪ್ರಸರಣ ಕೇಂದ್ರ ಸಮೀಪ ವಿದ್ಯುತ್ ಕಂಬಗಳು ತುಂಡಾಗಿ 11 ಕೆ.ವಿ. ಮಾರ್ಗದಲ್ಲಿ ಸಮಸ್ಯೆ ಎದುರಾಗಿತ್ತು. ಗ್ರಾಮೀಣ ಭಾಗದ ಅನೇಕ ಕಡೆಗಳಲ್ಲಿ ಕೂಡ ಮರಗಳು ನೆಲಕಚ್ಚುವದ ರೊಂದಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹಲವೆಡೆ ಇನ್ನಷ್ಟೆ ದುರಸ್ಥಿ ಕೆಲಸ ಆಗಬೇಕಿದೆ.

ಇಲ್ಲಿನ ಚಾಮುಂಡೇಶ್ವರಿ ನಗರದಲ್ಲಿ ಬರೆಕುಸಿತದಿಂದ ನಾಲ್ಕೈದು ಮನೆಗಳಿಗೆ ಹಾನಿಯಾಗಿದ್ದು, ಸುಂಟಿಕೊಪ್ಪ, ಹರದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಏಳು ಮನೆಗಳಿಗೆ ಮಣ್ಣು ಕುಸಿತದಿಂದ ಹಾನಿಯಾಗಿದೆ. ಮರಂದೋಡ ಗ್ರಾಮದಲ್ಲಿ ಮರ ಬಿದ್ದು ಮನೆಯೊಂದಕ್ಕೆ ಜಖಂ ಆಗಿದೆ. ಕುಂಜಿಲ ಗ್ರಾಮದಲ್ಲಿ ಕೂಡ ಮನೆ ಮೇಲೆ ಮರ ಬಿದ್ದಿದ್ದು, ಎಲ್ಲಿಯೂ ಪ್ರಾಣಾಪಾಯ ಎದುರಾಗಿಲ್ಲ.

ಕೆ. ನಿಡುಗಣೆ, ಕಾಜೂರು, ಚಂಗಡಹಳ್ಳಿ ಮುಂತಾದೆಡೆ ರಸ್ತೆಗೆ ಅಡ್ಡಲಾಗಿ ಮರಬಿದ್ದರೆ, ಮಂಗಳೂರು ರಸ್ತೆಯಲ್ಲಿ ಮರ ಸಹಿತ ಬರೆ ಕುಸಿದು ಸಂಚಾರ ವ್ಯವಸ್ಥೆಗೆ ತೊಡಕು ಎದುರಾಗಿತ್ತು. ಹಗಲು 11 ಗಂಟೆ ಬಳಿಕ ವರುಣನ ಆರ್ಭಟ ಕಡಿಮೆಯಾಗಿ ವಿದ್ಯುತ್ ನಿಗಮ ಅಧಿಕಾರಿಗಳ ಸಹಿತ ತುರ್ತು ಸೇವೆಗೆ ಅವಕಾಶ ದೊರೆಯುವಂತಾಯಿತು.

ದೋಣಿ ಸೌಲಭ್ಯ : ಇನ್ನು ಭಾಗಮಂಡಲ - ತಲಕಾವೇರಿ ಮಾರ್ಗದ ನಾಲ್ಕೈದು ಕಡೆ ಬರೆ ಕುಸಿತದಿಂದ ಸಂಚಾರಕ್ಕೆ ತೊಡಕಾಗಿದ್ದರೂ, ಭಾಗಮಂಡಲ ದ್ವೀಪವಾಗಿದ್ದರಿಂದ ಹೆಚ್ಚಾಗಿ ವಾಹನಗಳ ಓಡಾಟವಿರಲಿಲ್ಲ. ಇನ್ನೂ ನಿತ್ಯ ಕೆಲಸ ಕಾರ್ಯಗಳಿಗೆ ಅಲ್ಲಿ ಅಗ್ನಿಶಾಮಕ ದಳ ಹಾಗೂ ಗೃಹರಕ್ಷಕ ಸಿಬ್ಬಂದಿಯಿಂದ ನಿರಂತರ 2 ದೋಣಿಗಳ ವ್ಯವಸ್ಥೆ ಕಲ್ಪಿಸಲಾಗಿತ್ತು.